ಚಿಕ್ಕಮಗಳೂರು ತಾಲೂಕಿನ ಹುಣಸೆಹಳ್ಳಿ ಸಮೀಪ ಕಳೆದ ಏಳು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಕಾರ್ಮಿಕರು ಬಲಿಯಾದ ಬೆನ್ನಲ್ಲೇ, ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ತಕ್ಷಣವೇ ಸ್ಥಳೀಯ ಮುಖಂಡರು, ತೋಟದ ಬೆಳೆಗಾರರ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳಿಗೆ ಮಾಹಿತಿ ರವಾನಿಸಲು ವಾಟ್ಸ್ ಆಪ್ ಗ್ರೂಪ್‌ಗಳನ್ನು ರಚಿಸುವಂತೆ ಸಚಿವರು ಆದೇಶಿಸಿದ್ದಾರೆ. ಮಾನವ ಜೀವ ಅತ್ಯಮೂಲ್ಯವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ 24×7 ನಿಗಾ ಇಡಬೇಕು ಹಾಗೂ ವನ್ಯಜೀವಿ ಸೆರೆ ಕಾರ್ಯಾಚರಣೆ ವೇಳೆ ಕಡ್ಡಾಯವಾಗಿ ಸೆಕ್ಷನ್ 144 ಜಾರಿಗೊಳಿಸಿ, ಥರ್ಮಲ್ ಡ್ರೋನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಬೇಕು ಎಂದು ಅವರು ತಿಳಿಸಿದರು.

ಅರಣ್ಯ ಇಲಾಖೆಯು ಮುನ್ನೆಚ್ಚರಿಕೆ ನೀಡಿದ ಹೊರತಾಗಿಯೂ ಕಾರ್ಮಿಕರನ್ನು ತೋಟಕ್ಕೆ ಕೆಲಸಕ್ಕೆ ಕಳುಹಿಸುವ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಅಂತಹ ನಿರ್ಲಕ್ಷ್ಯ ತೋರುವ ಮಾಲೀಕರ ವಿರುದ್ಧ ದೂರು ದಾಖಲಿಸಲು ಸೂಚಿಸಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯದ ಹೊರಭಾಗದಲ್ಲಿ ಸುಮಾರು 35 ಆನೆಗಳು ಮೂರು ಗುಂಪುಗಳಲ್ಲಿ ಸಂಚರಿಸುತ್ತಿದ್ದು, ಬೇಸಿಗೆಯ ಕಾರಣ ಅವು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಹಿರಿಯ ಅಧಿಕಾರಿಗಳು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಿಬ್ಬಂದಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ತಾಕೀತು ಮಾಡಿದರು. ಪ್ರತಿ ವರ್ಷ ಇಂತಹ ದಾಳಿಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಇಳಿಕೆಯಾಗಬೇಕೆ ಹೊರತು ಹೆಚ್ಚಾಗಬಾರದು ಎಂದು ಸಚಿವರು ಎಚ್ಚರಿಸಿದ್ದಾರೆ.
ಇದೇ ವೇಳೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಪುನಾರಂಭದ ಕುರಿತು ಮಾತನಾಡಿದ ಸಚಿವರು, ಸಫಾರಿಯಿಂದ ಬರುವ ಆದಾಯದ ಶೇ.35 ರಷ್ಟನ್ನು ಕಾಡಿನಂಚಿನ ಗ್ರಾಮಗಳ ಜನರ ಕಲ್ಯಾಣಕ್ಕಾಗಿ ಬಳಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಈ ಹಣವನ್ನು ಸ್ಥಳೀಯ ಯುವಕರಿಗೆ ಕೌಶಲ್ಯ ತರಬೇತಿ ನೀಡಲು, ಶಾಲೆ-ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಮತ್ತು ವನ್ಯಜೀವಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಳಸಲಾಗುವುದು. ಕಾಡಿನಂಚಿನ ಗ್ರಾಮಸ್ಥರ ವಿಶ್ವಾಸವನ್ನು ಗಳಿಸಿ, ಅವರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.







