ಸೆ.೩ರ ಭಾನುವಾರದಂದು ಚಿಕ್ಕಮಗಳೂರಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆನೂರು ಕುಂಚುಕಲ್ ರಸ್ತೆಯಲ್ಲಿ ರೈತರೊಬ್ಬರು ಆನೆದಾಳಿಗೆ ಮೃತರಾದರು. ಮೃತರ ಸಂಸ್ಕಾರ ಆಗಿ ಕೆಲ ಗಂಟೆಗಳಲ್ಲಿ ಅರಣ್ಯಾಧಿಕಾರಿಗಳು ಮಲಯಮಾರುತ ಗೆಸ್ಟ್‌ಹೌಸ್‌ನಲ್ಲಿ ಭರ್ಜರಿ ಬಾಡೂಟದ ಪಾರ್ಟಿ ಮಾಡಿರುವುದು ಜನರ ಕೋಪಕ್ಕೆ ಗುರಿಯಾಗಿದೆ. ಈ ಕುರಿತು ಚಿಕ್ಕಮಗಳೂರು ಮೂಲದ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದ್ದು ಅಧಿಕಾರಿಗಳು ಕ್ಯಾಮೆರಾ ಎದುರು ಒಪ್ಪಿಕೊಂಡಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ಆನೆ ದಾಳಿಗೆ ಅತೀ ಹೆಚ್ಚು ಸಾವು ಕಂಡಿರುವ ತಾಲೂಕು. ಏನಿಲ್ಲ ಎಂದರು ಕಳೆದೆರಡು ವರ್ಷದಲ್ಲಿ ಕನಿಷ್ಟ ಆರು ಮಂದಿ ಮೃತರಾಗಿದ್ಧಾರೆ. ಹಾಸನದಲ್ಲಿ ಆನೆ ಸೆರೆ ಹಿಡಿಯುವ ಸಮಯದಲ್ಲಿ ಇಲಾಖೆ ಶಾರ್ಪ್‌ಶೂಟರ್ ಹೆಚ್.ಎಚ್ ವೆಂಕಟೇಶ್ ಅರಿವಳಿಕೆ ಚುಚ್ಚುಮದ್ದು ನೀಡಲು ಹೋಗಿ ಮೃತರಾದ ಎರಡೇ ದಿನಕ್ಕೆ ಮೂಡಿಗೆರೆಯ ದುರ್ಗಾ ಹಳ್ಳಿಯ ಅರವತ್ತು ವರ್ಷದ ಕಿನ್ನಿ ಎಂಬುವರು ಆನೆ ದಾಳಿಗೆ ತುತ್ತಾಗಿದ್ದರು. ಬಡ ಕುಟುಂಬ ಶವಸಂಸ್ಕಾರ ಮಾಡಲೂ ಪರಿತಪಿಸುತ್ತಿತ್ತು. ಆದರೆ ಕೆಲ ಫಾರೆಸ್ಟ್ ಇಲಾಖೆ ಸಿಬ್ಬಂದಿ ಮೂಡಿಗೆರೆ ಆರ್‌ಎಫ್‌ಓ ವರ್ಗಾವಣೆ ಆಗಿದ್ದರಿಂದ ಕೊಟ್ಟಿಗೆಹಾರ ಸಮೀಪದ ಮಲಯಮಾರುತ ಗೆಸ್ಟ್‌ಹೌಸ್‌ನಲ್ಲಿ ಅಂದೇ ಪಾರ್ಟಿ ಇಟ್ಟುಕೊಂಡಿದ್ದರು ಎಂದು ಪಬ್ಲಿಕ್ ಇಂಪ್ಯಾಕ್ಟ್ ಸುದ್ದಿ ವಾಹಿನಿ ವರದಿ ಮಾಡಿದೆ.

ಈ ಸಂಬಂಧ ಸಿಸಿಎಫ್ ಉಪೇಂದ್ರ ಪ್ರತಾಪ್ ಸಿಂಗ್‌ರವರನ್ನ ಪ್ರಶ್ನಿಸಿದರೆ, ಇಂತಹ ಸಂದರ್ಭದಲ್ಲಿ ಅಧಿಕಾರಿಗಳ ವರ್ತನೆ ಸರಿ ಅಲ್ಲ. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಹಾಸನ, ಚಿಕ್ಕಮಗಳೂರು, ಮಡಿಕೇರಿ ಭಾಗದಲ್ಲಿ ಪ್ರತಿದಿನ ಆನೆದಾಳಿಗೆ ಜೀವಗಳು ಬಲಿಯಾಗುತ್ತಿದ್ದಾರೆ. ಜನ ಆತಂಕದಲ್ಲಿದ್ದಾರೆ. ಈ ವರ್ಷವಂತೂ ಕಾಡಿನಲ್ಲಿ ಚಿಗುರೇ ಇಲ್ಲ. ಹಾಗಾಗಿ ಆನೆಗಳೂ ಸಹ ಹೊಲ-ಗದ್ದೆಗಳನ್ನ ಇನ್ನಿಲ್ಲದಷ್ಟು ಧ್ವಂಸ ಮಾಡುತ್ತಿವೆ. ಅರಣ್ಯ ಅಧಿಕಾರಿಗಳ ಕಷ್ಟವೂ ಜನರಿಗೆ ತಿಳಿದಿದೆ. ಆದರೆ ಸಾವಿನ ದಿನ ಮೋಜು ಮಸ್ತಿ ಮಾಡುವ ಅಧಿಕಾರಿಗಳನ್ನ ಜನ ಕಂಡಿತಾ ಸಹಿಸೋದಿಲ್ಲ.