ಕೇರಳದಲ್ಲಿ ಸೆರೆ ಹಿಡಿದು ಶುಕ್ರವಾರ ಮಧ್ಯರಾತ್ರಿ ಬಂಡೀಪುರಕ್ಕೆ ಮರಳಿ ತಂದ ತನ್ನೀರ್ ಕೊಂಬನ್ ಎಂಬ ಹೆಸರಿನ ಕಾಡಾನೆಯ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ ಎಂದ ಸಚಿವರು, ವನ್ಯಜೀವಿಗಳ ಹಿತದೃಷ್ಟಿಯಿಂದ ಯಾವುದೇ ವನ್ಯಜೀವಿಯನ್ನು ಇಂತಹ ರಾಜ್ಯಕ್ಕೆ ಸೇರಿದ್ದು ಎಂದು ಸೀಮಿತಗೊಳಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ಅರಣ್ಯ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ವನ್ಯ ಜೀವಿಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಆನೆಗಳು ಕೂಡ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರದಾದ್ಯಂತ ಹಬ್ಬಿರುವ ಪಶ್ಚಿಮಘಟ್ಟದಲ್ಲಿ ಸಂಚರಿಸುತ್ತವೆ. ವಸ್ತು ಸ್ಥಿತಿ ಹೀಗಿರುವಾಗ ಯಾವುದೇ ವನ್ಯಜೀವಿಗೆ ನಿರ್ದಿಷ್ಟ ರಾಜ್ಯಕ್ಕೆ ಸೇರಿದ್ದು ಎಂದು ಹಣೆಪಟ್ಟಿ ಹಚ್ಚುವುದು ಸ್ವೀಕಾರಾರ್ಹವಲ್ಲ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಯಾವುದೇ ರಾಜ್ಯದ ಅರಣ್ಯ ಸಿಬ್ಬಂದಿಯಾಗಲೀ, ಆ ರಾಜ್ಯದ ಜನರೇ ಆಗಲೀ ಇದು ಪಕ್ಕದ ರಾಜ್ಯದ ಆನೆ ಎಂದು ವರ್ಗೀಕರಿಸಿ, ಸೆರೆ ಹಿಡಿದು ಕಳುಹಿಸುವುದು ಖಂಡನೀಯ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಕೇರಳ ರಾಜ್ಯದ ಅರಣ್ಯ ಸಚಿವರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

ಬಂಡೀಪುರ-ಮದುಮಲೈ-ನಾಗರಹೊಳೆ ಮತ್ತು ವಯನಾಡ್ ಅರಣ್ಯ ಪ್ರದೇಶ ಪರಸ್ಪರ ಸಂಪರ್ಕಿತವಾದ ಭೂರಮೆಯಾಗಿದೆ. ವನ್ಯಜೀವಿಗಳಿಗೆ ನೈಸರ್ಗಿಕ ಗಡಿ, ಭಾಷೆ ಇರುವುದಿಲ್ಲ. ಪ್ರಾಣಿಗಳು ಆಹಾರ ಮತ್ತು ನೀರು ಮತ್ತು ಸಂಗಾತಿಯನ್ನು ಹುಡುಕಿಕೊಂಡು ಒಂದು ಕಾಡಿನಿಂದ ಮತ್ತೊಂದಕ್ಕೆ ಹೋಗುತ್ತವೆ. ಸಹಸ್ರಾರು ವರ್ಷಗಳಿಂದ ಪೂರ್ವ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವನ್ಯಜೀವಿಗಳು ಓಡಾಡಿಕೊಂಡಿವೆ. ಆನೆಗಳಿಗೆ ಕಾರಿಡಾರ್ ಇರುತ್ತದೆ. ನಾವು ಪ್ರಾಣಿಗಳ ಅರಣ್ಯವನ್ನೇ ಆಕ್ರಮಿಸುತ್ತಿದ್ದೇವೆ. ಹೀಗಾಗಿ ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ನಡೆಸುವುದನ್ನು ಕಲಿಯಬೇಕು ಎಂದು ಹೇಳಿದ್ದಾರೆ.
ಕೇರಳದಲ್ಲಿ ಆನೆಗೆ ಅರಿವಳಿಕೆಯನ್ನು ನೀಡುತ್ತಿರುವ ಮತ್ತು ನಂತರ ಆ ಆನೆಯನ್ನು ಸಾಕಾನೆಗಳ ನೆರವಿನಿಂದ ತಳ್ಳಿ ವಾಹನ ಹತ್ತಿಸಲಾಗಿರುವ ವಿಡಿಯೋ ವೈರಲ್ ಆಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದು ನೋವಿನ ಸಂಗತಿ. ಭವಿಷ್ಯದಲ್ಲಿ ಎಲ್ಲಿಯೂ ಇಂತಹ ಘಟನೆಗಳು ನಡೆಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ವಲಯಗಳಲ್ಲಿ ಸಂಚರಿಸುತ್ತಿದ್ದ 23 ಆನೆಗಳ ಪೈಕಿ ತನ್ನೀರ್ ಕೊಂಬನ್ ಸಲಗ ಕೂಡ ಒಂದಾಗಿತ್ತು. ಅದನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿದ ಬಳಿಕ ಆನೆಯನ್ನು ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು. ಆನೆ ಕಬಿನಿ ನದಿ ದಾಟಿ ಕೇರಳದ ವಯನಾಡ್ ಗಡಿಗೆ ಹೋಗಿದೆ. ಅಲ್ಲಿ ಆನೆಯನ್ನು ಸೆರೆ ಹಿಡಿದು ನಮ್ಮ ರಾಜ್ಯಕ್ಕೆ ಕಳಿಸಲಾಗಿದೆ. ರಾಂಪುರ ಆನೆ ಶಿಬಿರಕ್ಕೆ ಮಧ್ಯರಾತ್ರಿಯಲ್ಲಿ ಕರೆತಂದಾಗ ಕೇರಳದ ಮೂವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕರ್ನಾಟಕದ ಅಧಿಕಾರಿಗಳು ಹಾಜರಿದ್ದರು.
ಎರಡೂ ರಾಜ್ಯಗಳ ಅಧಿಕಾರಿಗಳು ಮತ್ತು ಪಶುವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ವರದಿ ಬಂದ ನಂತರ ವಾಸ್ತವ ಅಂಶ ತಿಳಿಯಲಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.
ಪರಿಸರಾಸಕ್ತರು ಕೆಂಡ: ಜನವರಿ 16ರಂದು ಹಾಸನದ ಬೇಲೂರಿನ ಬಿಕ್ಕೂಡಿನಲ್ಲಿ ಸೆರೆಹಿಡದ ಈ ಆನೆಗೆ ತನ್ನೀರ್ ಕೊಂಬನ್ ಎಂದು ಹೆಸರಿಡಲಾಗಿತ್ತು. ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲೇ ಇದ್ದ ಆನೆ ಕೇರಳದ ವಯನಾಡ್ ಕಾಡಿನಲ್ಲಿ ಸೇರಿಕೊಂಡು ಅಲ್ಲಿನ ಮಾನಂದವಾಡಿ ಪಟ್ಟಣದಲ್ಲಿ ಭಯಮೂಡಿಸಿತ್ತು. ಕೇರಳ ಅರಣ್ಯ ಸಿಬ್ಬಂದಿ ವಿವೇಚನಾರಹಿತವಾಗಿ ಚುಚ್ಚುಮದ್ದು ನೀಡಿ ಸೆರೆಹಿಡಿದು, ಕೆಲ ಗಂಟೆಗಳ ನಂತರ ಲಾರಿ ತುಂಬಿ ಕರ್ನಾಟಕಕ್ಕೆ ಸಾಗಿಸುತ್ತಿದ್ದರು ಆದರೆ ಆನೆ ಮಾರ್ಗ ಮಧ್ಯೆಯೇ ಮೃತಪಟ್ಟಿದೆ. ಅಹಾರವೂ ಇಲ್ಲದೇ, ಅರಿವಳಿಕೆ ನಂತರ ಅಗತ್ಯ ಕ್ರಮವನ್ನೂ ತೆಗೆದುಕೊಳ್ಳದೇ ಸಾಯಿಸಲಾಗಿದೆ ಎಂದು ಪರಿಸರಾಸಕ್ತರು ದೂರಿದ್ದಾರೆ.