ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಅರಣ್ಯ ಇಲಾಖೆ ಪೂರ್ವಾನುಮತಿ ಪಡೆಯದೇ ಸುಮಾರು 40 ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಸಾವಿರಾರು ಮರಗಳನ್ನು ನೆಲಸಮ ಮಾಡಲಾಗಿದೆ. ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಲೋಪ ಎಸಗಿರೋದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತು ಪ್ರಕರಣ ದಾಖಲಿಸಲಾಗಿದೆ. ಗುತ್ತಿಗೆದಾರನ ಪ್ರಕಾರ
ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮೌಖಿಕ ಆದೇಶ ನೀಡಿದ್ದರಂತೆ. ಸರ್ಕಾರಿ ಜಾಗದಲ್ಲಿ ಮರಗಳನ್ನು ಕಡಿಯಲೂ ಸಹ ಅರಣ್ಯ ಇಲಾಖೆಯ ನಿಯಮಗಳು ಅನ್ವಯವಾಗುತ್ತವೆ. ಆದರೆ ಕಂದಾಯ ಅಧಿಕಾರಿಗಳ ಲಾಲಸೆಗೆ ಗುಡ್ಡಗಳಿಂದು ನೆಲಸಮವಾಗುತ್ತಿವೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿಯೂ ಕೂಡ ಕೊಪ್ಪರಿಗೆ ಗುಡ್ಡ ನೆಲಸಮ ಮಾಡಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಜಮೀನು ಎಂದು ಹೇಳಲಾದರೂ ಸಹ ಹಿಂದೆ ಕರಡದ ಬ್ಯಾಣ ಎಂದು ಮೀಸಲಿದ್ದ ಜಾಗವೂ ಸೇರಿದೆ ಎಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಯಾಗಿದೆ.

ಸೀಬಿನಕೆರೆಯಿಂದ ಕಾಣುವ ಕೊಪ್ಪರಿಗೆ ಗುಡ್ಡದ ದೃಶ್ಯ
ಪಟ್ಟಣದಿಂದ ಹತ್ತು ಕಿಲೋಮೀಟರ್ ದೂರದ ಕೊಪ್ಪರಿಗೆ ಗುಡ್ಡದ ಒಂದು ಭಾಗವನ್ನೇ ನೆಲಸಮ ಮಾಡಲಾಗಿದೆ. ಸುಮಾರು ಮೂವತ್ತು ನಾಲ್ಕು ಎಕರೆ ಜಾಗ ಪ್ರಭಾವಿಗಳು ಲೇಔಟ್ ಮಾಡುತ್ತಿದ್ದಾರೆ. ಇದು ನಾಲ್ಕೈದು ಕಿಲೋಮೀಟರ್ ದೂರಕ್ಕೆ ಸೀಬಿನಕೆರೆಯಿಂದ ಗೋಚರವಾಗುತ್ತದೆ. ಈ ಗುಡ್ಡದಲ್ಲಿ ಚಿರತೆ, ಕುರ್ಕ, ಮೊಲ, ಜಿಂಕೆ, ಕಾಡುಹಂದಿ, ಕೆಂದಳಿಲು, ಹಾವು, ಮರಗಪ್ಪೆ, ಮರದ ಪಾರಿವಾಳ, ನೀಲಿ ಕಲ್ಲು ಗುಟುರ, ಫ್ಲೈಕ್ಯಾಚರ್, ಅಪರೂಪದ ಹಕ್ಕಿಗಳ ಆಶ್ರಯ ತಾಣವಾದ ಈ ಗುಡ್ಡ ಮಲೆನಾಡಿನ ಮಳೆ ತಡೆವ ಶೋಲಾ ಮಾದರಿಯ ಕಾಡು. ಹಾಗೂ ಹಿಂದಿನ ಭೂ ಕುಸಿತ ಘಟನೆಗಳನ್ನು ನೋಡಿದರೆ ಅತ್ಯಂತ ಸೂಕ್ಷ್ಮ ಪರಿಸರ. ಇಲ್ಲಿ ಭಾರಿ ಪ್ರಮಾಣದ ಹಿಟಾಚಿ, ಜೆಸಿಬಿ ಯಂತ್ರ ಬಳಕೆ ಭೂಕುಸಿತ ಆತಂಕ ಸೃಷ್ಟಿಸಿದೆ.
ಹೊದಲ-ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಪ್ರದೇಶದಲ್ಲಿ ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಸ್ವತಃ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿರುಗಿಬಿದ್ದಿದ್ದಾರೆ. ಈ ಹಿಂದೆಯೂ ಲೇಔಟ್‌ಗಳಿಗೆ ಇಲ್ಲಿ ಅನುಮತಿ ನೀಡದಂತೆ ಪ್ರತಿಭಟನೆ ಮಾಡಿದ್ದರು. ಈ ಕುರಿತು ಮಾತನಾಡಿದ ಜ್ಞಾನೇಂದ್ರ, ಸುಮಾರು ಮೂರು ಎಕರೆ ಸರ್ಕಾರಿ ಜಮೀನು ಕೂಡ ಕಬಳಿಕೆಯಾಗಿದೆ. ಆದರೆ ತೀರ್ಥಹಳ್ಳಿ ತಹಸೀಲ್ದಾರ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಲೇಔಟ್ ಮಾಡುವ ಮುನ್ನವೇ ಗುಡ್ಡ ಜರಿದಿದೆ. ವಿಧಾನಸಭಾ ಕಲಾಪದಲ್ಲೂ ಈ ಕುರಿತು ದನಿ ಎತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಮಾತನಾಡಿ, ಶಾಸಕರ ವಾದವನ್ನು ತಳ್ಳಿ ಹಾಕುತ್ತಾರೆ. ಈಗಾಗಲೇ ಜಂಟಿ ಸರ್ವೇ ಮಾಡಲಾಗಿದೆ. ಕೆಲ ಗುಂಟೆಗಳಷ್ಟು ಮಾತ್ರ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು ಉಳಿದದ್ದು ಖಾಸಗಿ ಜಮೀನು ಎನ್ನುತ್ತಾರೆ. ಗುಡ್ಡ ಜರಿದ ಬಗ್ಗೆ ಮಾಹಿತಿ ಇಲ್ಲದ ಕೆ.ಎ.ಎಸ್ ಅಧಿಕಾರಿ ಮಣ್ಣು ತೆಗೆದ ಪ್ರಮಾಣ ಪರಿಶೀಲನೆ ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕೆಲಸ ಎನ್ನುತ್ತಾರೆ. ಶಿವಮೊಗ್ಗ ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪಿ.ಕುಮಾರ್ ನಾಯ್ಕ್ ಅವರನ್ನು ಸಂಪರ್ಕಿಸಿದಾಗ ADLR ರಿಪೋರ್ಟ್ ಬಂದ ಮೇಲೆ ಇಲಾಖೆ ಪರಿಶೀಲನೆ ಮಾಡುತ್ತೆ ಎನ್ನುತ್ತಾರೆ.

ಲೇಔಟ್ ಜಾಗದಲ್ಲಿ ಗುಡ್ಡ ಜರಿದಿರುವುದು
ಮಳೆಗಾಲದಲ್ಲಿ ಗುಡ್ಡದ ಮೇಲೆ ಸುರಿಯುವ ಮಳೆನೀರನ್ನು ಏಕಜಾತಿಯ ಹುಲ್ಲು, ಗಿಡಗಳು ಕಾಪಿಟ್ಟುಕೊಳ್ಳುತ್ತಿವೆ. ಇದರಿಂದ ಸುತ್ತಮುತ್ತಲ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಸದಾಕಾಲ ನೀರು ಜಿನುಗಲು ಅನುಕೂಲಕರ ವಾತಾವರಣ ಕಲ್ಪಿಸಿರುವ ಹಿಂದೆ ಅರಣ್ಯ ಲಕ್ಷಣಗಳಿದ್ದ ಜಾಗದಲ್ಲಿ ಮರಗಳನ್ನು ಕಡಿದು, ಪೊದೆಗಳನ್ನು ನೆಲಸಮ ಮಾಡಿದರೂ ಅರಣ್ಯ ಇಲಾಖೆ ಈ ತನಕ ಒಂದೂ ಪ್ರಕರಣ ದಾಖಲಿಸಿಲ್ಲ. ಈ ಕುರಿತು ಮಾಹಿತಿಗೆ ತೀರ್ಥಹಳ್ಳಿ ACF ಮಧುಸೂದನ್ ಅವರನ್ನು ಸಂಪರ್ಕಿಸಿದರೂ ಸ್ಪಂದನೆ ಸಿಗಲಿಲ್ಲ.
ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ತಮ್ಮ ಹಿಂದಿನ ಆದೇಶದಲ್ಲಿ ಪಶ್ಚಿಮ ಘಟ್ಟ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಆದೇಶ ನೀಡಿದ್ದರು. ತೀರ್ಥಹಳ್ಳಿ ರಕ್ಷಾ ಕವಚದಂತಿದ್ದ ಕೊಪ್ಪರಿಗೆ ಗುಡ್ಡದಲ್ಲಿ ಭೂಕುಸಿತ ಸಂಭವಿಸಿದರೆ ಸಮೀಪವೇ ಹರಿಯುವ ಕುಶಾವತಿ ನದಿಯ ದಿಕ್ಕು ಬದಲಾಗಲಿದೆ. ಹಲಸಿನಹಳ್ಳಿ, ತೀರ್ಥಹಳ್ಳಿ ಪಟ್ಟಣದ ನಾಡ್ತಿ, ಬೆಟ್ಟಮಕ್ಕಿ, ಚಿಟ್ಟೇಬೈಲು, ಶಿರುಪತಿ, ಕಿತ್ತನಗದ್ದೆ, ಇಂದಾವರ, ಬದನೇಹಿತ್ಲು ಮಜರೆ ಗ್ರಾಮ, ಬಡಾವಣೆಗಳ ಸಾವಿರಾರು ಜನವಸತಿ, ಸಾಗುವಳಿ ಪ್ರದೇಶ ನದಿ ಪಾಲಾಗಲಿದೆ.







