Ode to the west wind

Join Us on WhatsApp

Connect Here

ಏಳುಸುತ್ತಿನ ಕೋಟೆ ಕವಲೇದುರ್ಗ ಅವಸಾನದತ್ತ..!

WhatsApp
Facebook
Twitter
LinkedIn

ಮಲೆನಾಡು ತೀರ್ಥಹಳ್ಳಿ ತಾಲೂಕಿನ ಮಳೆಕಾಡಿನ ಮಧ್ಯೆ ಬೆಟ್ಟದ ನೆತ್ತಿಯ ಮೇಲೆ ಸುತ್ತಿಕೊಂಡು ನಿಂತಿರುವ ಕವಲೆದುರ್ಗ ಕೋಟೆ ಪ್ರವಾಸಿಗರ ಸ್ವರ್ಗ. ಅದರಲ್ಲೂ ಮಳೆಯಲ್ಲಿ ಕೊಡೆ ಹಿಡಿದು ಎರಡು ಕಿಲೋಮಿಟರ್‌ ದೂರ ಚಾರಣ ಮಾಡಿದರೆ ಸಿಗುವ ಅನುಭವ ಇನ್ನೆಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹದೊಂದು ಪ್ರಾಕೃತಿಕ ಪರಿಸರ ಹಾಗೂ ಐತಿಹಾಸಿಕ ಹಿನ್ನೆಲೆಯ ಸ್ಥಳವೀಗ ಅವಸಾನದ ಹಂತಕ್ಕೆ ಬಂದು ನಿಂತಿದೆ. ಜನ ಪ್ರತಿನಿಧಿಗಳಿಗೆ ಈ ಸ್ಥಳದ ಕಾಯಕಲ್ಪ ಮಾಡುವ ಸಂಕಲ್ಪ ಇನ್ನೂ ಕೂಡಿ ಬಂದಿಲ್ಲ.

ಪ್ರವಾಸದ ದೃಷ್ಟಿಯಿಂದಲೇ ನೋಡುವುದಾದರೆ, ಶಿವಮೊಗ್ಗದಿಂದ ೮೦ ಕಿಲೋಮೀಟರ್‌ ದೂರ, ತೀರ್ಥಹಳ್ಳಿಯಿಂದ ಕೇವಲ ೧೮ ಕಿಲೋಮೀಟರ್‌ ದೂರದಲ್ಲಿದೆ ಈ ದುರ್ಗ. ಒಂಭತ್ತನೇ ಶತಮಾನದಲ್ಲಿ ಕೆಳದಿ ಸಂಸ್ಥಾನದ ವೆಂಕಟಪ್ಪ ನಾಯಕ ಇದರ ನಿರ್ಮಾತೃ ಎಂದು ಇತಿಹಾಸಕಾರರು ಹೇಳುತ್ತಾರೆ. ಗೋಂಡಾರಣ್ಯದ ನೆತ್ತಿ ಮೇಲೆ ಗಿರಿ-ಶಿಖರಗಳಿಗಿಂತಲೂ ಎತ್ತರ, ಮುಗಿಲ ಚುಂಬಿಸುವ ಈ ಕೋಟೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಂಜು ಮುಸುಕು ಹಾಕಿಕೊಂಡಿರುತ್ತೆ. ಬೇಸಿಗೆಯಲ್ಲಿ ಕೋಟೆಯ ನೆತ್ತಿ ಮೇಲೆ ನಿಂತರೆ ಬಿಸಿಲ ಅನುಭವವೇ ಆಗುವುದಿಲ್ಲ. ಪ್ರಾಕೃತಿಕವಾಗಿಯಷ್ಟೇ ಅಲ್ಲ, ಕೋಟೆಯೂ ಸಹ ಶಿವಮೊಗ್ಗ ರಾಜಮನೆತನಗಳ ಪರಂಪರೆಯ ಬಹಳ ದೊಡ್ಡ ಕುರುಹು. ಹಿಂದೆ ಹೈದರಾಲಿ-ಟಿಪ್ಪುವಿನಿಂದ ಹಾಳಾಗಿದ್ದ ಕೋಟೆ ಈಗ ವಿವೇಚನೆ ಇಲ್ಲದ ಜನರಿಂದ ಅಪಾಯಕ್ಕೆ ತುತ್ತಾಗುತ್ತಿದೆ.

ಕವಲೇದುರ್ಗ ಕಾವಲು ದುರ್ಗ ಎಂಬ ಹೆಸರಿನಿಂದ ಬಂದಿದೆ ಎಂಬುದು ಹಲವರ ಅಭಿಪ್ರಾಯ. ಅಥವಾ ಕವಲು ದುರ್ಗಾ ಎಂಬುದರ ರೂಪವೂ ಆಗಿರಬಹುದು. ಇದಕ್ಕೆ ಇನ್ನೊಂದು ಹೆಸರು ಭುವನಗಿರಿ ದುರ್ಗ. ಕೆಳದಿ ರಾಜಮನೆತನದಿಂದ ಉಳಿಸಿ ಬೆಳೆಸಿದಂತಹ ಕೋಟೆ. ಕೆಳದಿ ರಾಜರಿಗೆ ಎರಡನೇ ರಾಜಧಾನಿಯಾಗಿತ್ತು ಹಾಗೂ ಕೆಳದಿ ರಾಣಿ ಚೆನ್ನಮ್ಮಳಿಗೆ ನಾಲ್ಕು ವರ್ಷ ಖಾಸಗೀ ರಾಜಧಾನಿಯಾಗಿ ನಿರ್ವಹಿಸಲ್ಪಟ್ಟಿತ್ತು. ಇಂತಹ ಐತಿಹಾಸಿಕ ಕೋಟೆ ಸರ್ಕಾರ ಹಾಗೂ ಜನರ ನಿರ್ಲಕ್ಷ್ಯದಿಂದ ಪರಂಪರೆಯನ್ನ ಕಳಚಿಕೊಳ್ಳುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕು. ಅಲ್ಲಿ ಉತ್ಖನನ ಆಗಬೇಕು. ಕೋಟೆ ರಕ್ಷಣೆಗೆ ಅಗತ್ಯ ಕ್ರಮಗಳು ತುರ್ತಾಗಿ ನಿರ್ವಹಿಸಬೇಕು. ಕವಲೇದುರ್ಗದ ಐತಿಹಾಸಿಕ ಮಹತ್ವ ಅರಿಯದ ಮೂಢರು ಮೋಜು ಮಸ್ತಿ ಮಾಡುತ್ತಿದ್ದಾರೆ. ಬಾಟಲಿಗಳನ್ನ ಒಡೆಯುತ್ತಾರೆ, ಕೋಟೆ ಕಂಬಗಳನ್ನ ಬೀಳಿಸುತ್ತಾರೆ, ಅವಶೇಷಗಳನ್ನ ಹಾಳುಮಾಡುತ್ತಾರೆ. ಈ ಜಾಗದಲ್ಲಿ ಈ ತರಹ ಹಾಳು ಮಾಡಿದರೆ ಶಿಕ್ಷಾರ್ಹ ಅಪರಾಧ ಎಂದು ಬೋರ್ಡ್‌ ನೇತುಹಾಕುವುದಷ್ಟೇ ಸರ್ಕಾರದ ಕೆಲಸವಾಗಿದೆ ಎಂದು ಹೋರಾಟಗಾರರು ದೂರುತ್ತಾರೆ.

ಈ ದುರ್ಗದಲ್ಲಿ ಕೋಟೆಯ ದಿಡ್ಡಿ ಬಾಗಿಲು, ಶಿಖರೇಶ್ವರ ದೇಗುಲದ ಮಹಾದ್ವಾರ, ಕಲ್ಲಿನ ಬಂಡೆಗಳ ಮೇಲೆ ಲಕ್ಷ್ಮಿನಾರಾಯನ ದೇಗುಲ, ಕೊಳ, ಗಜ, ಅಶ್ವ ಶಾಲೆಗಳು ಬಹಳ ವಿಶೇಷವಾಗಿ ಏಕಶಿಲಾ ಏಳು ಹೆಡೆ ನಾಗರ ಕಲ್ಲನ್ನೂ ಸಹ ನಾವು ಕಾಣಬಹುದು. ಇಲ್ಲಿಯೇ ಸಮೀಪ ತಿಮ್ಮಣ್ಣ ನಾಯಕನ ಕೆರೆಯಿದೆ. ಈ ಕೆರೆಯ ಸೌಂದರ್ಯ ಸವಿಯಲು ಜಿಟಿ ಜಿಟಿ ಮಳೆಯಲ್ಲೇ ಹೋಗಬೇಕು. ಸುತ್ತಲೂ ಏಳು ಕೆರೆಗಳಿವೆ ಹಾಗೂ ಕೆಳದಿ ಅರಸರ ಪರಂಪರೆಯನ್ನ ಸಾರುತ್ತಿವೆ. ಈ ಸೌಂದರ್ಯವೆಲ್ಲಾ ಕೆಲವೇ ವರ್ಷಗಳಲ್ಲಿ ಮಸುಕಾಗಬಹುದು ಎಂಬ ಆತಂಕ ಕಾಡುತ್ತಿದೆ. ಈಗಾಗಲೇ ಕಾಲೇಜು ವಿದ್ಯಾರ್ಥಿಗಳ ಮೋಜು ಮಸ್ತಿಯ ತಾಣವಾಗಿದ್ದು ಅಲ್ಲಿನ ಗ್ರಾಮ ಪಂಚಾಯಿತಿಯವರು ಪ್ರವೇಶ ಶುಲ್ಕು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಗಮನ ಹರಿಸುವುದಿಲ್ಲ.

ಶಿವಮೊಗ್ಗ ಜಿಲ್ಲೆ ರಾಜಕೀಯ ಶಕ್ತಿಯ ಸಂಚಯನದ ಕೇಂದ್ರ. ಇಷ್ಟೆಲ್ಲಾ ಪ್ರಭಾವಿಗಳಿದ್ದರೂ ಸಹ ಈ ತರಹದ ಕೋಟೆಗಳ ಸಂರಕ್ಷಣೆಗೆ ಮಾತ್ರ ಗಮನ ಹರಿಸುತ್ತಿಲ್ಲ. ರಾಜಸ್ಥಾನದ ಮರಳುಗಾಡಿನಲ್ಲಿ ಕೋಟೆಗಳ ಉನ್ನತೀಕರಣ ನೋಡಿ ನಮ್ಮವರು ಕಲಿಯಬೇಕಿದೆ.

You Might Also Like This