ಶಿವಮೊಗ್ಗ: ರಾಷ್ಟ್ರೀಯ ವನ್ಯಜೀವಿ ಸ್ಥಾಯಿ ಸಮಿತಿ ಸದಸ್ಯರಾದ ರಮಣ್ ಸುಕುಮಾರ್, ಹರಿಶಂಕರ್ ಸಿಂಗ್ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ತಾತ್ಕಾಲಿಕ ತಡೆ ನೀಡಿರುವ ಸದಸ್ಯರು. ಈಗಾಗಲೇ ಸಲ್ಲಿಸಿರೋ ಮಾಹಿತಿ ಅಸಮರ್ಪಕ ಹಿನ್ನೆಲೆ ಖುದ್ದು ಪರಿಶೀಲನೆಗೆ ಬಂದಿರುವ ಇಬ್ಬರೂ ಸದಸ್ಯರು ಸಲ್ಲಿಸಬಹುದಾದ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವರದಿ ಕಾನೂನು ಹೋರಾಟಕ್ಕೂ ಅನುವಾಗಲಿದೆ.
ಪರಿಸರದ ಬಗ್ಗೆ ಕಾಳಜಿ ಇರುವಂತೆ ತೋರುವ ಇಬ್ಬರೂ ಕೂಡ ಮೂರು ದಿನಗಳ ಸಾಗರ ( ಶರಾವತಿ ಕಣಿವೆ ) ಪ್ರವಾಸದಲ್ಲಿ ಸಣ್ಣ ಭರವಸೆ ಮೂಡಿಸಿದ್ದಾರೆ ಎನ್ನಲಾಗಿದೆ. ಶನಿವಾರ ಸಾಗರ ಪಟ್ಟಣಕ್ಕೆ ಆಗಮಿಸಿದ ತಂಡದ ಜೊತೆ ಇನ್ಸ್‌ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ಆಫ್ ದಿ ನ್ಯಾಷನಲ್ ಟೈಗರ್ ಕನ್ಸರ್ವೇಶನ್ ಅಥಾರಿಟಿ ಶಿವಕುಮಾರ್ ಸಿಎಂ ಕೂಡ ಇದ್ದರು. ಸಾಗರದ pwd ಗೆಸ್ಟ್ ಹೌಸ್‌ಲ್ಲಿ KPC ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಕೂಡ ಹಾಜರಿದ್ದರು. ನಂತರ ಶಿವಮೊಗ್ಗ ಸೇರಿ ನಾನಾ ಕಡೆಯಿಂದ ಆಗಮಿಸಿದ್ದ ಪರಿಸರಾಸಕ್ತರು ಹಾಗೂ ಈ ಯೋಜನೆಗೆ ಬೆಂಬಲ ನೀಡಲೂ ಬಂದಿದ್ದ ತಂಡ ಇವರನ್ನು ಭೇಟಿ ಮಾಡಲು ಅವಕಾಶ ನೀಡಿತ್ತು. ಈ ವೇಳೆ Rainland ಪರವಾಗಿ ಪತ್ರಕರ್ತ ಉದಯ ಸಾಗರ್ ಇದ್ದರು.

ಪ್ರಸ್ತಾವಿತ 2000 ಮೆಗಾವ್ಯಾಟ್ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಪರಿಸರಾಸಕ್ತರು ತಕರಾರು ಮನವಿ ಸಲ್ಲಿಸಿದ್ದರು. ಪರಿಸರದ ಮೇಲೆ ಆಗಬಹುದಾದ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿ, ಶರಾವತಿ ಕಣಿವೆಯಲ್ಲಿ ಪರಿಸರವಷ್ಟೇ ಅಲ್ಲ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರಾ ತಾಣಗಳ ಮೇಲೆ ಆಗಬಹುದಾದ ಪರಿಣಾಮದ ಬಗ್ಗೆ ಅಗತ್ಯ ಮಾಹಿತಿ ನೀಡಿದ್ದರು. ಕೆಲವರು ಸುಪ್ರೀಂಕೋರ್ಟ್ ಪುನರುಚ್ಛರಿಸಿದಂತೆ ೨೪ ಮೆಗಾವ್ಯಾಟ್‌ಗಿಂತ ಅಧಿಕ ವಿದ್ಯುತ್ ಉತ್ಪಾದನಾ ಯುನಿಟ್‌ಗಳನ್ನು ಪರಿಸರ ಸೂಕ್ಷ್ಮವಲಯದಲ್ಲಿ ಮಾಡುವಂತಿಲ್ಲ ಎಂದು ಜ್ಞಾಪಿಸಿದರು. ಆಸಕ್ತಿಯಿಂದ ಎಲ್ಲರ ಮಾತುಗಳನ್ನು ಇಬ್ಬರೂ ಸದಸ್ಯರು ಆಲಿಸಿದರು.
“ಪ್ರಸ್ತಾವಿತ ಯೋಜನೆಯು ಪರಿಸರ ಸೂಕ್ಷ್ಮ ವಲಯವಷ್ಟೇ ಅಲ್ಲದೇ ಪುರಾತತ್ವ ಮಹತ್ವವುಳ್ಳ ಐತಿಹಾಸಿಕ ತಾಣಗಳನ್ನೂ ಹಾಳುಗೆಡುವಲಿದೆ ಎಂದು ಇತಿಹಾಸಜ್ಞ ಅಜಯ್ ಕುಮಾರ್ ಶರ್ಮಾ ಹೇಳಿದರು. ಯೋಜನೆಗೆ ಸುರಂಗ ನಿರ್ಮಾಣ, ಸ್ಫೋಟಗಳಿದಮ ರಕ್ಷಿತ ಸ್ಮಾರಕಗಳು ಮತ್ತು ದೇವಾಲಯಗಳು ನಶಿಸಲಿವೆ. ಕಾಳುಮೆಣಸಿನ ರಾಣಿ ಎಂದು ಖ್ಯಾತರಾಗಿದ್ದ 16ನೇ ಶತಮಾನದ ವೀರ ರಾಣಿ ಚೆನ್ನಬೈರಾದೇವಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಕುರುಹುಗಳಿಗೆ ಹಾನಿಯಾಗಲಿದೆ. ಈ ಜಾಗದಲ್ಲಿ ಇಂತಹ ಯೋಜನೆ ಮಾಡಲು ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ( Monument authority of India ) ಅನುಮತಿ ಅಗತ್ಯ ಎಂದು ಮನವರಿಕೆ ಮಾಡಿದರು.
ಡಾ. ಸವಿನಯ ಅವರು ಗೇರುಸೊಪ್ಪಾದಲ್ಲಿ ಮಾತ್ರ ಕಂಡುಬರುವ ಅಳಿವಿನಂಚಿನಲ್ಲಿರುವ ಸಸ್ಯವರ್ಗ ಫ್ರೈಸೊಡಿಯೆಲ್ಸಿಯಾ ಸಹ್ಯಾದ್ರಿಕಾ ( Friesodielsia sahyadric ) ವಿನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗ್ರೀನ್ ಲೈವ್ಸ್ ಟ್ರಸ್ಟ್‌ನ ಶ್ರವಣ್ ಹಾಗೂ ಮನೋಹರ್ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಈ ಯೋಜನೆಯು ಉಲ್ಲಂಘಿಸುತ್ತದೆ ಮತ್ತು ಸೌರಶಕ್ತಿ ಮತ್ತು ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆಗಳಂತಹ ಪರ್ಯಾಯ ಶಕ್ತಿ ಪರಿಹಾರಗಳು ಲಭ್ಯವಿವೆ ಎಂದು ಮನವಿ ಮಾಡಿದರು. ಮುಂಚೂಣಿ ಪರಿಸರವಾದಿ ಅಖಿಲೇಶ್ ಚಿಪ್ಪಳಿ, ಗಿರೀಶ್ ಜನ್ನೆ, ಶಂಕರ್ ಶರ್ಮಾ, ಕೆ.ಎಲ್ ಶ್ರೀಪತಿ, ಬಿಎಂ ಕುಮಾರಸ್ವಾಮಿ ಸೇರಿ ಹಲವರುಮನವಿಗಳನ್ನು ನೀಡಿದರು.
ಕೆಲವು ಭಿನ್ನ ಅಭಿಪ್ರಾಯಗಳೂ ಕೂಡ ಕೇಳಿ ಬಂದವು. ಕೆಲವರು ಈ ಯೋಜನೆ ಬೇಕು ಎಂದೂ ಕೂಡ ಮನವಿ ಮಾಡಿದರು. ಇಂತಹ ಯೋಜನೆಗಳಿಂದ ಪರಿಸರ ನಾಶವಿಲ್ಲ. ಹಿಂದಿನ ಯೋಜನೆಗಳಿಂದಲೇ ಈ ಪ್ರದೇಶ ನಿಷೇಧಿತವಾಗಿದ್ದು ಕಾಡು ಉಳಿದಿದೆ. ಯೋಜನೆಯಿಂದ ಜನರಿಗೆ ಅನುಕೂಲ ಇದೆ ಎಂದು ಹೇಳಿದರು. ಬಹಳ ಮುಖ್ಯವಾಗಿ ಹರಿಶಂಕರ್ ಅವರು ತಾವು ಎಂಎಸ್‌ಇ ( ಫಿಜಿಕ್ಸ್ ಹಿನ್ನೆಲೆ ) ಎಂದು ಆಸಕ್ತಿಯಿಂದ ಪಂಪ್ಡ್ ಸ್ಟೋರೇಜ್ ಬಗ್ಗೆ ನಿವೃತ್ತ ಪ್ರೊಫೆಸರ್ ಶ್ರೀಪತಿ ಹಾಗೂ ನಿವೃತ್ತ ಎಂಜಿನಿಯರ್ ಶಂಕರ್ ಶರ್ಮಾ ಅವರ ಬಳಿ ಮಾತನಾಡಿದ್ದು ವಿಶೇಷವಾಗಿತ್ತು. ಮೂಲಗಳ ಪ್ರಕಾರ ಇದು ೨೦೦೦ ಮೆಗಾವ್ಯಾಟ್ ಅಲ್ಲ ಎಂಬ ಮಾಹಿತಿಯೂ ಸಿಕ್ಕಿದೆ. ಭಾನುವಾರ ಕಾರ್ಗಲ್ ಭಾಗದಲ್ಲಿ, ಸೋಮವಾರ ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಭಾಗದಲ್ಲಿ ಓಡಾಡಿದ ಸದಸ್ಯರು ಮಾರುತಿ ಗುರೂಜಿಯವರಿಂದಲೂ ಪ್ರತ್ಯೇಖ ಮನವಿ ಸ್ವೀಕರಿಸಿದರು. ಅರ್ಧ ಗಂಟೆ ಚರ್ಚೆ ಮಾಡಿ ಗುರೂಜಿಯವರಿಗೆ ಭರವಸೆ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ರಾಜಕೀಯ ಭಯ ಬಿಟ್ಟರೆ ತಮ್ಮದೇನೂ ಹಿತಾಸಕ್ತಿ ಇಲ್ಲ. ಪರಿಸರ ಕಾಳಜಿಯೇ ಆಸಕ್ತಿ ಎಂದಿದ್ದಾರೆ ಎನ್ನಲಾಗಿದೆ. ಹಲವರು ಗೇರುಸೊಪ್ಪಾದಲ್ಲಿ ಈ ತಂಡ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಈ ಮಧ್ಯೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪಂಪ್ಡ್ ಸ್ಟೋರೇಜ್ ಯೋಜನೆ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಬೇಡ್ತಿ-ವರದಾ ನದಿ ತಿರುವು ಯೋಜನೆ ಜೊತೆ ಇದೂ ಕೂಡ ಆಗಲಿದೆ. ವಿರೋಧ ಇದೆ ಎಂದು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಲು ಆಗದು. ಪಂಪ್‌ಸೆಟ್‌ಗೆ ಹಾಗೂ ಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಎಲ್ಲಿಂದ ವಿದ್ಯುತ್ ಬರುತ್ತೆ ಎಂಬ ಮಾತಿನ ಧಾಟಿಯಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ನದಿ ತಿರುವು ಯೋಜನೆ ರಾಜ್ಯದೊಳಗಿನದ್ದು ಹಾಗಾಗಿ ಇಂತಹ ಅವಕಾಶ ಜನರಿಗೆ ಸಹಾಯವಾಗುತ್ತೆ ಎಂದಿದ್ದಾರೆ.
ರೇನ್ ಲ್ಯಾಂಡ್‌ಗೆ ಸಿಕ್ಕ ಮಾಹಿತಿಯಲ್ಲಿ ಕೆಲ ಹೋರಾಟಗಾರರು ವಾರಗಳ ಹಿಂದೆ ಡಿಸಿಎಂ ಅವರನ್ನು ಭೇಟಿಯಾಗಿದ್ದರು. ಕೆಲವರು ದೆಹಲಿ ಮೂಲದ ಹಿರಿಯ ವಕೀಲರ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ಕದ ತಟ್ಟಲು ಸಿದ್ಧರಿದ್ಧಾರೆ. ಹೋರಾಟಗಾರರಲ್ಲೂ ಮುಸುಕಿನ ಗುದ್ದಾಟವಿದ್ದು ಪರಿಸರಾಸಕ್ತಿ ಮಸುಕಾಗದಿರಲಿ ಎಂಬುದೇ ನಮ್ಮ ಆಶಯ.








