ಉತ್ತರ ಕನ್ನಡ ಜಿಲ್ಲೆ:
ಕೆಎಫ್‍ಡಿ ( ಕ್ಯಾಸನೂರು ಫಾರೆಸ್ಟ್ ಡಿಸೀಜ್ ) ಪಾಸಿಟಿವ್ ಬಂದ ಮಹಿಳೆ ನಾಗಮ್ಮ ಸುಬ್ಬ ಮಡಿವಾಳ, ವಯಸ್ಸು 57 ವರ್ಷ, ಜಿಡ್ಡಿ ಉಪಕೇಂದ್ರ ಕೋರ್ಲಕೈ, ಸಿದ್ದಾಪುರ ತಾಲ್ಲೂಕು ಇವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸತತ ಒಂದು ತಿಂಗಳ ಅನಾರೋಗ್ಯ ಮಣಿಪಾಲದಿಂದ ಮನೆಗೆ ಹೊರಟುಬಂದ ಮರುದಿನವೇ ಬಲಿ ತೆಗೆದುಕೊಂಡಿದ್ದು ಮಾತ್ರ ಆಘಾತ ಮೂಡಿಸಿದೆ. ಉತ್ತರ ಕನ್ನಡ ಜಿಲ್ಲೆ ಪ್ರಕರಣವಾದರೂ ಸಹ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರೋದ್ರಿಂದ ಪ್ರಕರಣದ ಬಗ್ಗೆ ಶಿವಮೊಗ್ಗ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ಪತ್ರಿಕಾ ಪ್ರಕಟಣೆಯನ್ನೇ ಹೊರಡಿಸಿದ್ದಾರೆ.
ಹಾಗಾದ್ರೆ ನಾಗಮ್ಮ ಹೇಗೆ ಮೃತರಾದರು..? ಇಲಾಖೆ ಹೇಳಿದ ಕಥೆ ಇಲ್ಲಿದೆ.
ಜ. 28 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಇವರಿಗೆ ಕೆಮ್ಮು ಮತ್ತು ಜ್ವರ ಇರುವುದು ಗೊತ್ತಾಗಿ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ರೋಗಿಯು ತಾನು ಆರಾಮಾಗಿ ಇರುವುದಾಗಿ ಹೇಳಿರುತ್ತಾರೆ. ತದನಂತರ ರೋಗಿಯು ಜ.29 ರಂದು ಸಾಗರದ ಭಾಗವತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ. ಜ.30 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಮಯದಲ್ಲಿ ಇವರಿಗೆಗ ಜ್ವರ ಇರುವ ಕಾರಣ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆ ನಡೆಸಿ, ಫೆ.1 ರಂದು ಕೆಎಫ್‍ಡಿ ಆರ್‍ಟಿಪಿಸಿಆರ್ ಪಾಸಿಟಿವ್ ಎಂದು ವಿಡಿಎಲ್ ಶಿವಮೊಗ್ಗದಿಂದ ವರದಿ ನೀಡಿದೆ.
ಫೆ.2 ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರೆಫರ್ ಮಾಡಿರುತ್ತಾರೆ. ಅಲ್ಲಿಯೂ ಚೇತರಿಕೆ ಕಾಣದ ಕಾರಣ ಕೆಎಂಸಿ ಮಣಿಪಾಲ್‌ಗೆ ಫೆ.04 ರಂದು ರೆಫರ್ ಮಾಡಿದ್ದಾರೆ. ಹಾಗೂ ಅಂದೇ ಕೆಎಂಸಿ ಮಣಿಪಾಲಕ್ಕೆ ದಾಖಲಾಗಿ ಐಸಿಯು ನಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಫೆ.5 ರಂದು ಮರು ರಕ್ತ ಪರೀಕ್ಷೆ ಮಾಡಲಾಗಿದ್ದು ಫೆ.06 ರಂದು ಕೆಎಫ್‍ಡಿ ಪಾಸಿಟಿವ್ ವರದಿ ಬಂದಿರುತ್ತದೆ.
ಫೆ.24 ರಂದು ವೈದ್ಯರ ಸಲಹೆ ವಿರುದ್ದವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30 ಕ್ಕೆ ಬಿಡುಗಡೆ ಹೊಂದಿರುತ್ತಾರೆ. ಆರೋಗ್ಯ ಇಲಾಖೆಯವರು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಿರುತ್ತಾರೆ. ಆದರೆ ಅವರು ಫೆ.25 ರ ರಾತ್ರಿ 8.20 ಕ್ಕೆ ಮರಣ ಹೊಂದಿರುತ್ತಾರೆಂದು ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಇದಿಷ್ಟು ಶಿವಮೊಗ್ಗ ಆರೋಗ್ಯ ಅಧಿಕಾರಿ ಹೊರಡಿಸಿದ ಪತ್ರಿಕಾ ಪ್ರಕಟಣೆ. ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಕೆಎಫ್‌ಡಿ ಭಯಮೂಡಿಸಿದ್ದು ದಿನೇ ದಿನೇ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆ ಈ ವರ್ಷ ಹೆಚ್ಚು ಆತಂಕ ಮೂಡಿಸುತ್ತಿದೆ.
ಫೆ,೨೬ ( ಇಂದು ) ಆರೋಗ್ಯ ಇಲಾಖೆ ಹೊರಡಿಸಿದ ಡೈಲಿ ದತ್ತಾಂಶಗಳ ಟೇಬಲ್ ಕೆಳಗಿದೆ…
