8 ಬಾರಿ ಅಂಬಾರಿ ಹೊತ್ತ ಅರ್ಜುನ ಸಮಾಧಿಗೆ ಈಶ್ವರ ಖಂಡ್ರೆ ಪುಷ್ಪ ನಮನ.
ನಿವೃತ್ತ ಮುಖ್ಯ ಅರಣ್ಯ ಪರಿಪಾಲಕರ ನೇತೃತ್ವದ ಸಮಿತಿಯಿಂದ ಸಾವಿನ ತನಿಖೆ.
ಯಸಳೂರು ಮತ್ತು ಬಳ್ಳೆಯಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ.
ಹಾಸನ: ಯಸಳೂರು ಅರಣ್ಯ ವಲಯದಲ್ಲಿ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದರೂ, ಅರಣ್ಯ ಸಿಬ್ಬಂದಿಯನ್ನು ರಕ್ಷಿಸಲು ಏಕಾಂಗಿಯಾಗಿ ಹೋರಾಡಿ ಹುತಾತ್ಮನಾದ ಕ್ಯಾಪ್ಟನ್ ಅರ್ಜುನನ ಸಾವಿನ ಕುರಿತಂತೆ ಕೆಲವರು ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಅರಣ್ಯ ಪರಿಪಾಲಕರ ನೇತೃತ್ವದ ಉನ್ನತ ತನಿಖಾ ಸಮಿತಿ ರಚಿಸಲಾಗಿದ್ದು, 15 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಭಾನುವಾರ ಮಧ್ಯಾಹ್ನ ಹಾಸನ ಜಿಲ್ಲೆ ಯಸಳೂರು ಅರಣ್ಯದ ನೆಡುತೋಪಿಗೆ ಭೇಟಿ ನೀಡಿ, ಅರ್ಜುನ ಆನೆಯ ಸಮಾಧಿಗೆ ಪುಷ್ಪ ನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅರ್ಜುನನ ಸಾವು ನಮಗೆಲ್ಲರಿಗೂ ಅತ್ಯಂತ ದುಃಖದ ವಿಷಯವಾಗಿದೆ. ಅರ್ಜುನ ಅರಣ್ಯ ಇಲಾಖೆಯ ಅಚ್ಚುಮೆಚ್ಚಿನ ಆನೆಯಾಗಿತ್ತು. ಎಲ್ಲ ಕಾರ್ಯಾಚರಣೆಗೂ ಇದು ಮೊದಲ ಆದ್ಯತೆಯಾಗಿತ್ತು. ಕಾಡಾನೆ ಕಾರ್ಯಾಚರಣೆಯ ವೇಳೆ ಅಧಿಕಾರಿಗಳು ಎಲ್ಲಾ ಮಾನದಂಡ ಅನುಸರಿಸಿದ್ದಾರೆ. ಆದರೂ ಕೆಲವರು ಕಾರ್ಯಾಚರಣೆ ವೇಳೆ ಲೋಪವಾಗಿದೆ, ಸಾಕಾನೆಗೆ ಅರಿವಳಿಕೆ ಚುಚ್ಚು ಮದ್ದು ತಾಕಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಕಾರ್ಯಾಚರಣೆಯಲ್ಲಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.)ದಲ್ಲಿ ಲೋಪವಾಗಿದೆಯೇ, ಅರ್ಜುನನಿಗೆ ಆಕಸ್ಮಿಕವಾಗಿ ತೋಟ ತಾಗಿದೆಯೇ ಎಂಬ ನಿಟ್ಟಿನಲ್ಲೂ ಪಾರದರ್ಶಕವಾಗಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಯಸಳೂರು, ಬಳ್ಳೆಯಲ್ಲಿ ಅರ್ಜನನ ಸ್ಮಾರಕ:
ಅರ್ಜುನನ ಅಂತ್ಯ ಸಂಸ್ಕಾರ ನಡೆದ ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ ಮತ್ತು ಅರ್ಜುನ ಇಷ್ಟು ದಿನಗಳ ಕಾಲ ವಾಸವಾಗಿದ್ದ, ನಾಗರಹೊಳೆಯ ಬಳ್ಳೆಯಲ್ಲಿ ಎರಡು ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದರು. ಈ ಸ್ಮಾರಕಗಳಲ್ಲಿ ಅರ್ಜುನ ಚಿನ್ನದ ಅಂಬಾರಿ ಹೊತ್ತ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು ಎಂದು ಹೇಳಿದರು.

ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯ ಪ್ರಗತಿಯಲ್ಲಿದೆ.
ಹಾಸನ ಜಿಲ್ಲೆಗೆ ಕಾಡಾನೆಗಳ ಹಿಂಡು ಬಂದಿರುವ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿದ್ದು, ಕಳೆದ ನ.24 ರಿಂದಲೇ ಆನೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ, ಈವರೆಗೆ 5 ಆನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ದುರ್ಘಟನೆ ಅನಿರೀಕ್ಷಿತ. ಇಡೀ ನಾಡಿಗೆ ಆಘಾತ ತಂದಿದೆ ಎಂದರು. ವನ್ಯಜೀವಿಗಳ ಸೆರೆ ಕಾರ್ಯಾಚರಣೆ ಅತ್ಯಂತ ಅಪಾಯಕಾರಿ ಹಾಗೂ ಕಷ್ಟಕರವಾದದು, ಅರಣ್ಯ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾಗ್ಯೂ ದುರ್ಘಟನೆ ಸಂಭವಿಸಿದೆ, ಇನ್ನು ಮುಂದೆ ಈ ರೀತಿ ಅವಘಡಗಳು ಸಂಭವಿಸದಂತೆ ಕಟ್ಟು ನಿಟ್ಟಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ ಅನುಸರಿಸಲು, ಜಾಗರೂಕತೆ ವಹಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲೇ ಅಧಿಕ ಸಂಖ್ಯೆಯಲ್ಲಿ ಆನೆಗಳು ಇಲ್ಲಿ ಇವೆ.
ದೇಶದಲ್ಲಿಯೇ ಅತಿ ಹೆಚ್ಚು ಆನೆಗಳು ಕರ್ನಾಟಕದಲ್ಲಿವೆ. ಸುಮಾರು 6,395 ಕಾಡಾನೆಗಳು ನಮ್ಮ ರಾಜ್ಯದಲ್ಲಿವೆ. ವನ್ಯ ಮೃಗಗಳು ಕಾಡಿನಿಂದ ಆಚೆ ಬರುತ್ತಿರುವುದಕ್ಕೆ ಕಾಡು ನಾಡಾಗುತ್ತಿರುವುದೂ ಒಂದು ಕಾರಣ. ನಾಗರೀಕರಣ ಹೆಚ್ಚಾದಂತೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿದೆ. ಕಾಡಾನೆ ಸಮಸ್ಯೆ ತಡೆಯುವ ನಿಟ್ಟಿನಲ್ಲಿ ಹಾಗೂ ವನ್ಯಜೀವಿಗಳ ಉಪಟಳ ನಿಯಂತ್ರಿಸಲು ಹಂತ ಹಂತವಾಗಿ ಇಲಾಖೆ ಕ್ರಮ ಕೈಗೊಳ್ಳಲಿದೆ.ಈಗಾಗಲೇ ಕಾಡಾನೆ ನಾಡಿಗೆ ಬಾರದಂತೆ ತಡೆಯಲು ಕಂದಕ ನಿರ್ಮಾಣ, ಸೌರ ತಂತಿ ಬೇಲಿ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದರು.
ಹೊರಗುತ್ತಿಗೆ ಸಿಬ್ಬಂದಿಗೆ ಸಕಾಲದಲ್ಲಿ ವೇತನ:
ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳೂ ನಿಗದಿತ ದಿನಾಂಕದೊಳಗೆ ಸಂಬಳ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಸಿಬ್ಬಂದಿಗಳಿಗೆ ಸಮವಸ್ತ್ರ ಹಾಗೂ ರಕ್ಷಣಾ ಸಲಕರಣೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯವನ್ನು ಒದಗಿಸಲೂ ತಿಳಿಸಲಾಗಿದೆ ಎಂದರು.

ಕಾಡಾನೆ ಭೀಮ ಪ್ರತ್ಯಕ್ಷ:
ಶಾರ್ಪ್ ಶೂಟರ್ ವೆಂಟೇಶ್‌ನನ್ನ ಬಲಿ ಪಡೆದಿದ್ದ ಕಾಡಾನೆ ಭೀಮ ಸಂಪೂರ್ಣ ಗುಣಮುಖವಾಗಿ ಗ್ರಾಮಗಳಲ್ಲಿ ರಾಜಾರೋಶವಾಗಿ ತಿರುಗುತ್ತಿದ್ದಾನೆ. ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಗ್ರಾಮದಲ್ಲಿ ಗ್ರಾಮಸ್ಥರೇ ಈ ಕಾಡಾನೆಗೆ ಕಬ್ಬು ಎಸೆದು ವಿಡಿಯೋ ಮಾಡಿದ್ದಾರೆ. ಕಬ್ಬು ತಿನ್ನುತ್ತಲೇ ಗ್ರಾಮದೊಳಗೆ ಗಾಂಭೀರ್ಯದಿಂದ ನಡೆದು ಹೋದ ಭೀಮನನ್ನ ಕಂಡ ಯುವತಿ, ಚಿನ್ನ ಬಂಗಾರಿ ಎಂದರೆ, ಅಲ್ಲಿದ್ದ ಅಜ್ಜ ಮಾತ್ರ ಆನೆ ಕುರಿತು ಮುಂದಿನ ದಿನಗಳಲ್ಲಿ ಅಂಬಾರಿ ಹೊರವವನು ಇವನೇ ಎಂದರು.