Ode to the west wind

Join Us on WhatsApp

Connect Here

ಮೃತ ಅರ್ಜುನನ ಹೆಸರಲ್ಲಿ ಸ್ಮಾರಕ ನಿರ್ಮಾಣ: ಈಶ್ವರ ಖಂಡ್ರೆ

WhatsApp
Facebook
Twitter
LinkedIn

ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಆನೆ ಕಾರ್ಯಾಚರಣೆ ವೇಳೆ ಪುಂಡಾನೆಯ ಜೊತೆ ಕಾದಾಡಿ ಮಡಿದ ಕ್ಯಾಪ್ಟನ್, ಸೀನಿಯರ್, ಬಲಭೀಮ ಎಂದೇ ಖ್ಯಾತವಾಗಿದ್ದ ಹಾಗೂ ಮೈಸೂರಿನ ಜಗದ್ವಿಖ್ಯಾತ ದಸರಾ ಜಂಬೂಸವಾರಿಯಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಸ್ಮಾರಕವನ್ನು ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅರ್ಜುನನ ಸಾವಿನ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅವರು, ನಾಡಿನ ಜನರ ಪ್ರೀತಿಗೆ ಪಾತ್ರನಾಗಿದ್ದ ಅರ್ಜನನ ಸಾವು ಅತ್ಯಂತ ದುಃಖದಾಯಕ. ಅರ್ಜನ ಮತ್ತು ನಾಡಿನ ಜನತೆಯ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಈ ಆನೆ ಸಾವು ನಾಡಿನಾದ್ಯಂತ ಇರುವ ಪ್ರಾಣಿ ಪ್ರಿಯರಿಗೆ ಮತ್ತು ಸಾರ್ವಜನಿಕರಿಗೆ ನೋವು ತಂದಿದೆ.
ಹಲವು ಹುಲಿ, ಆನೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಅರ್ಜುನನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು, ಅರ್ಜುನ ಸೇವೆಯನ್ನು ನಾಡಿನ ಜನರು ಸದಾ ಸ್ಮರಿಸುವಂತೆ ಹಾಸನ ಮತ್ತು ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಿಬ್ಬಂದಿಗೆ ತರಬೇತಿ

ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಮೃಗಗಳೂ ಸಾವಿಗೀಡಾಗುತ್ತಿರುವುದು ಆಂತಕದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಪಡೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದ, ಕೊಠಡಿ ಸಂಖ್ಯೆ 318ರಲ್ಲಿ ನಡೆದ ಸಭೆಯಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರುಗಳಾದ ಕೆ.ಜೆ. ಜಾರ್ಜ್, ಬೋಸರಾಜ್ ಮತ್ತು ಕೆ.ಎನ್. ರಾಜಣ್ಣ ಹಾಗೂ ಮೂರೂ ಜಿಲ್ಲೆಗಳ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ 9 ಜಿಲ್ಲೆಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಾರದಲ್ಲಿ ಕನಿಷ್ಠ 2 ದಿನ ನಿಯೋಜಿತ ಜಿಲ್ಲೆಯಲ್ಲೇ ಉಳಿದು ಪರಿಸ್ಥಿತಿಯನ್ನು ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆನೆ ನಾಡಿಗೆ ಬಾರದಂತೆ ತಡೆಯಲು ನಮ್ಮ ಬಳಿ ಇರುವ ಉತ್ತಮ ಮಾರ್ಗೋಪಾಯ ಎಂದರೆ ರೈಲ್ವೆ ಬ್ಯಾರಿಕೇಡ್ ಆಗಿದೆ. ಆದರೆ ಇದು ಒಂದೆರಡು ವರ್ಷದಲ್ಲಿ ಆಗುವ ಕೆಲಸವಲ್ಲ. ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಆನೆ ಹಾವಳಿ ಹೆಚ್ಚಾಗಿರುವ ಕಡೆ ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ವಹಿಸಲಾಗಿದೆ. ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದರು.
ಕಳೆದ ಏಪ್ರಿಲ್ ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನರು ಮಾನವ -ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7,  ಚಿಕ್ಕಮಗಳೂರು ಹಾಗೂ ರಾಮನಗರ 3,  ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ 2, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದರು.

ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಜಾರ್ಜ್ ಸಲಹೆ: 

ಆನೆಗಳ ಸ್ಥಳಾಂತರ ಕಷ್ಟಸಾಧ್ಯವಾದ ಕೆಲಸ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡೊಳಗೆ ಆಹಾರ ಸಿಗುತ್ತಿಲ್ಲ ಎಂಬ ದೂರಿದೆ. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ, ಆದರೆ ಆ ಸಂಖ್ಯೆ ಹೆಚ್ಚಿಸಬೇಕು. ಪುಂಡಾನೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಸಲಹೆ ನೀಡಿದರು.

ಸಚಿವ ಬೋಸರಾಜ್ ಹೇಳಿಕೆ.

ಆನೆಯಿಂದ ಹೆಚ್ಚಿನ ಸಾವು ಸಂಭವಿಸಿದೆ. ವೈಜ್ಞಾನಿಕವಾಗಿ ವಿದ್ಯುತ್ ತಂತಿ ಬೇಲಿ ಹಾಕಿದರೂ ಅತ್ಯಂತ ಬುದ್ಧವಂತಿಕೆಯಿಂದ ಆನೆ ದಾಟಿ ಬರುತ್ತದೆ. ಹೀಗಾಗಿ ಆನೆ ತಡೆಯಲು ವ್ಯವಸ್ಥೆ ರೂಪಿಸಬೇಕಾಗುತ್ತದೆ. ಬೆಳೆ ಹಾನಿ ಹೆಚ್ಚಾಗುತ್ತಿದೆ. ಕಾಫಿ ತೋಟಗಳಲ್ಲಿ ಆನೆಗಳು ಉಳಿಯುತ್ತಿವೆ. ಹೀಗಾಗಿ ಆನೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದರು.

ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್, ಶಾಸಕರುಗಳಾದ ಸಿಮೆಂಟ್ ಮಂಜು, ನಯನ ಮೋಟಮ್ಮ, ರಾಜೇಗೌಡ, ಸುರೇಶ್, ಎಸ್.ಎ. ಬೋಪಣ್ಣ, ಶ್ರೀನಿವಾಸ್, ಮಂಥರ್ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆನೆಗಳ ಜೊತೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ. ಜನ ಭಯ ಭೀತಿಯಿಂದ ಬದುಕುವಂತಾಗಿದೆ. ನಾವು ಕ್ಷೇತ್ರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳಲೇಬೇಕು ಜೊತೆಗೆ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ದೊರಕಿಸಲು ಈ ಅಧಿವೇಶನದಲ್ಲೇ ಚರ್ಚಿಸಿ ತೀರ್ಮಾ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

You Might Also Like This