ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ಕಲ್ಲಹಟ್ಟಿ ಗ್ರಾಮದಲ್ಲಿ ಅರಣ್ಯ ಇಲಾಖೆ ಹುಲಿ ಸೆರೆಹಿಡಿದಿದ್ದು, ವಾರಗಳ ಹಿಂದೆ ಬಾಲಕನನ್ನ ಬಲಿ ತೆಗೆದುಕೊಂಡಿದ್ದ ನರಭಕ್ಷಕ ಹುಲಿ ಇದೇನಾ ಎಂಬ ಅನುಮಾನ ಮೂಡಿದೆ.
ಹೆಚ್ ಡಿ ಕೋಟೆ ತಾಲೂಕು ಸಿದ್ದಾಪುರ ಗ್ರಾಮದಲ್ಲಿ ಎಂಟು ವರ್ಷದ ಗಂಡು ಹುಲಿಯನ್ನ ಅರಣ್ಯಾಧಿಕಾರಿಗಳು ಮಂಗಳವಾರ ಸೆರೆ ಹಿಡಿದಿದ್ದಾರೆ. ಮೇಟಿಕುಪ್ಪೆ ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ತಜ್ಞ, ವೈದ್ಯ ರಮೇಶ್ ನೇತೃತ್ವದಲ್ಲಿ ಸಾಕಾನೆಗಳ ಮೂಲಕ ಕಾರ್ಯಾಚಾರಣೆ ನಡೆಸಿ, ಹುಲಿ ಜಾಡು ಹಿಡಿದು ಅರಿವಳಿಕೆ ಚುಚ್ಚು ಮದ್ದು ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಉಪಟಳ ನೀಡುತ್ತಿದ್ದ, ಬಾಲಕನ ಬಲಿ ಪಡೆದಿದ್ದ ನರಹಂತಕ ಇದೇ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಹೆಚ್ ಡಿ ಕೋಟೆ ತಾಲ್ಲೂಕಿನ ಕಲ್ಲಹಟ್ಟಿ ಗ್ರಾಮದ ಕೃಷ್ಣನಾಯಕ್ ಎಂಬುವರ ಪುತ್ರ ಚರಣ್ ನಾಯಕ್ (7) ಎಂಬಾತನ್ನ ಹುಲಿ ಬಲಿ ಪಡೆದಿತ್ತು. ನಂತರ ಸೊಳ್ಳೇಪುರ ಗ್ರಾಮದಲ್ಲಿ ಹಸು ಹುಲಿಗೆ ತುತ್ತಾಗಿತ್ತು. ನಂತರ ಅಗಸನಹುಂಡಿಯಲ್ಲಿಯೂ ಮಗು ಬಲಿಯಾಗಿತ್ತು. ಸಹಜವಾಗಿ ಇಲಾಖೆ ಮೇಲೆ ಒತ್ತಡ ಹೆಚ್ಚಿತ್ತು. ಅರಣ್ಯ ಇಲಾಖೆ ವಿವಿಧೆಡೆ ಹುಲಿ ಸೆರೆಗೆ ಬೋನ್ ಇಟ್ಟು, ಸಾಕಾನೆಗಳಿಂದ ಪಹರೆ ನಡೆಸುತ್ತಿದ್ದರು.
ಬಾಲಕನನ್ನ ಬಲಿತೆಗೆದುಕೊಂಡ ಹುಲಿ ಇದೇ ಎಂದು ಸಾಬೀತು ಮಾಡಲು ಹಲವು ಮಾನದಂಡಗಳನ್ನ ಬಳಸಲಾಗುತ್ತೆ. ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಲ್ಪಟ್ಟ ಸಾಕ್ಷಾಧಾರಗಳು, ಉದಾಹರಣೆಗೆ ಹುಲಿಯ ಹೆಜ್ಜೆ (ಪಗ್ ಮಾರ್ಕ್) ಗುರುತು, DNA ಸ್ಯಾಂಪಲ್ ( ಜೀವಕೋಶ), ಕ್ಯಾಮೆರಾ ಟ್ರ್ಯಾಪ್ ಲ್ಲಿ ಸೆರೆಯಾಗಿದ್ದರೆ ಹುಲಿಯ ಮೇಲಿನ ಪಟ್ಟೆ ಗುರುತುಗಳನ್ನೆಲ್ಲಾ ಆಧರಿಸಿ ಉಪಟಳ ನೀಡುತ್ತಿದ್ದ ಹುಲಿ ಇದೇನಾ ಎಂದು ಹೇಳಬೇಕು. ಅಲ್ಲೀತನಕ ಈ ಭಾಗದಲ್ಲಿ ಓಡಾಡಿಕೊಂಡು ಭಯ ಮೂಡಿಸಿದ್ದ ನರಭಕ್ಷಕ ಹುಲಿ ಇದೇ ಎಂದು ಹೇಳಲು ಸಾಧ್ಯವಿಲ್ಲ.