ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ, ಚಿಕ್ಕನಹಳ್ಳಿ ಮೀಸಲು ಅರಣ್ಯ ಹಾಗೂ ಅದರ ಸುತ್ತಲ ಗ್ರಾಮಗಳ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಹುಲಿಯನ್ನ ಸೆರೆಹಿಡಿಯಲಾಗಿದೆ.
ಚಿರತೆ ಕಾರ್ಯಪಡೆಯೊಂದಿಗೆ ಟ್ರಾಪ್, ನೆಟ್ವರ್ಕ್, ಐ.ಆರ್. ಕ್ಯಾಮೆರಾಗಳು, ರಕ್ಷಣಾ ಸಲಕರಣೆಗಳು ಹಾಗೂ ಬೋನುಗಳನ್ನ ಬಳಸಿಕೊಂಡು ನ. 29 ರಿಂದ ಕಾರ್ಯಾಚರಣೆ ನಡೆಸಲಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಹುಲಿ ಇರುವಿಕೆ ಖಚಿತಗೊಂಡಿರುವ ಸ್ಥಳಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಾರ್ವಜನಿಕ ಪ್ರಚಾರದ ಮೂಲಕ ತಿಳಿಸಲಾಗಿತ್ತು. Wildlife Advance Alert System (WAAS) ತುರ್ತು ಸಂದೇಶಗಳನ್ನು ಕಳುಹಿಸುವ ಮೂಲಕ ಜನರನ್ನು ಎಚ್ಚರಿಸಲಾಗುತ್ತಿತ್ತು. ಕಾರ್ಯಾಚರಣೆಯ ಅಂಗವಾಗಿ ಚಿಕ್ಕನಹಳ್ಳಿ ಮೀಸಲು ಅರಣ್ಯದಲ್ಲಿ ನೂತನವಾಗಿ ವಿನ್ಯಾಸಗೊಳಿಸಿ ಅಳವಡಿಸಲಾಗಿದ್ದ WALKTHROUGH ಬೋನಿನೊಳಗೆ ಸಿಲುಕಿದ ಹುಲಿ ಸುಮಾರು 5 ವರ್ಷದ ಗಂಡು. ಹುಲಿಯ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿಗಳು ನಡೆಸಿದ್ದು ಹುಲಿಯು ಸದೃಢವಾಗಿರುವುದಾಗಿ ದೃಢೀಕರಿಸಿರುತ್ತಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಸದರಿ ಹುಲಿಯನ್ನು ಸೂಕ್ತ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗಿರುತ್ತದೆ.
