ಚಿಕ್ಕಮಗಳೂರು ಭದ್ರಾ ಹಿನ್ನೀರಿನುದ್ದಕ್ಕೂ ಚಾಚಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿನಾಶ ಅವ್ಯಾಹತವಾಗಿ ಸಾಗಿದೆ. ಜಿಲ್ಲೆಯ ಅರಣ್ಯಾಧಿಕಾರಿಗಳ ನಿರಾಸಕ್ತಿಗೆ ಉಳ್ಳವರ ದೌರ್ಜನ್ಯಕ್ಕೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ಭದ್ರಾ ಅಭಯಾರಣ್ಯದೊಳಗಿನ ಸರ್ಕಲ್‌ಗಳ ಆರ್ ಎಫ್ ಓ ಗಳೇ ಮುಂದೆ ನಿಂತು ವಿನಾಶಕ್ಕೆ ಎಡೆ ಮಾಡಿಕೊಡುತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ಘಟನೆಯೊಂದು ನಡೆದಿದೆ.
ಕೊಪ್ಪ ಅರಣ್ಯ ವಿಭಾಗ, ನರಸಿಂಹರಾಜಪುರ, ನೆಲಗದ್ದೆ ಗ್ರಾಮ ಆರಂಬಳ್ಳಿಯ ಸರ್ವೇ ನಂಬರ್ ೭೪ರಲ್ಲಿ ಈ ಭಾಗದ ಪ್ರಭಾವಿ ವ್ಯಕ್ತಿಗಳು ರಾಜಾರೋಷವಾಗಿ ಹಿಟಾಚಿ ಬಳಸಿ ನೀರಿನ ಪೈಪ್ ಅಳವಡಿಸಿದ್ದಾರೆ. ಹಿಟಾಚಿ ಸಾಗಿರುವ ಉದ್ದಕ್ಕೂ ಕಿರು ಸಂರಕ್ಷಿತ ಅರಣ್ಯದಲ್ಲಿ ಮರ-ಗಿಡಗಳ ನಾಶವಾಗಿದೆ. ಹಲವು ಮರಗಳ ತೊಗಟೆಗಳಿಗೆ ಹಾನಿ ಮಾಡಿದ್ದಾರೆ. ಇಲ್ಲಿ ಕಿಲೋಮೀಟರ್‌ಗಳಷ್ಟು ದೂರ ಅಳವಡಿಸಿರುವ ಪೈಪ್ ಗಳಿಂದ ಭದ್ರಾ ಹಿನ್ನೀರು ಎತ್ತಲಾಗುತ್ತಿದೆ. ಈ ಪ್ರದೇಶವೂ ಸಹ ಮಾನವ ಅತಿಕ್ರಮಣಕ್ಕೆ ನಿಷೇಧಿತ..! ಇಷ್ಟು ರಾಜಾರೋಶವಾಗಿ ಪೈಪ್ ಲೈನ್ ಕಾಮಗಾರಿ ಮುಗಿಸಿದರೂ ಸಹ ತಡೆಯದೇ ಫೋಟೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ತರಾತುರಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ ಅಧಿಕಾರಿಗಳು, ಬೈರಾಪುರ ಗ್ರಾಮದ ರೇವಂತ್ ಗೌಡ ಹಾಗೂಮಂಜುನಾಥ್, ಉಂಬ್ಳೇಬೈಲು ಗ್ರಾಮದ ಹರೀಶ್ ಹಾಗೂ ಮಂಜುನಾಥ್ ಗೌಡ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹೆಚ್ಚೇನು ಪೈಪ್ ಗಳನ್ನ ಹಾಕಿಲ್ಲ, ಎಲ್ಲವನ್ನೂ ತೆರವುಗೊಳಿಸಿದ್ದೇವೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಸಾಕ್ಷಿಗಳಾಗಿ ಈ ಭಾಗದ ಗಸ್ತು ಅರಣ್ಯ ಪಾಲಕರಾದ ರಜನೀಶ್ ಹಾಗೂ ಸಂದೀಪ್ ಎಬುವರನ್ನ ಹೆಸರಿಸಿದ್ದಾರೆ. ಈ ಗಸ್ತು ಪಾಲಕರ ಅರಿವಿಗೇ ಬಾರದಂತೆ ಕಾಮಗಾರಿ ಆರಂಭವಾಗಿದೆಯೇ ಅಥವಾ ರಾತ್ರೋರಾತ್ರಿ ಇವರ ಕಣ್ಣು ತಪ್ಪಿಸಿ ಅಗಳ ಹೊಡೆಯಲಾಗಿದೆಯೇ ಎಂಬ ಸಹಜ ಅನುಮಾನ ನಮಗೆ ಮೂಡುತ್ತದೆ.
ಈ ಘಟನೆ ಬಗ್ಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರಿಗೂ ಮಾಹಿತಿ ಹೋಗಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶ ನೀಡದೇ ಹೋದರೆ ಭದ್ರಾ ಸಂರಕ್ಷಿತ ಅರಣ್ಯ ವೇಗವಾಗಿ ವಿನಾಶದತ್ತ ಸಾಗಲಿದೆ.