ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶ ಒತ್ತುವರಿ ತೆರವು ವೇಳೆ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಬಿಜೆಪಿ ಮುಖಂಡ ಹಾಗೂ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೂ ದೂರಿನ ಪ್ರತಿಯನ್ನ ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಹರೀಶ್ ಪೂಂಜ ವಿರುದ್ಧ IPC 1860 (U/s-143,353,504,149) ಅಡಿ FIR ಆಗಿದೆ.

ಹಾಗಾದರೆ ಪ್ರಕರಣದ ಸಾರಾಂಶವೇನು..?
ನಾನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ನನ್ನ ವಲಯದ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕು ಕಾಳಂಜ ಗ್ರಾಮದ ಸರ್ವೇ ನಂಬರ್ ೩೦೯ರಲ್ಲಿ ಲೋಲಾಕ್ಷಗೌಡ ಎಂಬುವರು ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡಿರುತ್ತಾರೆ ಹಾಗೂ ಮನೆ ಕಟ್ಟಲು ಮುಂದಾಗಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಭಂದಿಯೊಂದಿಗೆ ದಿನಾಂಕ: 09-10-2023ರಂದು ಬೆಳಗ್ಗೆ ಭೇಟಿ ನೀಡಿದ್ದೆ. ಪರಿಶೀಲನೆ ವೇಳೆ ಲೋಲಾಕ್ಷಗೌಡ ಎಂಬುವರು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಫೌಂಡೇಶನ್ ಹಾಕಿರುವುದು ಕಂಡು ಬಂತು. ಕಾನೂನು ಬಾಹಿರ ನಿರ್ಮಾಣವನ್ನ ತೆರವು ಮಾಡಲು ಮನವಿ ಮಾಡಿದರೂ ಸಹ ಲೋಲಾಕ್ಷ ಗೌಡರು ತೆರವು ಮಾಡದ ಕಾರಣ, ಸಿಬ್ಬಂದಿಯೊಂದಿಗೆ ನಾವೇ ತೆರವು ಮಾಡಲು ಮುಂದಾದಾಗ ಮಾನ್ಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಬೆಂಬಲಿಗರೊಂದಿಗೆ ಸ್ಥಳದಲ್ಲಿದ್ದು ನಮ್ಮನ್ನ ತಡೆದರು. ಹಾಗೂ ಅಧಿಕಾರಿಗಳ ಸಮ್ಮುಖದಲ್ಲೇ ನನ್ನನ್ನ ‘ ಏ ಲೋಫರ್ ನನ್ನ ಮಗ ‘ ಎಂಬ ಅಸಂಸದೀಯ ಪದಗಳನ್ನ ಬಳಸಿ, ಸದರಿ ನಿವೇಶನ ತೆರವುಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಬೆದರಿಕೆ ಹಾಕಿರುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಪಿರ್ಯಾದುದಾರ ಆರ್‌ಎಫ್‌ಓ ಜಯಪ್ರಕಾಶ್ ಕೆ.ಕೆ ದೂರಿದ್ದಾರೆ.