ಕುವೆಂಪು, ತೇಜಸ್ವಿ ಹೆಸರು ಹೇಳಿಕೊಂಡು ಹುದ್ದೆ, ಅಧಿಕಾರ, ಕಾರು, ವೇದಿಕೆ, ಭಾಷಣ, ಶಾಲು, ಹಾರ, ಸನ್ಮಾನ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಂಡು ತಿರುಗುತ್ತಿರುವವರು ನಮ್ಮ ಮಲೆನಾಡಿನಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಅದರಲ್ಲಿ ಕೆಲವರು ಪ್ರತಿಷ್ಠಾನ, ಪರಿಷತ್ ಗಳಲ್ಲಿ ಹತ್ತಾರು ವರ್ಷಗಳಿಂದ ಗಟ್ಟಿಯಾಗಿ ಬೇರು ಬಿಟ್ಟುಕೊಂಡು ಸಾತ್ವಿಕ ಮುಖವಾಡ ಧರಿಸಿ ಊರಿಗೆಲ್ಲಾ ಬುದ್ಧಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಕುವೆಂಪು, ತೇಜಸ್ವಿಯವರು ಆಚರಿಸಿದ ಮೌಲ್ಯಗಳಿಗೆ ಅಪಚಾರವಾದಾಗಲೂ ಅಂತವರು ಧ್ವನಿ ಎತ್ತಲಿಲ್ಲ; ತಮ್ಮ ಮೇಲೆಯೇ ಆರೋಪಗಳು ಬಂದರೂ ಹುದ್ದೆ ತೊರೆಯಲಿಲ್ಲ.
ವಿಶ್ವಮಾನವ ಸಂದೇಶ, ಜಾತಿ ಸಂಘ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಬೇಕಾದಷ್ಟು ಜನರಿದ್ದಾರೆ.
ಕನ್ನಡ ನಾಡಿನಲ್ಲಿ ಕುವೆಂಪು ಮತ್ತು ತೇಜಸ್ವಿಯವರ ಬರಹಗಳು ದೊಡ್ಡ ಮಟ್ಟದಲ್ಲಿ ಪರಿಸರ ಪ್ರಜ್ಞೆ, ವೈಚಾರಿಕ ಪ್ರಜ್ಞೆ ಬೆಳೆಸಿವೆ. ಕುವೆಂಪು ಆರಾಧಿಸಿದ್ದ ಮಲೆನಾಡು, ತೇಜಸ್ವಿ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದ ಪರಿಸರ ಈಗ ಕಾಣೆಯಾಗಿದೆ. ತೇಜಸ್ವಿಯವರ ಬದುಕಿದ್ದಾಗ ಪರಿಸರ ನಾಶದ ಕುರಿತು ವಿವಿಧ ಸ್ವರೂಪಗಳಲ್ಲಿ ನಿರಂತರವಾಗಿ ಪ್ರತಿಭಟಿಸಿದ್ದರು. ಪ್ರಶಸ್ತಿ, ಹಾರ, ತುರಾಯಿ, ಹೊಗಳು ಭಟರನ್ನು ದೂರವಿಟ್ಟಿದ್ದರು. ಅಧಿಕಾರ ಕೇಂದ್ರಗಳ ಹತ್ತಿರವೂ ಸುಳಿಯುತ್ತಿರಲಿಲ್ಲ. ಅವರ ಹೆಸರಿನಲ್ಲಿ ಈಗ ಎಲ್ಲವೂ ಸುಲಲಿತವಾಗಿ ನಡೆಯುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕುವೆಂಪು, ತೇಜಸ್ವಿ ಬದುಕಿದ್ದ ಮಲೆನಾಡನ್ನು, ಪಶ್ಚಿಮ ಘಟ್ಟದ ಅಮೂಲ್ಯ ಜೀವವೈವಿಧ್ಯವನ್ನು ಹೆದ್ದಾರಿ, ರೈಲುಮಾರ್ಗ, ಗಣಿಗಾರಿಕೆ, ನದಿ ಜೋಡಣೆ, ಪಂಪ್ಡ್ ಸ್ಟೋರೇಜ್ ಅದು ಇದು ಎಂದು ಹಿಂದೆಂದಿಗಿಂತಲೂ ವೇಗವಾಗಿ ಹಾಳುಗೆಡವುತ್ತಿದೆ. ಸರ್ಕಾರೇತರ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಸಂಶೋಧನೆ, ಅಧ್ಯಯನ ಅಂತ ರೆಸಾರ್ಟ್ ಕಟ್ಟಿಕೊಂಡು, ಜೀವಿಗಳನ್ನು ಹಿಂಸಿಸುತ್ತಾ ಎಲ್ಲವನ್ನೂ ವಾಣಿಜ್ಯೀಕರಣ ಮಾಡುತ್ತಿವೆ. ಈ ಮಧ್ಯೆ ಹವಾಗುಣ ಬದಲಾವಣೆಯಿಂದ, ಮಾನವ-ವನ್ಯಜೀವಿ ಸಂಘರ್ಷದಿಂದ ರೈತರು, ಕೃಷಿ ಕೂಲಿ ಕಾರ್ಮಿಕರು ನಲುಗುತ್ತಿದ್ದಾರೆ. ಈ ಕುರಿತು ತೇಜಸ್ವಿ, ಕುವೆಂಪು ಹೆಸರಿನಲ್ಲಿ ಲಾಭ ಮಾಡಿಕೊಂಡವರು/ಮಾಡಿಕೊಳ್ಳುತ್ತಿರುವವರದ್ದು ಜಾಣ ಮೌನ.
ಈ ಕುವೆಂಪು ಪ್ರತಿಷ್ಠಾನ, ತೇಜಸ್ವಿ ಪ್ರತಿಷ್ಠಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇತ್ಯಾದಿ ಇತ್ಯಾದಿಗಳ ಹಾಲಿ, ಮಾಜಿ ಸದಸ್ಯರುಗಳು ಯಾವ ವಿಷಯಕ್ಕಾದರೂ ಗಟ್ಟಿಯಾಗಿ ಧ್ವನಿ ಎತ್ತಿದ್ದು, ಪ್ರತಿಭಟಿಸಿದ್ದು ನನಗಂತೂ ಕಂಡಿಲ್ಲ. ಇಂತಹವರು ಹೊಸ ತಲೆಮಾರಿಗೆ ಕೊಡುವ ಸಂದೇಶವೇನು? ತೇಜಸ್ವಿ, ಕುವೆಂಪು ವಿಚಾರಧಾರೆಗಳನ್ನು ನೀವು ಉಳಿಸಿ ಬೆಳೆಸದಿದ್ದಲ್ಲಿ ಬೇಡ. ನಿಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಬೇಡಿ. ಎಲ್ಲಾ ವಿಷಯಕ್ಕೂ ಜಾಣ ಮೌನ ವಹಿಸುವ ಬದಲು ಸಾರ್ವಜನಿಕ ಜೀವನದಿಂದ ಹೊರಗೆ ಹೋಗುವುದು ಒಳಿತು ಎಂದು ನನ್ನಂತಹ ಸಾಮಾನ್ಯ ಜನರಿಗೆ ಅನ್ನಿಸುತ್ತದೆ.
ಲೇಖನ
– ನಾಗರಾಜ ಕೂವೆ ( ಪರಿಸರ ಹೋರಾಟಗಾರರು ) ಅವರ ಫೇಸ್‌ಬುಕ್ ನಿಂದ ಆಯ್ದುಕೊಳ್ಳಲಾಗಿದೆ








