ನಮ್ಮ ದೇಶದ, ಈ ನೆಲದ ಅದೆಷ್ಟೋ ರಾಜ ಮತ್ತು ರಾಣಿಯರ ಇತಿಹಾಸ, ಪರಂಪರೆ, ವೈಭವ ಮತ್ತು ಕೊಡುಗೆಗಳನ್ನು ನಾವು ಮರೆಯುತ್ತಿರುವುದು ಬಹಳ ಬೇಸರದ ಸಂಗತಿ. ಇದಕ್ಕೆ ಹಲವು ಕಾರಣಗಳಿವೆ.
ಅದರಲ್ಲಿ ಬಹಳ ಮುಖ್ಯವಾಗಿ ರಾಜಕೀಯ ಹಿತಾಸಕ್ತಿ ಮತ್ತು ಬ್ರಿಟಿಷ್, ಉತ್ತರ ಭಾರತೀಯ ಪ್ರಭಾವಿತ ಇತಿಹಾಸ ಅವಲಂಬನೆ. ಉತ್ತರ ಭಾರತೀಯ ಅರಸರು ಮತ್ತು ರಾಣಿಯರಿಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೈಭವೋಪೇತವಾಗಿ ಆಡಳಿತ ಮಾಡಿದ ನಮ್ಮ ನೆಲದ ರಾಜರು ಮತ್ತು ರಾಣಿಯರ ಇತಿಹಾಸವನ್ನು ಮಕ್ಕಳಿಗೆ ಶಿಕ್ಷಣದಲ್ಲಿ ಹೇಳಿಕೊಡುವ ವ್ಯವಸ್ಥೆಯಿಲ್ಲ..!

೧೬ನೇ ಶತಮಾನದಲ್ಲಿ ಹೈವಾ, ತುಳುನಾಡು ಮತ್ತು ಕೊಂಕಣ ಹಾಗೂ ಘಟ್ಟದ ಮೇಲಣ ಮಲೆನಾಡಿನ ಪ್ರದೇಶವನ್ನು ಒಂದಲ್ಲ ಎರಡಲ್ಲ ಬರೋಬರಿ ೫೪ ವರ್ಷಗಳ ಕಾಲ ಆಳ್ವಿಕೆ ಮಾಡಿದ ಕೀರ್ತಿ ರಾಣಿ ಚೆನ್ನಾಭೈರಾದೇವಿಗೆ ಸಲ್ಲುತ್ತದೆ. ನಮ್ಮ ಭರತಖಂಡದಲ್ಲಿ ಅತಿ ಸುದೀರ್ಘ ಕಾಲ ರಾಜ್ಯಭಾರ ಮಾಡಿದ ಹೆಮ್ಮೆಗೆ ಪಾತ್ರವಾಗುತ್ತಾಳೆ ರಾಣಿ ಚೆನ್ನಾಭೈರಾದೇವಿ. ಆದರೆ ವಿಪರ್ಯಾಸವೆಂದರೆ ಅವಳ ಬಗ್ಗೆ ಹೇಳಿಕೊಳ್ಳುವಷ್ಟು ಸಂಶೋಧನೆಗಳು ಸಾಧ್ಯವಾಗಿಲ್ಲ. ಇತ್ತೀಚೆಗೆ ಶ್ರೀ ಗಜಾನನ ಶರ್ಮ ಅವರ ಕಾದಂಬರಿ “ಚೆನ್ನಭೈರಾದೇವಿ – ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆ” ಈ ರಾಣಿಯ ಇತಿಹಾಸವನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದೆ. ನಮ್ಮ ದೇಶಕ್ಕೆ ಬ್ರಿಟಿಷರಗಿಂತ ಮೊದಲೇ ೧೪೯೮ರಲ್ಲಿ ಬಂದು ಅವರು ಈ ದೇಶ ಬಿಟ್ಟು ೧೪ ವರ್ಷಗಳ ನಂತರ ಅಂದರೆ ೧೯ ಡಿಸೆಂಬರ್ ೧೯೬೧ರಲ್ಲಿ ಭಾರತವನ್ನು ತೊರೆದ ಫೋರ್ಚುಗೀಸ್ ಜೊತೆಗೆ ರಾಣಿ ಚೆನ್ನಾಭೈರಾದೇವಿ ಕೈಗೊಂಡ ಯುದ್ಧಗಳು ಈ ನೆಲದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಬಿಂಬಿಸ ಬೇಕಾಗಿತ್ತು. ಆದರೆ ವಾಸ್ತವದಲ್ಲಿ ಈ ಮಹಾನ್ ರಾಣಿಯನ್ನೇ ನಾವು ಮರೆತಿದ್ದೇವೆ.
ಗೇರುಸೊಪ್ಪವನ್ನು ಶಾಸನಗಳಲ್ಲಿ ನಗಿರೆ, ಗೆರಸಪ್ಪ ಮತ್ತು ಗೇರುಸೊಪ್ಪ ಎಂದು ಕರೆಯಲಾಗಿದೆ. ಸಾಹಿತ್ಯ ಮತ್ತು ಸ್ಥಳೀಯ ಪುರಾಣಗಳಲ್ಲಿ ಇದನ್ನು ಕ್ಷೇಮಪುರ ಮತ್ತು ಭಲ್ಲಟಕಿಪುರ ಎಂದು ಕರೆಯಲಾಗಿದೆ. ಇನ್ನೂ ಅಂದಿನ ಕಾಲದಲ್ಲಿ ಸಮುದ್ರ ವ್ಯಾಪಾರಕ್ಕೆ ಪ್ರತಿಕೂಲವಾದ ಮತ್ತು ನೈಸರ್ಗಿಕ ಹಾಗೂ ಭೌಗೋಳಿಕ ದೃಷ್ಟಿಕೋನದಿಂದ ಸೂಕ್ತವಾದ ಪ್ರದೇಶವನ್ನೇ ರಾಜಧಾನಿ ಮಾಡಿಕೊಂಡಿದ್ದ ಗೇರುಸೊಪ್ಪ ಸಂಸ್ಥಾನಕ್ಕೂ ಕರ್ಣಾಟ (ವಿಜಯನಗರ) ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧ ಇತ್ತು. ಇನ್ನೂ ಕರಾವಳಿಯ ಪರಂಪರೆಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿದ್ದ ಅಳಿಯ ಸಂತಾನ ಸಂಸ್ಕೃತಿಯ ಪ್ರಭಾವದಿಂದ ಈ ನೆಲ ಸಾಕಷ್ಟು ರಾಣಿಯರ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಹೈವಾ, ತುಳುನಾಡು, ಕೊಂಕಣ (ಕರ್ಣಾಟಕ) ಮತ್ತು ಮಲೆನಾಡು ಪ್ರದೇಶಗಳನ್ನು ಆಳುತ್ತಾ ನೆರೆಯ ಆದಿಲ್ ಶಾಹಿ, ಬಾರಕೂರು ರಾಜರು, ಕೆಳದಿ ನಾಯಕರು, ಸೊಂದೆ ಅರಸರು, ಬಿಳಗಿ ಅರಸರು ಮತ್ತು ಫೋರ್ಚುಗೀಸ್ ಜೊತೆಗೆ ಸೆಣಸಾಡುತ್ತಾ ೫೪ ವರ್ಷಗಳ ಕಾಲ ಆಳ್ವಿಕೆ ಮಾಡಿದ ರಾಣಿ ಚೆನ್ನಾಭೈರಾದೇವಿ ಕೆಲವು ಸಂದರ್ಭಗಳಲ್ಲಿ ಕರ್ಣಾಟ (ವಿಜಯನಗರದ) ರಾಯರ ವಿರುದ್ಧವೂ ಗಟ್ಟಿ ನಿಲವು ತೆಗೆದುಕೊಂಡ ಬಗ್ಗೆ ಮಾಹಿತಿ ಸಿಗುತ್ತದೆ.

ಕೇವಲ ೧೬ನೇ ವಯಸ್ಸಿಗೆ ರಾಣಿಯಾದ ಇಂತಹ ರಾಣಿ ಹೇಗಿದ್ದಳು ಎಂಬ ಸಹಜ ಪ್ರಶ್ನೆ ಮತ್ತು ಕುತೂಹಲ ಎಲ್ಲರಲ್ಲೂ ಸಾಮಾನ್ಯವಾಗಿ ಇರುತ್ತದೆ. ಈ ಆಸೆಯನ್ನು ಸಹಕಾರ ಗೊಳಿಸಲು ನಮಗೆ ಒಂದು ಸಣ್ಣ ಸುಳಿವು ಸಿಗುತ್ತದೆ ಅದೇನೆಂದರೆ ಹತ್ತು ವರ್ಷಗಳ ಕೆಳಗೆ ಅಂದಿನ ರಾಜಧಾನಿ ನಗಿರೆಯಲ್ಲಿ ಕಟ್ಟಡ ಪಾಯವನ್ನು ತೋಡುವಾಗ ಒಂದು ಪುಟ್ಟ ವಿಗ್ರಹ ಸಿಗುತ್ತದೆ, ಇದನ್ನು ಸ್ಥಳೀಯರು ನೋಡುತ್ತಲೆ ಇದು ರಾಣಿ ಚೆನ್ನಾಭೈರಾದೇವಿಯ ವಿಗ್ರಹ ಎಂದು ಖುಷಿಯಿಂದ ಸಂಭ್ರಮ ಪಡುತ್ತಾರೆ. ಆದರೆ ಕೆಲವು ಇತಿಹಾಸಕಾರರು ಈ ವಿಗ್ರಹ ರುಕ್ಮಿಣಿದೇವಿಯ ವಿಗ್ರಹವಾಗಿದ್ದು ಇದು ರಾಣಿಯ ವಿಗ್ರಹ ಅಲ್ಲಾ ಎಂದು ಅಭಿಪ್ರಾಯ ಪಡುತ್ತಾರೆ. ಒಮ್ಮೆಲೆ ನೋಡಿದಾಗ ಯಾರಿಗಾದರೂ ಇದು ರುಕ್ಮಿಣಿದೇವಿಯ ವಿಗ್ರಹ ತರಹ ಕಾಣಿಸುತ್ತದೆ ಆದರೆ ಪ್ರತಿಮಶಾಸ್ತ್ರದ ಪ್ರಕಾರ ಬಹಳ ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಿದರೆ ಇದು ರುಕ್ಮಿಣಿದೇವಿಯ ವಿಗ್ರಹ ಅಲ್ಲಾ ಎಂದು ಸಾಬೀತು ಮಾಡಬಹುದು. ರುಕ್ಮಿಣಿದೇವಿಯ ವಿಗ್ರಹದಲ್ಲಿ ಮೂರು ಅಂಶಗಳು ಬಹಳ ಪ್ರಮುಖ – (೧) ಎರಡು ಕೈ ಸೊಂಟದ ಮೇಲೆ ಇದ್ದರೂ ಎಡಗೈಯಿನ ಎಲ್ಲಾ ಬೆರಳುಗಳು ಮುಂದಕ್ಕೆ ಮುಖ ಮಾಡಿರುವ ಹಾಗೆ ಸೊಂಟದ ಮೇಲೆ ಇದ್ದರೆ ಅತ್ತಾ ಬಲ ಗೈಯಿನ ಎಲ್ಲಾ ಬೆರಳುಗಳು ನೆಲಕ್ಕೆ ಮುಖ ಮಾಡಿ ಸೊಂಟದ ಮೇಲೆ ಇರುತ್ತದೆ, (೨) ಕಚ್ಚೆ ಸೀರೆ ಮತ್ತು (೩) ತಲೆಯ ಮೇಲೆ ಹೂವಿನ ದಂಡೆಯ ಅಲಂಕಾರ. ಆದರೆ ಇದ್ಯಾವುದು ಈ ವಿಗ್ರಹದಲ್ಲಿ ಕಾಣಲು ಸಿಗುವುದಿಲ್ಲ ಹಾಗಾಗಿ ಇದು ರುಕ್ಮಿಣಿದೇವಿಯ ವಿಗ್ರಹ ಅಲ್ಲ ಎಂದು ಹೇಳಬಹುದು.
ರಾಣಿ ಚೆನ್ನಾಭೈರಾದೇವಿಯ ವಿಗ್ರಹ ಎಂದು ಹೇಳಲು ಪಡುವ ಈ ವಿಗ್ರಹ ಮೂಲಕ ಅದರ ಹಾವ ಭಾವ ಮತ್ತು ಭಂಗಿಯ ಆಧಾರದ ಮೇಲೆ ರಾಣಿಯ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸೋಣ. ಎರಡೂವರೆ ಇಂಚು ಉದ್ದ ಮತ್ತು ಒಂದು ಇಂಚು ಅಗಲ, ನಿಂತಿರುವ ಭಂಗಿಯಲ್ಲಿ ಇರುವ ಈ ವಿಗ್ರಹದ ಆಧಾರದ ಮೇಲೆ ರಾಣಿಯ ಬಗ್ಗೆ ತಿಳಿದು ಕೊಳ್ಳುವ ಪ್ರಯತ್ನ ಮಾಡೋಣ.
(೧) ರಾಣಿಯ ಎರಡು ಕೈಗಳು ಸೊಂಟದ ಮೇಲೆ ಇದ್ದು ಇದನ್ನು ಆಂಗ್ಲ ಭಾಷೆಯಲ್ಲಿ “Hands on Hip Posture” ಎಂದು ಕರೆಯುತ್ತಾರೆ. ಇದರಲ್ಲಿ ಹಲವಾರು ರೀತಿಯ ಭಂಗಿ ಇದ್ದು ಈ ವಿಗ್ರಹದಲ್ಲಿ ಎರಡು ಕೈಗಳ ಎಲ್ಲಾ ಬೆರಳುಗಳು ಮುಂದಕ್ಕೆ ಮುಖ ಮಾಡಿದ್ದು ಇದು ಶಕ್ತಿ, ಅಧಿಕಾರ ಮತ್ತು ಆತ್ಮ ವಿಶ್ವಾಸವನ್ನು ಸೂಚಿಸುತ್ತದೆ. ಸೌಂದರ್ಯ ಸ್ಪರ್ಧೆಗಳಲ್ಲಿ ವಿಶ್ವ ಸುಂದರಿಗಳು ವೇದಿಕೆಯ ಮೇಲೆ ಇದೇ ಭಂಗಿಯಲ್ಲಿ ನಿಲ್ಲಲು ಕಲಿಸಲಾಗಿರುತ್ತದೆ ಆದರೆ ನಮ್ಮ ರಾಣಿಗೆ ಇದು ರಕ್ತಗತವಾಗಿ ಬಂದಿರುವ ವ್ಯಕ್ತಿತ್ವ.
(೨) ೧೬ ಮೊಳದ ಸೀರೆ, ಅದರ ಸೆರಗಿನಲ್ಲಿ ಇರುವ ಸುಂದರ ಕಸೂತಿ ಕೆಲಸ ಮತ್ತು ರವಿಕೆ ಈ ನೆಲದ ಸಂಸ್ಕೃತಿಗೆ ಅನುಗುಣವಾಗಿದೆ.
(೩) ಕೊರಳಿನಲ್ಲಿ ಎರಡು ಸಾಲಿನ ಪಾರಂಪರಿಕ ಕಾಸಿನ ಸರ, ಕಾಲಿನಲ್ಲಿ ಇರುವ ಕಡಗ ರೀತಿಯ ಆಭರಣ, ಕೈಯಲ್ಲಿ ಇರುವ ದಪ್ಪ ಗಾತ್ರದ ಬಳೆ ಎಲ್ಲವೂ ಅಂದಿನ ಕಾಲದ ಪಾರಂಪರಿಕ ಆಭರಣಗಳನ್ನು ಹೋಲುತ್ತದೆ. ಇನ್ನೂ ಕಿವಿಯ ಆಕೃತಿಯ ಕರ್ಣಕುಂಡಲ ಬಹಳ ವಿಶೇಷವಾಗಿದೆ. ತುಳುನಾಡು ಪ್ರದೇಶಗಳಲ್ಲಿ ಈ ರೀತಿಯ ಕಿವಿಯೋಲೆಗಳನ್ನು “ಕರೋಲಿ” ಎಂದು ಕರೆಯಲ್ಪಡುತ್ತಿದ್ದು ಇದನ್ನು ರಾಜ ಮನೆತನ, ಶ್ರೀಮಂತ ಮನೆತನದ ಹೆಣ್ಣು ಮಕ್ಕಳು ಮಾತ್ರ ಧರಿಸುತ್ತಿದ್ದರು. ಆದರೆ ಇತ್ತೀಚೆಗೆ ಇದು ಮಾಯವಾಗಿದೆ.
(೪) ರಾಣಿಯ ತುರುಬು ಈ ನೆಲದ ಸ್ಥಳೀಯ ಶೈಲಿಗೆ ಅನುಗುಣವಾಗಿದೆ.
(೫) ಈ ವಿಗ್ರಹದ ಹಾವಭಾವಗಳನ್ನು ಗಮನಿಸಿದರೆ ರಾಣಿಯ ಇಳಿ ವಯಸ್ಸಿನಲ್ಲಿ ಅಂದರೆ ಅವಳ ಜೀವನದ
ಕೊನೆಯ ಕಾಲಘಟ್ಟದಲ್ಲಿ ಇದನ್ನು ಕೆತ್ತಲಾಗಿದೆ. ವಿಗ್ರಹದ ಆಧಾರದ ಮೇಲೆ ನಾವು ರಾಣಿ ಚೆನ್ನಾಭೈರಾದೇವಿಯು ಅತ್ಯಂತ ಶಕ್ತಿಯುತ ವ್ಯಕ್ತಿತ್ವವನ್ನು ಹೊಂದಿದ್ದು ಇದು ಅವಳ ಶತ್ರುಗಳ ಎದೆಯಲ್ಲಿ ನಡುಕವನ್ನು ಉಂಟುಮಾಡುತ್ತಿತ್ತು ಎಂದು ಹೇಳ ಬಹುದು.

ಬರಹ: ಅಜಯ್ ಕುಮಾರ್ ಶರ್ಮಾ, ಇತಿಹಾಸಜ್ಞ