ಕರ್ನಾಟಕದ ಖ್ಯಾತ ಕಂಟೆಂಟ್ ಕ್ರಿಯೇಟರ್ ಹಾಗೂ ಮಲೆನಾಡು (ಚಿಕ್ಕಮಗಳೂರು) ಮೂಲದ ಸುಮಂತ್ ಗೌಡ ( SG_ Malenadu/ SG_Yaaana ) ವನ್ಯಜೀವಿ ಕಾಯ್ದೆ 1972 ನಿಯಮಗಳ ಉಲ್ಲಂಘಿಸಿ ಕಾಳಿ ಹುಲಿ ಸಂರಕ್ಷಿತ ವಲಯದೊಳಗೆ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಈ ಕುರಿತು ಅರಣ್ಯ ಸಚಿವರ ಕಾರ್ಯಾಲಯಕ್ಕೂ ಮಾಹಿತಿ ತಲುಪಿದೆ. ನವೆಂಬರ್ ತಿಂಗಳಲ್ಲಿ ಸುಮಂತ್ ಗೌಡ ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಕುಂಬಾರವಾಡ ವಲಯದಲ್ಲಿನ ಪಾತಗುಡಿ ಎಂಬ ಸ್ಥಳಕ್ಕೆ ಭೇಟಿ ನೀಡಿದ್ದರು. ಹೊರಗಿನವರಿಗೆ ನಿಷೇಧವಿರುವ ಈ ಪ್ರದೇಶಕ್ಕೆ ಅನುಮತಿ ಇಲ್ಲದ ಪ್ರವೇಶ ಹಾಗೂ ವಿಡಿಯೋ ಚಿತ್ರೀಕರಣಕ್ಕೂ ( ಕಮರ್ಷಿಯಲ್ ) ನಿಷೇಧವಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದಗುಡಿ ಚಿತ್ರದಲ್ಲಿ ಬಳಕೆಯಾದ ಬೈಕ್ ಏರಿ ಚಿತ್ರೀಕರಣ ನಡೆದ ಸ್ಥಳಗಳನ್ನು ತೋರಿಸಿದ್ದರು. ಈ ವಿಡಿಯೋ ಮಿಲಿಯನ್ ಗಟ್ಟಲೇ ಜನರನ್ನು ತಲುಪಿದ್ದಷ್ಟೇ ಅಲ್ಲದೇ ವೈರಲ್ ಆಗಿದ್ದವು. ಈಗ ಈ ವಿಡಿಯೋಗಳೇ ಅವರಿಗೆ ಉರುಳಾಗಿವೆ.
ಜನವರಿ 3ನೇ ತಾರೀಕು ಕನ್ನಡ ಪತ್ರಿಕೆಯ ಸ್ಥಳೀಯ ಆವೃತ್ತಿಯಲ್ಲಿ ‘ ನಿರ್ಭಂಧಿತ ಕಾಡಿನಲ್ಲಿ ಯೂಟ್ಯೂಬರ್ ಹೆಜ್ಜೆ .! ಎಂಬ ತಲೆಬರಹದಲ್ಲಿ ಲೇಖನ ಪ್ರಕಟವಾಗಿತ್ತು. ಈ ಲೇಖನದ ಪ್ರತಿ ಕೂಡ ಅರಣ್ಯ ಸಚಿವರ ಕಾರ್ಯಾಲಯ ತಲುಪಿತ್ತು.
ಪತ್ರಿಕೆಯಲ್ಲಿ ಪ್ರಕಟಗೊಂಡಂತೆ,
ಮೂಲ ಕಾಡು ನಿವಾಸಿಗಳಿಗೆ ದಿನನಿತ್ಯ ಕಿರುಕುಳ ನೀಡುವ ಅರಣ್ಯ ಇಲಾಖೆ ಯೂಟ್ಯೂಬರ್ ಗಳಿಗೆ ಕೆಂಪುಹಾಸು ಹಾಸಿದೆ ಎಂದು ಆರೋಪಿಸಲಾಗಿತ್ತು. ಕಾಳಿ ಹುಲಿ ಯೋಜನೆಯ ಕುಂಬಾರವಾಡ ವಲಯದ ಪಾತಗುಡಿ ದುರ್ಗಮ ಪ್ರದೇಶ. ಇಲ್ಲಿ ಯೂಟ್ಯೂಬರ್ ಬೈಕ್ ನಲ್ಲಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಡ್ರೋಣ್ ಕ್ಯಾಮೆರಾ ಬಳಸಲಾಗಿದೆ. ರಾತ್ರಿ ಬೆಂಕಿ ಹಾಕಿಕೊಂಡು ಟೆಂಟ್ ಲ್ಲಿ ಉಳಿಯಲಾಗಿದೆ. ಪುನೀತ ಬಳಸಿದ ಬೈಕ್ ಲ್ಲಿ ಓಡಾಟ ನಡೆಸಿದ್ದಾರೆ. ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡುವಾಗ ಆದ ಅಚಾತುರ್ಯಗಳಿಂದಲೇ ಬುದ್ಧಿ ಕಲಿಯದ ಇಲಾಖೆ. ಯೂಟ್ಯೂಬರ್ ಗೆ ಅನುಮತಿ ನೀಡಿದವರಾರು ಎಂದು ಪತ್ರಿಕೆಯಲ್ಲಿ ಸಾಮಾಜಿಕ ಹೋರಾಟಗಾರರೊಬ್ಬರ ಕೋಟ್ ಬಳಸಿ ಪ್ರಕಟಿಸಲಾಗಿದೆ. ಅದ್ರೆ ಇವೆಲ್ಲಾ ಪ್ರಕಟವಾಗುವ ಮೊದಲೇ ಇಲಾಖೆ ಸುಮಂತ್ ಅವರೊಂದಿಗೆ E-mail ಸಂವಹನ ನಡೆಸಿದ್ದು ಅವರು ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿದ್ದಾರೆ.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಮತ್ತು ಜೆ.ಎಂ.ಎಫ್.ಸಿ ದಾಂಡೇಲಿ, ಇವರಿಗೆ ವಲಯ ಅರಣ್ಯಾಧಿಕಾರಿ ಗಿರೀಶ್ ಚೌಗಲೆ ಸಲ್ಲಿಸಿದ ವರದಿ ಹೀಗಿದೆ..
ಕುಂಬಾರವಾಡಾ ವನ್ಯಜೀವಿ ವಲಯದ WLOR ಸಂಖ್ಯೆ: 03/2025-26 ದಿನಾಂಕ: 02/12/2025.
ಸುಮಂತ ಗೌಡ ಎಂಬುವರು ಅನುಮತಿ ಇಲ್ಲದೇ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವೇಶ ಮಾಡಿ ವಿಡಿಯೋ ಚಿತ್ರಿಕರಿಸಿ ತನ್ನ sg_malenadu ಮತ್ತು sg_yaana ಎಂಬ Instagram ನಲ್ಲಿ ಹಾಕಿಕೊಂಡಿದ್ದು, ವನ್ಯಜೀವಿ ಸಂರಕ್ಷಣಾ ಕಾಯಿದೆ ತಿದ್ದುಪಡಿ 2022 ರ ರೀತ್ಯ ಉಲ್ಲಂಘನೆಯಾಗಿದೆ. ಸದರಿ ವಿಡಿಯೋವನ್ನು ಪರಿಶೀಲಿಸಿದಾಗ ಸದರಿ ಅರಣ್ಯ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಕುಂಬಾರವಾಡಾ ವನ್ಯಜೀವಿ ವಲಯ ಎಂಬುದು ತಿಳಿದುಬಂದಿದೆ. ಸದರಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ತಮ್ಮ ಸ್ವಂತ ಊರುಗಳಿಗೆ ಸ್ಥಳೀಯವಾಗಿ ಓಡಾಡಲು ಮಾತ್ರ ಅವಕಾಶ ಇರುತ್ತದೆ. ಆದರೆ ಸದರಿಯವರು ದಿನಾಂಕ: 05/11/2025 ರಂದು ಅನುಮತಿ ಪಡೆಯದೇ ಅನಧಿಕೃತವಾಗಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶಿಸಿ ವಿಡಿಯೋ sg_malenadu 2 sg_yaana 20 Instagram ಹರಿಬಿಟ್ಟಿರುವ ಬಗ್ಗೆ, ದಿನಾಂಕ: 21/11/2025 ರಂದು ಸುಮಂತ ಗೌಡ ಇವರಿಗೆ ಕುಂಬಾರವಾಡಾ ವನ್ಯಜೀವಿ ವಲಯದಿಂದ ನೋಟಿಸ್ ನೀಡಿ ಏಳು ದಿನಗಳ ಒಳಗೆ ಕುಂಬಾರವಾಡಾ ವಲಯ ಕಚೇರಿಗೆ ಬಂದು ಭೇಟಿ ನೀಡಿ ಸಮಜಾಯಿಸಿ ನೀಡಲು ಸೂಚಿಸಲಾಗಿದೆ.
ಆದರೆ, ಇ-ಮೇಲ್ (Email ) ಮುಖಾಂತರ ಹೇಳಿಕೆ ಸಲ್ಲಿಸಿದ್ದು, ಸದರಿಯವರು ಹೇಳಿಕೆಯು ಸಮಂಜಸವಾಗಿಲ್ಲ ಹಾಗೂ ಖುದ್ದಾಗಿ ವಿಚಾರಣೆ ಬರಲು ಸೂಚಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2022 ರ ರೀತ್ಯ ವನ್ಯಜೀವಿ (ಸಂರಕ್ಷಣೆ) ತಿದ್ದುಪಡಿ ಕಾಯ್ದೆ 2022 ರ ಸೆಕ್ಷನ್ 2(15, 17, 26), 27, 28, 51 ರಲ್ಲಿ ಕಾನೂನು ಉಲ್ಲಂಘನೆಯಾಗಿರುತ್ತದೆ. ಮುಂದುವರಿದು ಮೇಲಾಧಿಕಾರಿಗಳ ನಿರ್ದೆಶನದ ಮೇರೆಗೆ ಹಾಗೂ ಹೆಚ್ಚಿನ ತನಿಖೆಗಾಗಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ಬೇಕಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನವಿರಾದ ಕನ್ನಡ ನಿರೂಪಣೆ, ಉತ್ಕೃಷ್ಟ ಕಂಟೆಂಟ್ ಗಳಿಂದ ಭಿನ್ನವಾಗಿ ಬೆಳೆದ ಸುಮಂತ್ ಅರಿತೊ-ಅರಿಯದೆಯೋ ಮಾಡಿದ ತಪ್ಪಿಗೆ ಕ್ರಮ ಎದುರಿಸಬೇಕಾಗಿದೆ.








