
ಗಮಕ ಗಂಧರ್ವ ಹೊಸಹಳ್ಳಿಯ ಹೆಚ್‌ಆರ್ ಕೇಶವಮೂರ್ತಿಗೆ ೨೦೨೨ರ ಪದ್ಮಶ್ರೀ ಕಲಾವಿಭಾಗದಲ್ಲಿ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು ೮೮ ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ ಹರಿಸುವ ಕೇಶವಮೂರ್ತಿಗಳ ಸಾಧನೆಯನ್ನ ಇಡೀ ಜಿಲ್ಲೆ ಕೊಂಡಾಡಿದೆ. ಶಿವಮೊಗ್ಗದ ಮತ್ತೂರು-ಹೊಸಹಳ್ಳಿ ಅವಳಿ ಗ್ರಾಮಗಳು ಸಂಗೀತ ಪರಂಪರೆ, ವೇದ-ಶಾಸ್ತ್ರ ಅಧ್ಯಯನಗಳಿಗೆ ತನ್ನದೇ ಆದ ಕೊಡುಗೆಗಳನ್ನ ನೀಡಿವೆ. ಮತ್ತೂರು ಸಂಸ್ಕೃತ ಗ್ರಾಮ ಎಂದು ಎಲ್ಲರಿಗೂ ತಿಳಿದಿದೆ ಆದರೆ ಹೊಸಹಳ್ಳಿ ಗಮಕ ಗ್ರಾಮ ಎಂಬುದು ಗೊತ್ತಿಲ್ಲ. ಆದರೆ ಕೇಶವಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ನಂತರ ಗಮಕ ಕಲೆಯ ಬಗ್ಗೆ ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೊಸಹಳ್ಳಿ ಬಗ್ಗೆ ತಿಳಿಯಲು ಉತ್ಸುಕರಾಗಿದ್ದಾರೆ.

ಕೇಶವಮೂರ್ತಿಯವರ ತಂದೆ ರಾಮಸ್ವಾಮಿ ಶಾಸ್ತ್ರಿ ಹಾಗೂ ತಾಯಿ ಲಕ್ಷ್ಮಿದೇವಮ್ಮ. ಶ್ರೀಯುತರು ೧೯೩೪ರಲ್ಲಿ ಜನ್ಮಿಸಿದರು. ಬಾಲ್ಯದಿಂದಲೇ ಗಮಕ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಇವರು ಹದಿನೈದನೇ ವರ್ಷಕ್ಕೆ ಅಭ್ಯಾಸ ಶುರು ಮಾಡಿದರು. ಸುಮಾರು ವರ್ಷಗಳ ಕಾಲ ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ಪಂಪನ ಮಹಾ ಭಾರತ, ರನ್ನನ ಗಧಾಯುದ್ಧ, ರಘುವಂಶ, ಕುಮಾರಸಂಭವದ ಶ್ಲೋಕಗಳಿಗೆ ರಾಗ ಸಂಯೋಜನೆ ಮಾಡಿ ಸುಮಾರು ಆರು ದಶಕಗಳ ಕಾಲ ಗಮಕವನ್ನ ದೇಶದೆಲ್ಲೆಡೆ ಪಸರಿಸಿದ್ದಾರೆ. ಬಹಳ ಮುಖ್ಯವಾಗಿ ಕೇಶವಮೂರ್ತಿಯವರು ಯಾವುದೇ ಕಾರ್ಯಕ್ರಮಕ್ಕೂ ಬಿಡಿಗಾಸು ಪಡೆದಿಲ್ಲ ಎಂಬುದು ಆಪ್ತರ ಮಾತು. ಹೊಸಹಳ್ಳಿಯಲ್ಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲೆಯನ್ನ ಅಭ್ಯಾಸ ಮಾಡಿಸಿರುವ ಕೀರ್ತಿಯೂ ಸಹ ಈ ಹಿರಿಯಜ್ಜನಿಗೆ ಸಲ್ಲುತ್ತೆ. ದೇಶದ ಅನೇಖ ಸಾಧಕರು ಇವರನ್ನ ಹಾಡಿ ಹೊಗಳಿದ್ದಾರೆ. ಕುಮಾರವ್ಯಾಸ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವರ್ಷದ ಗಾಯಕ ಪ್ರಶಸ್ತಿ, ಗಮಕ ಸಿಂಧು, ಗಮಕ ಗಂಧರ್ವ, ಗಮಕ ಕೇಸರಿ, ಗಮಕ ಚೂಡಾಮಣಿ ಪ್ರಶಸ್ತಿಗಳ ಗೌರವ ಸಂದಿದೆ.
ಇಂತಹ ಮಹಾನ್ ಸಾಧಕನನ್ನ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದ್ದು ಎಲ್ಲರಿಗೂ ಸಂತಸ ತಂದಿದೆ. ಶ್ಲೋಕಗಳನ್ನ ವಾಚನ ಮಾಡುವುದು ಸಾಮಾನ್ಯ ಅದನ್ನ ರಾಗ ಸಂಯೋಜನೆ ಮಾಡಿ ಗಾಯನ ಮಾಡುವುದು ಗಮಕ ಕಲೆಯ ಪ್ರಾಕಾರ. ಇದು ಕಠಿಣವೂ ಹೌದು ಚಂಪೂ ಕಾವ್ಯದಂತಹ ಸಾಲುಗಳಿಗೆ, ಪ್ರತಿ ಸಾಲಿಗೂ ವಿವಿಧ ರಾಗ ಸಂಯೋಜನೆ ಮಾಡಲು ವರ್ಷಗಳೇ ಶ್ರಮಿಸಿದ್ದಾರೆ ಕೇಶವಮೂರ್ತಿ. ಅವರಿಗೆ ತುಂಬಾ ಇಷ್ಟವಾದದ್ದು ಕುಮಾರವ್ಯಾಸನ ಗದುಗಿನ ಭಾರತ.

ಶಿವಮೊಗ್ಗದಿಂದ ತೀರ್ಥಹಳ್ಳಿ ಹೆದ್ದಾರಿಯನ್ನ ಹಿಡಿದು ಹೊರಟರೆ ಏಳು ಕಿಲೋಮೀಟರ್ ಅಂತರದಲ್ಲಿ ಹೊಸಹಳ್ಳಿ ಎಂಬ ಗ್ರಾಮ ಸಿಗುತ್ತೆ. ಗ್ರಾಮದೆಲ್ಲೆಡೆ ಗಮಕ ಚಾವಡಿಗಳೇ ಕಾಣುತ್ವೆ. ಈ ವಿಶೇಷವಾದ ಊರನ್ನ ಒಮ್ಮೆ ನೋಡಲೇ ಬೇಕು..!