ಬೆಳಗಾವಿ ಜಿಲ್ಲಾಡಳಿತ ಅರಣ್ಯ ವ್ಯಾಪ್ತಿಯಲ್ಲಿರುವ ಫಾಲ್ಸ್ ಗಳಿಗೆ ಸಾರ್ವಜನಿಕರ ಭೇಟಿ ನಿಷೇಧ ಹೇರಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಜಲಪಾತದಲ್ಲಿ ಗುಂಡು-ತುಂಡಿನ ಪಾರ್ಟಿ ಮಾಡಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ ಅರಣ್ಯ ವ್ಯಾಪ್ತಿಯಲ್ಲಿದ್ದು ಅಕ್ರಮ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಆದರೆ ಇವರು ಫಾಲ್ಸ್ ಗೆ ಹೆಸ್ಕಾಂ ವಾಹನದಲ್ಲೇ ಬಂದು ಗುಂಡು, ತುಂಡು ಪಾರ್ಟಿ ಮಾಡಿ ರಾಜಾರೋಶವಾಗಿ ವಿಡಿಯೋ ಮಾಡಿದ್ದಾರೆ.

ಜುಲೈ 26ರಂದು ಬೆಳಗಾವಿ ಜಿಲ್ಲಾಧಿಕಾರಿ ನಿಷೇಧ ಹೇರಿದ ತರುವಾಯ, ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿತ್ತು. ಪೊಲೀಸರನ್ನ ಯಾಮಾರಿಸಿ ಸರ್ಕಾರಿ ವಾಹನ ಬಳಸಿ ಅರಣ್ಯ ಪ್ರದೇಶಕ್ಕೆ ಹೋಗಿದ್ದ ವೈದ್ಯರು, ಹೆಸ್ಕಾಂ ಸಿಬ್ಬಂದಿ ಗ್ಯಾಂಗ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆ. ಬೀಟ್ ಫಾರೆಸ್ಟ್ ಅಧಿಕಾರಿ ಆರ್ ವಿ ಹೊಸಮನಿಯವರು, ನಿಷೇಧ ಆದೇಶ ಉಲ್ಲಂಘನೆ ಮಾಡಿರುವ ಡಾ. ಶಿವಕುಮಾರ್ ಹಾಗೂ ಮೂವರ ಮೇಲೆ ನಿಷೇಧಿತ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ನಿರ್ಬಂಧ ಕಾನೂನಡಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.