ತಾಯಿ ಚಿರತೆ ಸೆರೆಸಿಕ್ಕ ಮರಿಗಳನ್ನ ಕಾಡಿಗೆ ಸಾಗಿಸಿದ ಕಥೆ:
*ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ 10 ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ಎಫೆಕ್ಟ್ : 3 ಚಿರತೆ ಮರಿಗಳನ್ನು ತಾಯಿಯ ಮಡಿಲು ಸೇರಿಸುವ ಕಾರ್ಯ ಯಶಸ್ವಿ*
ಇತ್ತೀಚೆಗೆ ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದ ಬಳಿ ಕಬ್ಬು ಕಟಾವು ಮಾಡುವ ವೇಳೆ ರೈತರಿಗೆ ಸಿಕ್ಕ ಮೂರು ಚಿರತೆ ಮರಿಗಳು ತಾಯಿ ಮಡಿಲು ಸೇರಿವೆ. ಅದರಲ್ಲೂ ಕಪ್ಪು ಬಣ್ಣದ ಮರಿ ಜನರನ್ನ ಹೆಚ್ಚು ಸೆಳೆದಿತ್ತು.
ಮರಿ ಸಿಕ್ಕ ಬಳಿಕ ರೈತರು, ವಿಷಯವನ್ನ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ತಂದಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಯಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು. ಬೋನ್ ಇಟ್ಟಿದ್ದರು.
ಎರಡು ದಿನಗಳ ನಂತರ ಆಗಮಿಸಿದ ತಾಯಿ ಚಿರತೆ, ಬೋನಿಗೆ ಬಿದ್ದು ಸೆರೆಯಾಗಿತ್ತು.
ಬಳಿಕ ತಾಯಿ ಹಾಗೂ ಮರಿಗಳನ್ನು ಚಾಮುಂಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ತಾಯಿ ಮತ್ತು ಮರಿಗಳನ್ನು ಪ್ರತ್ಯೇಕವಾಗಿ ಇರಿಸಿ ನಿಗಾ ವಹಿಸಲಾಗಿತ್ತು. ನಂತರ ತಾಯಿ ಮತ್ತು ಮರಿಗಳು ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ತಾಯಿ ಮರಿಗಳು ಹೊಂದಿಕೊಂಡ ಬಳಿಕ ಅರಣ್ಯಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅರಣ್ಯ ಪ್ರದೇಶದಲ್ಲಿರುವ ಕೊಠಡಿಯೊಂದರಲ್ಲಿ ತಾಯಿ ಚಿರತೆಯನ್ನ ಮರಿಗಳೊಂದಿಗೆ ಬಿಡಲಾಗಿತ್ತು. ಇದಾದ ಬಳಿಕ ತಾಯಿ ಚಿರತೆ ಕೊಠಡಿಯ ಕಿಟಕಿಯನ್ನು ಮುರಿದು ಹೊರ ಹೋಗಿ ಸುರಕ್ಷಿತ ತಾಣಕ್ಕಾಗಿ ಹುಡುಕಾಟ ನಡೆಸಿತ್ತು.!

ಎರಡು ದಿನಗಳ ಕಾಲ ಸುರಕ್ಷಿತ ನೆಲೆಗಾಗಿ ಹುಡುಕಾಡಿದ ತಾಯಿ ಚಿರತೆ, ನಂತರ ಬಂದು ಎರಡು ಮರಿಗಳನ್ನು ಹೊತ್ತೊಯ್ದಿತ್ತು.
ಇದಾದ ಮರುದಿನ ಬಂದು ಮತ್ತೊಂದು ಮರಿಯನ್ನು ಸಾಗಿಸಿತು. ಒಟ್ಟು ಹತ್ತು ದಿನಗಳ ಕಾಲ ನಡೆದ ಈ ಎಲ್ಲಾ ಘಟನಾವಳಿಗಳು ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ದಾಖಲಾಗಿದೆ. ತಾಯಿ ಜೊತೆ ಮರಿಗಳನ್ನು ಜೊತೆಯಾಗಿಸಿ ಅವುಗಳ ಆವಾಸ ಸ್ಥಾನದಲ್ಲಿ ಬಿಡುಗಡೆ ಮಾಡಿದ ಕಾರ್ಯ ಯಶಸ್ವಿಯಾದ ಬಳಿಕ ಈ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಕೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.