ಒಂದು ತಿಂಗಳಿನಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ಶಿವಮೊಗ್ಗದ ಮೃಗಾಲಯ & ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದ ಹಿಪ್ಪೋ ‘ಹಂಸಿನಿ’ ಇಂದು (ಏಪ್ರಿಲ್ 14, 2026) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಗರ್ಭಪಾತ ಹಾಗೂ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿನಿಯ ಸಾವು ವನ್ಯಜೀವಿ ಪ್ರೇಮಿಗಳಲ್ಲಿ ವಿಷಾದ ಮೂಡಿಸಿದೆ.
ಶನಿವಾರ (ಏಪ್ರಿಲ್ 11) ಹಂಸಿನಿ ಗರ್ಭದಲ್ಲೇ ಮರಿ ಮೃತಪಟ್ಟಿತ್ತು (Intrauterine death). ದೇಹದಾದ್ಯಂತ ವಿಷಕಾರಿ ಸೋಂಕು (Sepsis) ಹರಡಿತ್ತು. ಆಹಾರ ಸೇವಿಸದೇ ಕೃಶವಾಗಿತ್ತು. ಬನ್ನೇರುಘಟ್ಟದ ವೈದ್ಯ ಡಾ. ಆನಂದ್ ಹಾಗೂ ಮೈಸೂರು ಮೂಲದ ಮದನ್ ತಂಡ ಹಿಪ್ಪೋ ಉಳಿಸಲು ಪ್ರಯತ್ನಿಸಿದ್ದರು. ಡಾ.ಸಮೀಕ್ಷಾ ರೆಡ್ಡಿ ಮೃತಪಟ್ಟಾಗಲೇ ಘಾಸಿಯಾಗಿದ್ದ ಹಿಪ್ಪೋ ಚೇತರಿಕೆ ಕಾಣಲೇ ಇಲ್ಲ.!

ಮೈಸೂರು ಮೃಗಾಲಯದಿಂದ 2022 ರಲ್ಲಿ ಶಿವಮೊಗ್ಗಕ್ಕೆ ತರಲಾಗಿತ್ತು. ಇಲ್ಲಿಗೆ ಬಂದ ನಂತರ ಹಂಸಿನಿ ಮೂರು ಬಾರಿ ಗರ್ಭ ಧರಿಸಿತ್ತು. 2024 ರಲ್ಲಿ ಅದರ ಮೊದಲ ಮರಿಯನ್ನು ಗಂಡು ಮರಿಯೇ ಕೊಂದಿತ್ತು. 2025 ರಲ್ಲಿ ಎರಡನೇ ಮರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು. ಈಗ ಮೂರನೇ ಮರಿ ಗರ್ಭದಲ್ಲೇ ಮೃತಪಟ್ಟಿದೆ.
ಕಳೆದ ಮಾರ್ಚ್ 19 ರಂದು ಹಂಸಿನಿಯ ಆರೋಗ್ಯ ತಪಾಸಣೆ ನಡೆಸುತ್ತಿದ್ದ ತರಬೇತಿ ನಿರತ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ಹಂಸಿನಿ ದಾಳಿ ಮಾಡಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆ ಮರುದಿನ ಮೃತಪಟ್ಟಿದ್ದರು.
ಹಂಸಿನಿಯ ಸಾವು ಹಾಗೂ ವೈದ್ಯೆಯ ಬಲಿದಾನವು ನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಶಾಶ್ವತ ವನ್ಯಜೀವಿ ವೈದ್ಯರ ಕೊರತೆ, ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಇಷ್ಟೆಲ್ಲಾ ದುರಂತಗಳು ಸಂಭವಿಸಿವೆ ಎಂಬ ಆರೋಪ ಕೇಳಿಬರುತ್ತಿದೆ. ಹಂಸಿನಿಯ ಸಾವಿನೊಂದಿಗೆ ಒಂದು ದುರಂತ ಅಧ್ಯಾಯ ಅಂತ್ಯಗೊಂಡಿದೆ.







