Ode to the west wind

Join Us on WhatsApp

Connect Here

ಮರಳು ದಂಧೆ ಅವ್ಯಾಹತ, ಪಶ್ಚಿಮಘಟ್ಟದ ನದಿಗಳ ದಂಡೆಗಳು ನಾಶ: ಲೋಕಾಯುಕ್ತಕ್ಕೆ ಮೊರೆ

WhatsApp
Facebook
Twitter
LinkedIn

ಹೊಸನಗರ: ಮರಳು ಗಣಿಗಾರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಜೀವನದಿಗಳ ಒಡಲು ಬಗೆದು ಅವ್ಯಾಹತವಾಗಿ ಮರಳನ್ನ ಸಾಗಿಸುತ್ತಿದ್ದರೂ ಸಹ ಜಿಲ್ಲಾಡಳಿತ ಕಠಿಣ ಕ್ರಮಗಳನ್ನೇನೂ ತೆಗೆದುಕೊಂಡಿಲ್ಲ. ಪ್ರತೀ ಸರ್ಕಾರದಲ್ಲೂ, ಪಕ್ಷಾತೀತವಾಗಿ ಮರಳು ಲೂಟಿ ಹೊಡೆಯುವ ಕಳ್ಳರನ್ನ ಅಧಿಕಾರಿಗಳು ಪರೋಕ್ಷವಾಗಿ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ದಾಖಲೆ ಸಮೇತ ದೂರು ನೀಡಿದರೂ ಸಹ ಕಾಟಾಚಾರಕ್ಕೆ ದಾಳಿ ನಡೆಸಿ, ಅಳಿದುಳಿದ ಮರಳು ವಶಕ್ಕೆ ಪಡೆದು ಕ್ರಮ ಜರುಗಿಸಿದ್ದೇವೆ ಎಂದು ಕೈ ತೊಳೆದುಕೊಳ್ಳುತ್ತಾರೆ. ಇಂತಹ ಹಲವು ದೂರುಗಳನ್ನ ನೀಡಿ ಬೇಸರಗೊಂಡ ಹೊಸನಗರ ಮೂಲಕ ಪರಿಸರ ಹೋರಾಟಗಾರ ಗಿರೀಶ್‌ ಆಚಾರ್‌ ಲೋಕಾಯುಕ್ತಕ್ಕೆ, ಇಲ್ಲಿನ ಅಧಿಕಾರಿಗಳ ಹೆಸರುಗಳನ್ನ ಉಲ್ಲೇಖಿಸಿ, ದಾಖಲೆ ಸಮೇತ ದೂರು ನೀಡಿದ್ದಾರೆ. ಸೋಮವಾರ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ದೂರು ನೀಡಿ, ಸ್ವೀಕೃತಿ ಪಡೆದಿದ್ದಾರೆ.

Girish Achar is standing third from left during a raid recently.

ಹಾಗಾದರೆ ಗಿರೀಶ್‌ ಆಚಾರ್‍ ದೂರು ಏನು..?

ಹೊಸನಗರ ಹಾಗೂ ಸಾಗರ ತಾಲೂಕಿನ ಹೆಚ್ಚು ಗ್ರಾಮಗಳು ಪಶ್ಚಿಮ ಘಟ್ಟ ಸಾಲಿನಲ್ಲಿ ಬರುತ್ತವೆ. ಕೇಂದ್ರ ಸರ್ಕಾರ ಅತೀ ಸೂಕ್ಷ್ಮ ವಲಯ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ ಯಾವುದೇ ತರಹದ ಗಣಿಗಾರಿಕೆ ನಡೆಯುವಂತಿಲ್ಲ. ಈ ಭಾಗದಲ್ಲೇ ಶರಾವತಿ ನದಿ ಹಾದು ಹೋಗುವುದರಿಂದ ಈ ನದಿ ವ್ಯಾಪ್ತಿಯೂ ಸಹ ಪರಿಸರ ಸೂಕ್ಷ್ಮ ವಲಯವಾಗಿದೆ. ನದಿ ದಡದ ಉದ್ದಕ್ಕೂ, ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದೆ. ಶರಾವತಿ ನದಿ ವಿದ್ಯುದಾಗಾರಕ್ಕೆ ಮೀಸಲಿರುವುದರಿಂದ ಈ ಭೂ ಭಾಗ ವಿದ್ಯುತ್‌ ನಿಗಮದ ವ್ಯಾಪ್ತಿಯಲ್ಲಿದೆ. ಅರಣ್ಯ, ಕಂದಾಯ, ಪೊಲೀಸ್‌ ಇಲಖೆಗಳು ಒಟ್ಟಾಗಿ ಮರಳು ಮಾಫಿಯಾ ಸರಾಗವಾಗಿ ಸಾಗಲು ಅನುವು ಮಾಡಿಕೊಟ್ಟಿವೆ. ಮರಳು ತೆಗೆದು, ಕಲ್ಲು ಗಣಿಗಾರಿಕೆ ಮಣ್ಣನ್ನ ನದಿ ದಡದಲ್ಲಿ ಸುರಿಯುವುದರಿಂದ ಮುಂದೆ ಲಿಂಗನಮಕ್ಕಿ ಜಲಾಶಯಕ್ಕೂ ಆಪತ್ತು ಕಾದಿದೆ.

೨೦೧೮ರಿಂದ ಐದು ವರ್ಷಗಳ ಅವಧಿಗೆ ನಿಯಮ ಗಾಳಿಗೆ ತೂರಿ ಕೆಲ ಖಾಸಗಿ ವ್ಯಕ್ತಿಗಳಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದೆ. ಈ ವ್ಯಕ್ತಿಗಳು ಹಿಟಾಚಿ ಬಳಸಿ ದಡ ಒಡೆದು ಸಾವಿರಾರು ಲೋಡ್‌ ಮರಳನ್ನ ಅಕ್ರಮವಾಗಿ ಸಂಗ್ರಸುತ್ತಿದ್ದಾರೆ. ಲಾರಿಗೆ ನಾಲ್ಕು ಟನ್‌ ತುಂಬುವಲ್ಲಿ ಹದಿನೈದು ಟನ್‌ ತುಂಬಿ ಅದೇ ಪರ್‍ಮಿಟ್‌ಲ್ಲಿ ಮೂರು ನಾಲ್ಕು ಲೋಡ್‌ ಹೊಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ರಾಜಸ್ವ ನಷ್ಟವಾಗಿದೆ. ಹಿಂದೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ ಈ ತನಕ ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಂಡಿಲ್ಲ.

ಹೊಸನಗರದ ಈಚಲುಕೊಪ್ಪ, ಹರಿದ್ರಾವತಿ, ನಂಜವಳ್ಳಿ, ವಿಜಾಪುರ, ಮಾವಿನಹೊಳೆ, ಪುಣಜೆ, ಮುಳುಗುಡ್ಡೆ, ಬಾವಿಕೊಪ್ಪ, ಮಣಸಟ್ಟೆ, ಸುತ್ತಾ, ಏರಗಿ, ಹೆಚ್‌.ಹೊನ್ನೆಕೊಪ್ಪ, ರಾಮಚಂದ್ರಪುರ, ವಾರಂಬಳ್ಳಿ, ಸೋನಲೆ ಗ್ರಾಮಗಳಲ್ಲಿ ಪ್ರತೀ ದಿನ ನೂರಾರು ಲೋಡ್‌ ಮರಳನ್ನ ಸಂಗ್ರಹಿಸಿಡಲಾಗುತ್ತಿದೆ. ನಾಮಕಾವಾಸ್ತೆ ಚೆಕ್‌ಪೋಸ್ಟ್‌, ಸಿಸಿಟಿವಿ, ಬೀಟ್‌ ಪೊಲೀಸ್‌ ವ್ಯವಸ್ಥೆಯಿದ್ದು ಈ ತನಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಾಗರ ಉಪವಿಭಾಗಾಧಿಕಾರಿ, ವಲಯ ಅರಣ್ಯಾಧಿಕಾರಿಗಳು, ವಿದ್ಯುತ್‌ ಪ್ರಸರಣ ನಿಗಮದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕು. ಗಿರೀಶ್‌ ಆಚಾರ್‌ ಹೀಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕಾಡು ನಾಶಕ್ಕೆ ತಮ್ಮದೇ ಕೊಡುಗೆ ನೀಡಿದ್ದ ಅಧಿಕಾರಿ ವರ್ಗ, ಮರಳು ದಂಧೆಗೂ ಬೆಂಬಲ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಲೋಕಾಯುಕ್ತ ಅಧಿಕಾರಿಗಳು ಯಾವ ತರಹ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾಯಬೇಕಿದೆ.

You Might Also Like This