Ode to the west wind

Join Us on WhatsApp

Connect Here

Written by 5:29 am ACTIVISM, Rainland News

ಕೃಷ್ಣ ಮೃಗಗಳ ಬೇಟೆ, ಇಲಾಖೆ ಅಧಿಕಾರಿಗಳ ನಡೆಗೆ ಈಶ್ವರ ಖಂಡ್ರೆ ಬೇಸರ

ದಿನಾಂಕ 23-12-2025 ರಂದು ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು ಹಿರೇನಲ್ಲೂರು ಹೋಬಳಿ ಕಲ್ಲೇನಹಳ್ಳಿ ಗ್ರಾಮದ ಹಿಡುವಳಿ ಜಮೀನಿನಲ್ಲಿ ಒಂದು ಗಂಡು, ಎರಡು ಹೆಣ್ಣು ಕೃಷ್ಣಮೃಗಗಳು ಗುಂಡೇಟಿಗೆ ಬಲಿಯಾಗಿದ್ದವು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಸ್ಥಳೀಯ ಬಾಸೂರು ಪಶುವೈದ್ಯರ ಸಹಾಯದಿಂದ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಘಟನೆ ನಡೆದು ಗಂಟೆಗಳೇ ಕಳೆದಿದ್ದರೂ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಕಾರ್ಯಾಲಯಕ್ಕೆ ಮಾಹಿತಿಯೇ ಇರಲಿಲ್ಲ. ಪತ್ರಕರ್ತರು ಹಾಗೂ ಕೆಲ ಪರಿಸರಾಸಕ್ತರಿಂದ ಈ ವಿಷಯ ಸಚಿವರಿಗೆ ಮುಟ್ಟಿದೆ. ಯಾವುದೇ ಶೆಡ್ಯೂಲ್-1 ಲ್ಲಿ ಲಿಸ್ಟ್ ಆಗಿರುವ ಪ್ರಾಣಿಗಳು ಮೃತಪಟ್ಟರೆ ಕಚೇರಿಗೆ ತಕ್ಷಣ ಮಾಹಿತಿ ನೀಡಬೇಕೆಂದು ಈ ಹಿಂದಿನ ಸಭೆಗಳಲ್ಲಿ ( ವಿಡಿಯೋ ಕಾನ್ಫರೆನ್ಸ್ ) ಅರಣ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದರು. ಎಂಥಾ ಸೋಚನೀಯ, ಚಾಮರಾಜನಗರ ಹುಲಿಗಳ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡು ಸಭೆ ನಡೆಸುತ್ತಿದ್ದ ಸಚಿವರಿಗೆ ಮಾಧ್ಯಮ ಪ್ರತಿನಿಧಿಗಳ ಮೂಲಕ ಸಿಕ್ಕ ಮಾಹಿತಿ ತಲುಪಿದೆ..!! ಸಹಜವಾಗಿ ಸಚಿವರಿಗೆ ಬೇಸರ ತರಿಸಿದೆ.

ಸಚಿವರ ಟಿಪ್ಪಣಿಯಲ್ಲೇನಿದೆ..?

ಚಿಕ್ಕಮಗಳೂರು ಜಿಲ್ಲೆ ಕಡೂರು ವಲಯದ ಬೀರೂರು ಶಾಖೆ ವ್ಯಾಪ್ತಿಯ ಹಿರೇನಲ್ಲೂರು ಗಸ್ತಿನ ಕಲ್ಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 11ರಲ್ಲಿ 3 ಕೃಷ್ಣಮೃಗ (2 ಹೆಣ್ಣು 1 ಗಂಡು)ಗಳನ್ನು ಹತ್ಯೆ ಮಾಡಿರುವುದಾಗಿ ಮಾಧ್ಯಮ ಮಿತ್ರರಿಂದ ದಿನಾಂಕ 23.12.2025ರಂದು ಅರಣ್ಯ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ಬಂದಿದೆ. ಅದೇ ದಿನ ಸಂಜೆ ನಡೆದ ವನ್ಯಜೀವಿ-ಮಾನವ ಸಂಘರ್ಷ ಕುರಿತ ವಿಡಿಯೋ ಸಂವಾದ ಸಭೆಯಲ್ಲಿ ರಾತ್ರಿ 6.50ರ ಸುಮಾರಿನಲ್ಲಿ ಪ್ರಶ್ನಿಸಿದಾಗ ಆರ್.ಎಫ್.ಓ. ಅವರನ್ನು ಸ್ಥಳಕ್ಕೆ ಕಳಿಸಿರುವುದಾಗಿ ಮಾತ್ರ ಮಾಹಿತಿ ನೀಡಲಾಗಿದೆ. ಆದರೆ ಮಧ್ಯಾಹ್ನ 3.40ರ ಹೊತ್ತಿಗೆ ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆಯೂ ಮುಗಿದಿರುವುದಾಗಿ ಮಾಹಿತಿ ಬಂದಿದೆ. ಯಾವುದೇ ಶೆಡ್ಯೂಲ್-1 ವನ್ಯಮೃಗ ಮೃತಪಟ್ಟಾಗ ತಕ್ಷಣವೇ ಸಚಿವಾಲಯಕ್ಕೆ ಮಾಹಿತಿ ನೀಡುವಂತೆ ಪದೇ ಪದೇ ಸೂಚಿಸಿದ್ದರೂ ಮಾಹಿತಿ ನೀಡದಿರುವುದನ್ನು ಹಾಗೂ ಕೃಷ್ಣಮೃಗ ಸಂರಕ್ಷಿತ ಪ್ರದೇಶದ ಬಳಿ 3 ಕೃಷ್ಣ ಮೃಗಗಳ ಹತ್ಯೆ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ ಕಳ್ಳಬೇಟೆ ಮಾಡಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಮತ್ತು ಕಳ್ಳಬೇಟೆ ತಡೆಯುವಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ವಿಫಲವಾಗಿದ್ದಲ್ಲಿ ಅವರ ವಿರುದ್ಧ ಕೈಗೊಳ್ಳಬೇಕಾದ ಶಿಸ್ತುಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಏನಾಗಿತ್ತು.?

ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯ ಹಿರೇನಲ್ಲೂರು ಗಸ್ತು. “ಬಾಸೂರು ಕೃಷ್ಣ ಮೃಗ ಸಂರಕ್ಷಿತ” ಪ್ರದೇಶದ ,ಪಕ್ಕದ ಜಮೀನಲ್ಲಿ ನಡೆದ ಕೃತ್ಯ ಸಾಕಷ್ಟು ಅನುಮಾನಗಳಿಗೆ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲ ಪರಿಸರಾಸಕ್ತರು ಅರಣ್ಯ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ಮಂಗಳವಾರ ಮೃತ ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕುವ ಯತ್ನ. ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ಹಿನ್ನೀರಿನಲ್ಲಿ ಗಂಡು ಆನೆಯನ್ನು ಹೆಣ್ಣು ಆನೆ ಎಂದು ಮುಚ್ಚಿಹಾಕುವ ಕೆಲಸಕ್ಕೆ ಬೆಂಬಲ ನೀಡಿದ ಸರ್ಕಾರೇತರ ಸಂಸ್ಥೆ ಕೆಲ ಪ್ರತಿನಿಧಿಗಳು ಪಂಚನಾಮೆಗೆ ಹಾಜರಿದ್ದರು ಎಂದು ಅಪಾದಿಸಿದ್ದರು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಇಲಾಖೆಯಿಂದ ಮಾಹಿತಿ ಸಿಗದೇ ಹೋದಾಗ ಅರಣ್ಯ ಸಚಿವರ ಕಾರ್ಯಾಲಯಕ್ಕೆ ನಿರಂತರ ಕರೆಗಳು ಹೋಗಿವೆ.

ಕೃಷ್ಣ ಮೃಗಳಿಗೆ ಗುಂಡು ಹೊಡೆದವರಾರು.?

ಬೇಟೆ ನಿಗ್ರಹ ಶಿಬಿರ ಇದ್ದರೂ, ಕೃಷ್ಣ ಮೃಗಗಳ  ಮೇಲೆ ಗುಂಡು ಹೊಡೆದು ಕೊಲ್ಲಲಾಗಿದೆ . ಇಲ್ಲಿ ಸಿಬ್ಬಂದಿಗಳು ಪಾತ್ರವೇನು ಎಂಬುದು ತಿಳಿದಿಲ್ಲ. ತಕ್ಷಣಕ್ಕೆ ಯಾವುದೇ ಪ್ರಕರಣವನ್ನೂ ದಾಖಲಿಸಿದೇ ವಿಳಂಭ ಮಾಡಿರುವುದಾಗಿಯೂ ಆರೋಪಿಸಲಾಗಿತ್ತು. ಈ ಬಗ್ಗೆ ಸರಿಯಾದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಲಾಗಿತ್ತು. ಬುಧವಾರ ಬೆಳಗ್ಗೆ ಕಡೂರು ತಾಲೂಕು ನ್ಯಾಯಾಲಯದ ಅನುಮತಿ ಪಡೆದು,ನಿಮಯಾನುಸಾರ ಬಾಸೂರು ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶದ ಪಕ್ಕದ ರಾಗಿ ಹೊಲದಲ್ಲಿ ಕಳೇಬರವನ್ನು ಸುಡಲಾಗಿದೆ. ಆರೋಪಿಗಳ ಪತ್ತೆಗೆ ಯುಗಟಿ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳ ಸಿಬ್ಬಂದಿ ತಂಡ ರಚಿಸಲಾಗಿದೆ. ಅರಣ್ಯ ಇಲಾಖೆ ಶ್ವಾನದಳ ಕಾರ್ಯಪ್ರವೃತ್ತವಾಗಿದೆ. ಡಿಜಿಟಲ್ ಎವಿಡೆನ್ಸ್ ( ಟವರ್ ಡಂಪ್) ಕಲೆ ಹಾಕಲಾಗುತ್ತಿದೆ.

Subscribe to Rainland YouTube

Visited 431 times, 1 visit(s) today
[mc4wp_form id="5878"]