ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಪುರಾಣ-ಐತಿಹಾಸಿಕ ಪ್ರಸಿದ್ಧ ಶಕುನ ರಂಗನಾಥಸ್ವಾಮಿ ಜಾತ್ರೆ ಹಾಗೂ ಕೆಂಚರಾಯಸ್ವಾಮಿ ಸೇವೆ ಜನವರಿ ೧೫ರಿಂದ ಆರಂಭವಾಗಲಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆ ( ಮುಜುರಾಯಿ ) ಸೇರಿರುವ ದೇಗುಲಕ್ಕೆ ಕಂದಾಯ ಅಧಿಕಾರಿಗಳೇ ಆಡಳಿತಾಧಿಕಾರಿಗಳು. ಸಖರಾಯಪಟ್ಟಣದ ಜನರು ಹಿಂದಿನಿಂದ ನಡೆಸಿಕೊಂಡು ಬಂದಂತಹ ಸಂಪ್ರದಾಯ `ಮೊಲ ಬಿಡುವ ಸೇವೆ’..! ಹಿಂದೆಲ್ಲಾ ಜಾತ್ರೆ ನಡೆದಾಗ ಮೊಲಗಳನ್ನು ಹಿಡಿದು ತಂದು ಪ್ರದರ್ಶನ ಮಾಡಿರುವ ಉದಾಹರಣೆಗಳು ನಮಗೆ ಲಭ್ಯವಿಲ್ಲ. ಆದರೆ ಈ ವರ್ಷ ಜಾತ್ರೆ ಆರಂಭದ ದಿನ ಸಂಧ್ಯಾಕಾಲದ ಪೂಜೆಯಲ್ಲಿ ಕೆಲ ವಂಶಸ್ಥರು ಹಾಗೂ ಗ್ರಾಮಸ್ಥರಿಂದ ಕಾಡು ಮೊಲಗಳನ್ನು ಬಿಡುವ ಸೇವೆಯನ್ನು ಆಹ್ವಾನ ಪತ್ರಿಕೆಯಲ್ಲೇ ಮುದ್ರಿಸಲಾಗಿದೆ. ಆ ಪತ್ರಿಕೆಯ ಕೆಳಗೆ, ತಹಸೀಲ್ದಾರ್, ಉಪತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಹೆಸರುಗಳನ್ನೂ ಹಾಕಲಾಗಿದೆ. ಇಷ್ಟೇ ಆದರೆ ಪರವಾಗಿಲ್ಲ ಆದರೆ ಇನ್ನೊಂದು ಅನುಮತಿ ಪ್ರತಿಯೊಂದು ಬುಧವಾರ ಸಂಚಲನ ಮೂಡಿಸಿತು.
ಕಡೂರು ತಾಲೂಕಿನ ಸಖರಾಯಪಟ್ಟಣ ನಾಡಕಚೇರಿಯ ಉಪತಹಸೀಲ್ದಾರ್ ಸಹಿಯೊಂದಿಗೆ ಅನುಮತಿ ಪತ್ರ ಗ್ರಾಮಸ್ಥರ ಕೈ ಸೇರಿತ್ತು. ಅದರಲ್ಲಿರುವ ಸಾಲುಗಳು ಪರಿಸರಾಸಕ್ತರಲ್ಲಿ ದಿಗ್ಭ್ರಮೆ ಮೂಡಿಸಿತ್ತು. ಶಕುನ ರಂಗನಾಥಸ್ವಾಮಿ ಜಾತ್ರೆಯ ಪ್ರಯುಕ್ತ ಜನವರಿ ೧೫ರಂದು ಮೊಲ ಬಿಡುವ ಸೇವೆ ಇರುವುದರಿಂದ ಸೂಚಿತ ಮನೆತನದವರು ಹಾಗೂ ಗ್ರಾಮಸ್ಥರು ಜನವರಿ ೧೪ ಹಾಗೂ ೧೫ರಂದು ಎರಡು ದಿನಗಳು ಮೊಲ ಹಿಡಿಯುವುದು. ಹಾಗೂ ಅರಣ್ಯ ಇಲಾಖೆ ಇವರಿಗೆ ಯಾವುದೇ ತೊಂದರೆ ನೀಡಬಾರದಾಗಿ ಕೋರಿದ್ದು ಜಾತ್ರಾ ಪ್ರಯುಕ್ತ ಅನುಮತಿ ನೀಡಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಅರಣ್ಯ ವ್ಯಾಪ್ತಿ ಕಡೂರು ವಲಯ. ರಂಗನಾಥ ದೇವರ ಜಾತ್ರೆ ಮಹೋತ್ಸವಕ್ಕೆ ಮೊಲ ಬೇಟೆಗೆ ಉಪ ತಹಸೀಲ್ದಾರ್ ಅನುಮತಿ ಕೊಟ್ಟಿರುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗುತ್ತದೆ. ಯಾವುದೇ ಆಚರಣೆ ಅಥವಾ ಸಂಪ್ರದಾಯದಲ್ಲಿ ಯಾವುದೇ ತರಹದ ವನ್ಯಜೀವಿ ಬೇಟೆ ಸಂಪೂರ್ಣ ನಿಷೇಧವಿದೆ. ಹೀಗಿದ್ದರೂ ಯಾವ ಆಧಾರದಲ್ಲಿ ಉಪತಹಸಿಲ್ದಾರ್ ಅನುಮತಿ ನೀಡಿದ್ದರು.? ಕಂದಾಯ ಇಲಾಖೆ ಅಧಿಕಾರಿಗಳಿಗೆ ಯಾರು ಅಧಿಕಾರ ನೀಡಿದ್ದು. ಅನುಮತಿ ನೀಡಿರೋದು ಹಾಸ್ಯಾಸ್ಪದ ಹಾಗೂ ಬೇಟೆ ಪ್ರಚೋದನೆ ಎಂದು ಪರಿಸರಾಸಕ್ತರು ಸಿಟ್ಟಾದರು.
ಉಪತಹಸೀಲ್ದಾರ್‌ರನ್ನು ಸಂಪರ್ಕಿಸಿದಾಗ ತಮಗೆ ತಿಳಿಯದೇ ಮಾಡಿದ ಪ್ರಮಾದ ಎಂದಿರುವುದು ಬಾಲಿಶ. ಸದ್ಯ ತಮ್ಮ ಅನುಮತಿ ಹಿಂಪಡೆದಿರುವ ಅಧಿಕಾರಿ ಪ್ರಾಣಿ ಪ್ರದರ್ಶನವನ್ನೂ ತಡೆಯಬೇಕಿದೆ. ಕಳೆದ ವರ್ಷ ರಾಜ್ಯದಲ್ಲಿ ಈ ತರಹದ ಹಲವು ಪ್ರಕರಣಗಳು ಸುದ್ದಿಯಾಗಿದ್ದವು. ರಾಜಕೀಯ ಮುಖಂಡರೇ ಸತ್ತ ಕಾಡು ಮೊಲಗಳನ್ನ ಜಾತ್ರೆಯಲ್ಲಿ ಪ್ರದರ್ಶನ ನಡೆಸಿ ಕೆಂಗಣ್ಣಿಗೆ ಗುರಿಯಾಗಿದ್ದರು.








