ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ತಾಲೂಕುಗಳು, ಭದ್ರಾವತಿ ಅರಣ್ಯ ವಿಭಾಗದ ವಲಯಗಳಲ್ಲಿ ಕೆಲ ದಿನಗಳಿಂದ ಮನೆಮಾಡಿದ್ದ ಚಿರತೆ ಆತಂಕ ಕೊಂಚ ಕಡಿಮೆಯಾಗಿದೆ. ಸಾಕುಪ್ರಾಣಿಗಳು, ಅದರಲ್ಲೂ ವಿಶೇಷವಾಗಿ ಜರ್ಮನ್ ಶೆಫರ್ಡ್ ಮತ್ತು ಲ್ಯಾಬ್ರಡಾರ್‌ನಂತಹ ವಿಶಿಷ್ಠ ತಳಿ ನಾಯಿಗಳನ್ನೇ ಗುರಿಯಾಗಿಸಿಕೊಂಡು ಬೇಟೆಯಾಡುತ್ತಿದ್ದ ಮೂರು ಚಿರತೆಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿವೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಭಾಗದಲ್ಲಿ ಚಿರತೆಯೊಂದು ಭೀತಿ ಸೃಷ್ಟಿಸಿತ್ತು. ಸುಮಾರು ಐದಕ್ಕೂ ಹೆಚ್ಚು ನಾಯಿಗಳನ್ನು ಹೊತ್ತೊಯ್ದಿದ್ದ ಈ ಚಿರತೆ, ಇತ್ತೀಚೆಗೆ ತರೀಕೆರೆ ಪಟ್ಟಣದ ಹೊರವಲಯದ ಮನೆಯೊಂದರಲ್ಲಿ ಅಡಕೆ ಕಾವಲಿಗಿದ್ದ ಬಲಿಷ್ಠ ‘ಜರ್ಮನ್ ಶೆಫರ್ಡ್’ ನಾಯಿಯನ್ನು ಅತ್ಯಂತ ಕೌಶಲದಿಂದ ಬೇಟೆಯಾಡಿತ್ತು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಬೋನು ಇರಿಸಿ, ಕೊನೆಗೂ ನಾಲ್ಕು ವರ್ಷದ ಹೆಣ್ಣು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಇದೇ ಭದ್ರಾವತಿ ವಿಭಾಗದ ಭದ್ರಾವತಿ ಪಟ್ಟಣದ ಹಿರಿಯೂರು ತಾಂಡಾ ಬಳಿ 2-3 ವರ್ಷದ ಗಂಡು ಚಿರತೆಯೊಂದು ಜನರ ಕಣ್ಣುತಪ್ಪಿಸಿ ಮನೆಯಂಗಳದ ನಾಯಿಗಳನ್ನೇ ಭಕ್ಷಿಸುತ್ತಿತ್ತು. ಲ್ಯಾಬ್ರಡಾರ್ ರಿಟ್ರೀವರ್ ನಾಯಿಯನ್ನು ಚಾಣಾಕ್ಷತನದಿಂದ ಕೊಂದು ಅರ್ಧ ತಿಂದು ಹೋಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದು ಇದೇ ಆ ನಾಯಿ ಭಕ್ಷಕ ಎಂದು ಹೇಳಲಾಗಿದೆ. ಇವೆರಡೂ ಚಿರತೆಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಭದ್ರಾವತಿ ವಿಭಾಗದ ಡಿಸಿಎಫ್ ಬಿ.ಎಂ. ರವೀಂದ್ರ ಕುಮಾರ್ ಅವರು, “ಈ ಚಿರತೆಗಳು ಅತ್ಯಂತ ಚಾಣಾಕ್ಷತನದ ಬೇಟೆಯ ತಂತ್ರಗಳನ್ನು ಮೈಗೂಡಿಸಿಕೊಂಡಿವೆ. ಅಡಿಕೆ ತೋಟ ಹಾಗೂ ಬೆಲೆಬಾಳುವ ವಸ್ತುಗಳ ಕಾವಲಿಗೆಂದು ಮನೆಯ ಮುಂಭಾಗದಲ್ಲಿ ಕಟ್ಟಿ ಹಾಕುವ ಬೆಲೆಬಾಳುವ ತಳಿಯ ನಾಯಿಗಳನ್ನೇ ಇವು ಗುರಿಯಾಗಿಸುತ್ತಿವೆ. ಮಾಲೀಕರಿಗೆ ತಿಳಿಯದಂತೆ ಅತ್ಯಂತ ನಿಶ್ಯಬ್ದವಾಗಿ ಇವು ದಾಳಿ ನಡೆಸುತ್ತವೆ. ಈ ಕೃತ್ಯಗಳು ಸಿಟಿಟಿವಿಯಲ್ಲಿ ಸೆರೆಯಾಗಿವೆ ಎನ್ನುತ್ತಾರೆ.
ಇದೇ ವೇಳೆ ಕಡೂರು ತಾಲೂಕಿನ ಹಿರೇನಲ್ಲೂರು ಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಆರು ವರ್ಷದ ಬಲಿಷ್ಠ ಗಂಡು ಚಿರತೆಯೊಂದು ಗುರುವಾರ ಮುಂಜಾನೆ ಸೆರೆಯಾಗಿದೆ. ಈ ಚಿರತೆ ಕಳೆದ ಒಂದು ತಿಂಗಳಲ್ಲಿ 10ಕ್ಕೂ ಹೆಚ್ಚು ಕುರಿಗಳು, 6 ನಾಯಿಗಳು ಹಾಗೂ ಒಂದು ಕರುವನ್ನು ಬಲಿಪಡೆದು ರೈತರನ್ನು ಕಂಗಾಲು ಮಾಡಿತ್ತು. ಕಡೂರು, ತರೀಕೆರೆ ಮತ್ತು ಭದ್ರಾವತಿ ವ್ಯಾಪ್ತಿಯಲ್ಲಿ ಒಟ್ಟು ಮೂರು ಚಿರತೆಗಳು ಸೆರೆಯಾಗಿರುವುದರಿಂದ ಸ್ಥಳೀಯ ನಿವಾಸಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ.








