ಉತ್ತರಕನ್ನಡ: ಅಕ್ಟೋಬರ್ ವರೆಗೆ ( ಮುಂದಿನ 4 ತಿಂಗಳು ) ಮುರುಡೇಶ್ವರ ಬೀಚ್ ಗೆ ಪ್ರವೇಶ ನಿರ್ಬಂಧ. ಲೈಫ್ ಗಾರ್ಡ್ ಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಪ್ರಾಣಕಳೆದುಕೊಳ್ಳುತ್ತಿರುವವರ ಸಂಖೆಯಲ್ಲಿ ಹೆಚ್ಚಳದಿಂದಾಗಿ ಈ ಕ್ರಮ.
ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ, ಸಮುದ್ರ ತೀರಕ್ಕೆ ತೆರಳುವ ಎರಡೂ ಮಾರ್ಗಗಳನ್ನ ನಾಲ್ಕು ತಿಂಗಳು ಬಂದ್ ಮಾಡಲಾಗಿದೆ. ಹಾದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ, ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ ಇಬ್ಬರು ಪ್ರವಾಸಿಗರು ಇಲ್ಲಿನ ಲೈಫ್ ಗಾರ್ಡ್ಸ್ ಮಾತುಗಳನ್ನ ಧಿಕ್ಕರಿಸಿ ಸಮುದ್ರಕ್ಕಿಳಿದು ನೀರು ಪಾಲಾಗಿದ್ದಾರೆ. ಮುಂಗಾರು ಮುನ್ಸೂಚನೆ, ಸಮುದ್ರದ ಅಲೆಗಳ ಉಬ್ಬರ ಇಳಿತದಿಂದಾಗಿ ಕಡಲ ಸ್ವರೂಪ ಬದಲಾಗುತ್ತಿರೋದ್ರಿಂದ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನ ಮುಗಿಸಿ ಸಮುದ್ರಕ್ಕೆ ಈಜಲು ತೆರಳಲು ಬಂದ ವೇಳೆ ನಮ್ಮ ಲೈಫ್ ಗಾರ್ಡ್ಗಳ ಮಾತು ಕೇಳದೇ ಸಮುದ್ರಕ್ಕೆ ಈಜಲು ತೆರಳಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
” ಸದ್ಯ ಮಳೆಗಾಲ ಆರಂಭವಾಗಿದ್ದು, ಜಿಲ್ಲೆಗೆ ಸೈಕ್ಲೋನ್ ಕೂಡ ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಸಮುದ್ರ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಸಮುದ್ರಕ್ಕೆ ತೆರಳುವ ಎರಡು ಮಾರ್ಗಗಳನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಬಂದ್ ಮಾಡಿದ್ದೇವೆ. ಮುಂದಿನ ನಾಲ್ಕು ತಿಂಗಳು ಸಮುದ್ರ ತೀರಕ್ಕೆ ನಿರ್ಬಂಧ ಹೇರಲಾಗಿದ್ದು, ಅಕ್ಟೋಬರ್ ತಿಂಗಳಿಂದ ಪ್ರವೇಶ ಮಾಡಿಕೊಡಲಾಗುತ್ತದೆ” ಎಂದು ಬೀಚ್ ಸೂಪರ್ವೈಸರ್ ದತ್ತಾತ್ರೇಯ ಶೆಟ್ಟಿ ತಿಳಿಸಿದ್ದಾರೆ.