ಮಂಗನ ಕಾಯಿಲೆ(ಕೆಎಫ್ ಡಿ)ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್ ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಾದ ಡಿ.ರಣದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ
ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.೧ ರಿಂದ ಫೆ.೨ ರವರೆಗೆ ರಾಜ್ಯದಲ್ಲಿ ಒಟ್ಟು 2288 ಕೆಎಫ್ ಡಿ ಪರೀಕ್ಷೆ ನಡೆಸಲಾಗಿದ್ದು ಶಿವಮೊಗ್ಗ ದಲ್ಲಿ 12, ಉತ್ತರ ಕನ್ನಡ 34 ಹಾಗು ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಮರಣ ಸಂಭವಿಸಿದೆ. ಕೆಎಫ್ ಡಿ ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆಸ್ಪತ್ರೆ ಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್ ವರೆಗೆ ಇದ್ದು ಈ ವೇಳೆ ತಾಲ್ಲೂಕು ಆಸ್ಪತ್ರೆ ಗಳಾದ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆ ಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಹಾಗು ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು. ಸೋಂಕಿತರಿಗೆ ಎಬಿಎಆರ್ ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯ ರಿಗೆ ಸೂಚಿಸಿದರಲ್ಲದೆ ಜನರಲ್ಲಿ ಕಾಯಿಲೆ ಕುರಿತು ಅರಿವು ಹೆಚ್ಚಿಸಲು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿದರು. ಮಂಗನ ಕಾಯಿಲೆ ವೈರಾಣು ಸೋಂಕಿತ ಉಣ್ಣಿ ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದ್ದು ಜನರು ಕಾಡಿಗೆ ಹೋಗುವ ಮುನ್ನ ಸರ್ಕಾರದ ವತಿಯಿಂದ ನೀಡಲಾಗುವ ಡಿಇಪಿಎ ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚನೆ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 50 ಸಾವಿರ ಬಾಟೆಲ್ ಲಭ್ಯವಿದೆ. ವಿತರಕರ ಬಳಿ ಇರುವುದೂ ಸೇರಿ ಒಟ್ಟು 80 ಸಾವಿರ ದಾಸ್ತಾನಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ ೪ ಬಾಟಲಿಯಂತೆ ೪-೫ ತಿಂಗಳಿಗೆ ನೀಡಲು ತಿಳಿಸಿದರು. ಸಾರ್ವಜನಿಕರು ರಾಜ್ಯ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವುದು, ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ಲಭ್ಯತೆ, ಉನ್ನತ ರೆಫರಲ್ ಸೆಂಟರ್ ಗೆ ಸಾಗಿಸಲು ಆಂಬುಲೆನ್ಸ್ ಸೌಲಭ್ಯ ಒದಗಿಸುವಂತೆ ಸೂಚಿಸಿದರು. ಟೆಲಿ ಐಸಿಯು ವ್ಯವಸ್ಥೆ ಯಲ್ಲಿ ತಜ್ಞ ವೈದ್ಯರ ತಂಡವಿದ್ದು ಶೀಘ್ರದಲ್ಲೇ ಅದರ ಉಪಯೋಗವನ್ನು ಈ ಕಾಯಿಲೆಗು ನೀಡಲಾಗುವುದು. ಕೆಎಫ್ಡಿ ಹೊಸ ಲಸಿಕೆ ಪ್ರಕ್ರಿಯೆಯಲ್ಲಿದ್ದು ಮುಂದಿನ ಅವಧಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದರು.

ಆರೋಗ್ಯ ಇಲಾಖೆ ಪ್ರಕಟಣೆ:
ಆರೋಗ್ಯ ಇಲಾಖೆ ಮಂಗನ ಕಾಯಿಲೆ (ಕ್ಯಾಸನೂರು ಕಾಡಿನ ಕಾಯಿಲೆ)
ಮಂಗನ ಕಾಯಿಲೆ (Kyasanur Forest Disease, KFD) ವೈರಾಣು ಸೋಂಕಿತ ಉಣ್ಣೆ ಮರಿಗಳು (ನಿಂಫ್) ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದೆ. ಈ ಕಾಯಿಲೆಯು ಸಾಮಾನ್ಯವಾಗಿ ನವೆಂಬರ್‌ನಿಂದ ಮೇ ತಿಂಗಳ ಅವಧಿಯಲ್ಲಿ ಕಂಡುಬರುತ್ತದೆ. ಹಠಾತ್ ಜ್ವರ, ಶರೀರದಲ್ಲಿ ತೀವ್ರವಾದ ಸ್ನಾಯುಗಳ ನೋವು, ತಲೆ ನೋವು, ಇತ್ಯಾದಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಿ ನಿರ್ವಹಿಸಬೇಕಿರುತ್ತದೆ.
ಮಂಗನ ಕಾಯಿಲೆಗೆ ರಾಜ್ಯದಲ್ಲಿ 12 KFD ಪೀಡಿತ (ಎಂಡೆಮಿಕ್) ಜಿಲ್ಲೆಗಳು ಇದ್ದರೂ, ವಾಡಿಕೆಯಂತೆ ಪ್ರಸಕ್ತ ವರ್ಷದಲ್ಲಿಯೂ ಮೂರು ಜಿಲ್ಲೆಗಳಿಂದ ಮಾತ್ರ ಪ್ರಕರಣಗಳು ವರದಿಯಾಗುತ್ತಿವೆ. ಈ ವರ್ಷದಲ್ಲಿ ಅಂದರೆ, ದಿ, 01-01-2024 ರಿಂದ 02-02-2024 ರವರಗೆ, ರಾಜ್ಯದಲ್ಲಿ 2,288 ಕೆ.ಎಫ್.ಡಿ. ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ ಶಿವಮೊಗ್ಗ (12), ಉತ್ತರ ಕನ್ನಡ (34) ಹಾಗೂ ಚಿಕ್ಕಮಗಳೂರು (3) ಈ ಜಿಲ್ಲೆಗಳಿಂದ ಒಟ್ಟು 49 ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಮರಣ ವರದಿಯಾಗಿದೆ (ಒಟ್ಟು 2 ಮರಣಗಳು),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತೆಗೆದುಕೊಂಡಿರುವ ಕ್ರಮಗಳೇನು.? ಅಧಿಕಾರಿಗಳ ವಿವರಣೆ
1. ಸಾರ್ವಜನಿಕರು ಅನುಸರಿಸಲು ರಾಜ್ಯ ಮಟ್ಟದಿಂದ ನೀಡಿರುವ ನಿಯಮಗಳನ್ನ ಪಾಲಿಸುವುದು (ಪ್ರತಿ ಲಗತ್ತಿಸಿದೆ).
2. KFD ಪಾಸಿಟಿವ್ ಪ್ರಕರಣಗಳಿಗೆ ಎ.ಬಿ.ಎ.ಆರ್.ಕೆ. ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.
3. KFD ಪಾಸಿಟಿವ್ ಪ್ರಕರಣಗಳು ಪತ್ತೆಯಾದ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ.
4 ರೋಗ ಪ್ರಸರಣಾ ಋತುವಿನಲ್ಲಿ ತಾಲ್ಲೂಕು ಆಸ್ಪತ್ರೆಗಳಾದ ಜೆಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ KFD ಗೆ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.
5. KMC ಮಣಿಪಾಲ, SIMS ಶಿವಮೊಗ್ಗ, KRIMS ಕಾರವಾರ ಆಸ್ಪತ್ರೆಗಳನ್ನು ರೆಫರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ. ಇಲ್ಲಿಯೂ ಸಹ ಎ.ಬಿ.ಏ.ಆರ್.ಕೆ. ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ.
6. KFD ಪಾಸಿಟಿವ್ ಪ್ರಕರಣಗಳನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಮತ್ತು ಅಗತ್ಯವಿದ್ದರೆ, ಉನ್ನತ ರೆಫರಲ್ ಸೆಂಟರ್ ಸಾಗಿಸಲು ಉಚಿತ ಅಂಬ್ಯುಲೆನ್ಸ್ ಸೌಲಭ್ಯ ಒದಗಿಸಿದೆ.
7. KFD ಪೀಡಿತ ಪ್ರದೇಶದ ಎಲ್ಲಾ PHC ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಬೇಕಾಗುವ ಸಾಕಷ್ಟು IV ದ್ರಾವಣ, IV ಪ್ಯಾರಸಿಟಮಾಲ್, ಇತ್ಯಾದಿ ಔಷಧ ಪರಿಕರಗಳ ದಾಸ್ತಾನು ಇರಿಸಲಾಗಿದೆ.
8. ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ DEPA ತೈಲವನ್ನು ಸಾರ್ವಜನಿಕರಿಗೆ ಬಳಸಲು ಉಚಿತವಾಗಿ ನೀಡಲಾಗಿದೆ.
9. ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ DEPA ತೈಲವನ್ನು ರಾಜ್ಯ ಮಟ್ಟದಲ್ಲಿ ಖರೀದಿಸಿದ್ದು, ಸಾಕಷ್ಟು ದಾಸ್ತಾನು
ಲಭ್ಯವಿದೆ. ಅಗತ್ಯವಿದ್ದಲ್ಲಿ, DEPA ತೈಲವನ್ನು ಸ್ಥಳೀಯವಾಗಿ ಖರೀದಿಸಲು ಆದೇಶಿಸಲಾಗಿದೆ.
10. ICU ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿ-ಗತಿಯನ್ನು ಪ್ರತಿದಿನ ಪರೀಶೀಲಿಸಲು ಟೆಲಿ-ICU ಸೇವೆಯನ್ನು KFD ಗೂ ವಿಸ್ತರಿಸಲಾಗಿದೆ.
11. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ KFD ಪ್ರಯೋಗಾಲಯವನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದು NIV ಪುಣೆ ಇವರ ಸಹಯೋಗವನ್ನು ಕೋರಲಾಗಿದೆ.