ಮಲೆನಾಡಲ್ಲಿ ದಿನೇ ದಿನೇ ಶಿಕಾರಿಗೆ ವನ್ಯಜೀವಿಗಳು ಬಲಿಯಾಗುತ್ತಿವೆ. ಸಾಮಾನ್ಯವಾಗಿ ಹಳ್ಳಿ ಜನ, ಕೂಲಿ-ಕಾರ್ಮಿಕರಷ್ಟೇ ಸಿಕ್ಕಿಬೀಳುತ್ತಾರೆ. ಆದರೆ ಶೋಕಿಗಾಗಿ, ಹವ್ಯಾಸಕ್ಕೆ ಬೇಟೆಯಾಡುವ ದುರುಳರ ಕೃತ್ಯಗಳು ಬೆಳಕಿಗೆ ಬರುವುದು ವಿರಳ.
ಎರಡು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಜಿಂಕೆ ಶಿಕಾರಿ ಮಾಡಿ, ಪಾರ್ಟಿ ಮಾಡಲು ಸಿದ್ಧರಿದ್ದವರ ಮೇಲೆ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲೇ ಬೃಹತ್ ಗಾತ್ರದ ಜಿಂಕೆ ಬೇಟೆಯಾಡಿ ಪಾರ್ಟಿಗೆ ಸಿದ್ಧರಿದ್ದರು ಎಂದರೆ ಈ ಭಾಗದಲ್ಲಿ ಯಾವ ತರಹದ ಉಪಟಳವಿದೆ ಎಂಬುದು ಗೊತ್ತಾಗುತ್ತೆ. ಇಲ್ಲಿರುವ ಸಂಗಮ ಕಾಫಿ ತೋಟದಾಚೀಚೆ ಬೇಟೆಯಾಡಿದ್ದ ಜಿಂಕೆ ಮಾಂಸ ಬಾಡೂಟಕ್ಕೆ ಅಣಿಯಾಗಿತ್ತು. ಈ ಪ್ರದೇಶ, ಮೇಲಿನ ಹುಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಗೆ ಸೇರಿದ್ದು, ಮುತ್ತೊಡಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿಯೂ ಇದ್ದು, ತೋಟದಂಚಿನಲ್ಲೇ ಶಿಕಾರಿ ಮಾಡಿರುವುದು ಖಾತ್ರಿಯಾಗಿದೆ.ಆರೋಪಿ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿ ಬಂಧಿಸಿ, ಒಟ್ಟು 8 ಕೆ.ಜಿ. ಜಿಂಕೆ ಮಾಂಸದ ಜೊತೆಗೆ, ನಾಡ ಬಂದೂಕು ವಶಕ್ಕೆ ಪಡೆಯಲಾಗಿದೆ. ಪಾರ್ಟಿ ನಡೆವ ಸ್ಥಳದಲ್ಲಿ ಎನ್.ಜಿ.ಓ ಸದಸ್ಯರಿದ್ದರು ಎನ್ನುವ ಆರೋಪ ಕೂಡ ಕೇಳಿ ಬಂದಿದೆ.
