ಶರಾವತಿ ಹಿನ್ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಶಿವಮೊಗ್ಗ ಜಿಲ್ಲೆ, ಸಾಗರದ ಮುಪ್ಪಾನೆ ಲಾಂಚ್ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ.
ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಶರಾವತಿ ಹಿನ್ನೀರು ಭಾಗದ ಹಲ್ಕೆ – ಮುಪ್ಪಾನೆ ಲಾಂಚ್ ಸಂಚರಿಸುತ್ತಿತ್ತು. ಲಾಂಚ್‌ಗೆ ಮರದ ದಿಮ್ಮಿಗಳು, ಮರಳಿನ ದಿಬ್ಬ ತಗುಲುತ್ತಿದೆ. ನೀರಿನ ಮಟ್ಟ ಕುಸಿತದಿಂದಾಗಿ ಈ ರೀತಿಯಾಗಿದೆ. ಶರಾವತಿ ಹಿನ್ನೀರು ಭಾಗದಲ್ಲಿ ಈವರೆಗೆ ವಾಡಿಕೆ ಮಳೆಯಾಗಿಲ್ಲ. ಮುಂಗಾರು ಬಿರುಸಾದರೆ ನೀರಿನ ಮಟ್ಟ ಹೆಚ್ಚಳವಾಗಲಿದೆ. ಆಗ ಲಾಂಚ್ ಪುನಾರಂಭ ಮಾಡಬಹುದು. ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾದರೆ ಮರದ ದಿಮ್ಮಿಗಳು, ಮರಳಿನ ದಿಬ್ಬಗಳು ಲಾಂಚ್ ಕೆಳ ಭಾಗಕ್ಕೆ ತಗುಲಲಿವೆ. ಇದರಿಂದ ಲಾಂಚ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಲಿದೆ. ಲಾಂಚ್ ಮತ್ತು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Ferry service has been stopped after Sharavathi backwater depleted at Muppane of Sagar Taluk, Shivamogga district.