ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಹನೂರು ವಲಯ ಪಚ್ಚೆದೊಡ್ಡಿ ಬಳಿ ದಿನಾಂಕ 02-10-2025ರಂದು ಹುಲಿಯನ್ನು ಕೊಂದು ಮೂರು ತುಂಡುಗಳನ್ನಾಗಿ ಕತ್ತರಿಸಿ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು ಏಳು ಜನ ಆರೋಪಿಗಳ ಪಾತ್ರ ಕಂಡು ಬಂದಿತ್ತು. ಇವರಲ್ಲಿ ಆರು ಆರೋಪಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ ಆರನೇ ಆರೋಪಿ ಹನೂರಿನ ಗಂಗನದೊಡ್ಡಿಯ 32 ವರ್ಷದ ಗೋವಿಂದ ಮುನಿಸ್ವಾಮಿ ತಲೆಮರೆಸಿಕೊಂಡಿದ್ದ. ಅಂದು ನಾಲ್ ರೋಡಿನಲ್ಲಿ ಅರಣ್ಯ ಸಿಬ್ಬಂದಿಗಳಿಂದ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಳ್ಳಲು ಈತನ ಇಬ್ಬರು ಸ್ನೇಹಿತರು ಅರಣ್ಯ ಇಲಾಖೆಯ ಜೀಪಿಗೆ ಅಪಘಾತವಾಗುವಂತೆ ಮಾಡಿ ನೆರವಾಗಿರುತ್ತಾರೆ.
ಆರೋಪಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಇಲಾಖೆ ಮೈಸೂರು ನಗರದಲ್ಲಿ ಬುಧವಾರ ( ಜನವರಿ 7 ) ಸಂಜೆ ಸುಮಾರು 8 ಗಂಟೆ ಸಮಯದಲ್ಲಿ ಬಂಧಿಸಿದ್ದಾರೆ. ಈತನ ನಿರೀಕ್ಷಣಾ ಜಾಮೀನು ಅರ್ಜಿ ಕೊಳ್ಳೆಗಾಲ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಉಚ್ಛ ನ್ಯಾಯಾಲಯ ಬೆಂಗಳೂರು ಇಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುತ್ತಾನೆ. ಇವನ ವಿರುದ್ಧ ಅರಣ್ಯ ಇಲಾಖೆಯಲ್ಲಿ ಹಾಗು ವಿವಿಧ ಪೋಲಿಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ದಿನಾಂಕ:21-10-2025 ರಂದು “ಎ” ಶ್ರೇಣಿಯ ರೌಡಿಶೀಟ್ ತೆರೆಯಲು ಪೋಲಿಸ್ ಇಲಾಖೆಯಿಂದ ಅನುಮತಿ ನೀಡಲಾಗಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ( ಮಲೆ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೆಗಾಲ ) ಮಾಹಿತಿ ನೀಡಿದ್ದಾರೆ.







