Ode to the west wind

Join Us on WhatsApp

Connect Here

Written by 2:29 am NEWS

ಭದ್ರಾ ವ್ಯಾಪ್ತಿಯಲ್ಲಿ ಕಾನೂನು ಭಂಜಕರು: 50 ಕೋಟಿ ರೆಸಾರ್ಟ್ ಸುತ್ತ ವಿವಾದದ ಸುಳಿ!”

ಚಿಕ್ಕಮಗಳೂರಿನಲ್ಲಿ ‘ಕೈ’ ನಾಯಕನಿಂದ ಪರಿಸರ ಹನನ: ಭದ್ರಾ ಬಫರ್ ಝೋನ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿ 50 ಕೋಟಿಯ ಅಕ್ರಮ ರೆಸಾರ್ಟ್ ನಿರ್ಮಾಣ!

ಕಾಫಿನಾಡಿನ ಸೊಬಗು, ಪಶ್ಚಿಮ ಘಟ್ಟದ ಜೀವನಾಡಿ ಎಂದೇ ಕರೆಸಿಕೊಳ್ಳುವ ಶೋಲಾ ಅರಣ್ಯ ಈಗ ರಾಜಕೀಯ ಪ್ರಭಾವಿಗಳ ಅಟ್ಟಹಾಸಕ್ಕೆ ನಲುಗುತ್ತಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಅತ್ಯಂತ ಸೂಕ್ಷ್ಮ ವಲಯದಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರೊಬ್ಬರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ರೆಸಾರ್ಟ್ ನಿರ್ಮಿಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.‌ ನಿಯಮಗಳೆಲ್ಲಾ ‘ಗಾಳಿಗೆ’.!

ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಸರ್ವೆ ನಂಬರ್ 53 ಮತ್ತು 58 ರಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಈ ರೆಸಾರ್ಟ್ ತಲೆ ಎತ್ತುತ್ತಿದೆ. ಕಾಂಗ್ರೆಸ್ ಮುಖಂಡರಾದ ವಿನಯ್ ಕಾರ್ತಿಕ್ ಪ್ರಕಾಶ್ ಮತ್ತು ಚಂದ್ರ ಪ್ರಕಾಶ್ ಕೆ ಅವರ ಹೆಸರಿನಲ್ಲಿರುವ ಈ ಜಾಗದಲ್ಲಿ, ಪ್ರತಿಷ್ಠಿತ ಖಾಸಗಿ ರೆಸಾರ್ಟ್ ಕಂಪನಿಯ ಸಹಯೋಗದೊಂದಿಗೆ ಸುಮಾರು 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಭರದಿಂದ ಸಾಗಿದೆ. ಈ ಕುರಿತು ನಾಡಿನ ಪ್ರತಿಷ್ಟಿತ ಮಾಧ್ಯಮ Tv9 ವರದಿ ಮಾಡಿದೆ.

  2011ರಲ್ಲಿ ಘೋಷಣೆಯಾದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ (ESZ) ಈ ನಿರ್ಮಾಣ ನಡೆಯುತ್ತಿದೆ. ಅರಣ್ಯ ಇಲಾಖೆಯಿಂದ ಯಾವುದೇ ಆಕ್ಷೇಪಣಾ ರಹಿತ ಪತ್ರ (NOC) ಪಡೆಯದೆಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ವಾಣಿಜ್ಯ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧವಿದೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದಿದ್ದರೂ ಜಿಲ್ಲಾಡಳಿತ ಭೂ ಪರಿವರ್ತನೆ (Land Conversion) ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

.ಚಂದ್ರದ್ರೋಣ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ಹೀಗೆ ಗುಡ್ಡಗಳನ್ನು ಬಗೆದು ರೆಸಾರ್ಟ್ ನಿರ್ಮಿಸಿದರೆ ಭೀಕರ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.‌ ಈ ಪ್ರಕರಣ ಸದ್ದು ಮಾಡುತ್ತಿದ್ದಂತೆಯೇ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

‘ಕೊಳಗಾವೆ ಗ್ರಾಮದ ಸರ್ವೆ ನಂಬರ್ 58ರಲ್ಲಿ ನಡೆಯುತ್ತಿರುವ ಕಾಮಗಾರಿ ಬಫರ್ ಝೋನ್ ವ್ಯಾಪ್ತಿಗೆ ಬರುತ್ತದೆ ಎಂಬುದು ದೃಢಪಟ್ಟಿದೆ. ನಮ್ಮ ಸಿಬ್ಬಂದಿಯಿಂದ ವರದಿ ಕೇಳಿದ್ದೇನೆ. ಸ್ಥಳ ಪರಿಶೀಲನೆ ಮುಗಿದ ತಕ್ಷಣ ಸುಪ್ರೀಂ ಕೋರ್ಟ್ ಮತ್ತು NTCA ಮಾರ್ಗಸೂಚಿಗಳಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.”

📌ಪುಲ್ಕಿತ್  (DCF, ಭದ್ರಾ ಟೈಗರ್ ರಿಸರ್ವ್)

“ಈ ರೆಸಾರ್ಟ್ ನಿರ್ಮಾಣಕ್ಕೆ ನಮ್ಮ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಬೃಹತ್ ಕಟ್ಟಡಗಳಿಗೆ ಅವಕಾಶವೇ ಇಲ್ಲ. ಮಾಹಿತಿ ಬಂದ ತಕ್ಷಣ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದೆ.”

📌ಯಶ್ ಪಾಲ್ (CF, ಚಿಕ್ಕಮಗಳೂರು)

ಶೋಲಾ ಅರಣ್ಯ ನಾಶಪಡಿಸಿ, ಕಾಫಿ ತೋಟಗಳನ್ನು ರೆಸಾರ್ಟ್‌ಗಳನ್ನಾಗಿ ಪರಿವರ್ತಿಸುತ್ತಿರುವ ರಾಜಕೀಯ ನಾಯಕರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೋ ಅಥವಾ ಒತ್ತಡಕ್ಕೆ ಮಣಿದಿದ್ದಾರೋ ಎಂಬ ಪ್ರಶ್ನೆ ಎದ್ದಿದೆ. ಭದ್ರಾ ಹುಲಿಗಳ ಆವಾಸಸ್ಥಾನಕ್ಕೆ ಕಂಟಕವಾಗಿರುವ ಈ ‘ಅಕ್ರಮ ಅರಮನೆ’ಯ ವಿರುದ್ಧ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Visited 6 times, 6 visit(s) today
[mc4wp_form id="5878"]