ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹೆಬ್ಬೆ ವಲಯದ ಗಂಗೆಗಿರಿ ಸರ್ವೇ ನಂಬರ್ 15 ರ ಶಿರಗುಳ ಮೀಸಲು ಅರಣ್ಯದಲ್ಲಿ ಜನವರಿ 6ರ ಬೆಳಗ್ಗೆ ಹುಲಿ ಮೃತದೇಹ ಕಂಡಿದೆ.
ಹುಲಿ ಗಣತಿ ನಿರತ ಸಿಬ್ಬಂದಿ ಹುಲಿಯ ಮೃತದೇಹ ನೋಡಿದ್ದು ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪುಲ್ಕಿತ್ ಮೀನಾ ಭೇಟಿ ನೀಡಿ ಪರಿಶೀಲಿಸಿದರು. ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಸುಮಾರು 8 ರಿಂದ 10 ವರ್ಷದ ಗಂಡು ಹುಲಿಯಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಹುಲಿಯ ಮುಂಗಾಲಿನ ಮೇಲೆ ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಹೊಡೆದಿರುವ ಉಗುರಿನ ಗುರುತುಗಳು ಪತ್ತೆಯಾಗಿವೆ. ಎರಡು ಬಲಿಷ್ಟ ಹುಲಿಗಳ ಕಾದಾಟದಲ್ಲಿ ಈ ಹುಲಿ ಸತ್ತಿರುವುದು ಎನ್ನಲಾಗಿದೆ. ಹುಲಿಯ ಉಗುರುಗಳು ಮತ್ತು ಹಲ್ಲುಗಳು ಹಾಗೆ ಇರುವುದನ್ನು ದೃಢೀಕರಿಸಲಾಗಿದೆ.

ಪಶುವೈದ್ಯಾಧಿಕಾರಿ ಸಚಿನ್ ನಾಯಕ್ ಮತ್ತು ಶಿವಕುಮಾರ್ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೇಶ್ವರ ಸ್ವಾಮಿ, ವಲಯ ಅರಣ್ಯಾಧಿಕಾರಿ ಗೌರವ್, ಹುಲಿ ಸಂರಕ್ಷಣ ಪ್ರಾಧಿಕಾರದ ಪ್ರತಿನಿಧಿ ವೀರೇಶ್ ಜಿ, ಇತರೆ ಸ್ಥಳೀಯ ಪ್ರತಿನಿಧಿಗಳು, ಗ್ರಾಮಸ್ಥರು ಸ್ಥಳದಲ್ಲಿ ಮರಣೋತ್ತರ ಪಂಚನಾಮೆ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಹುಲಿಯ ಮೃತದೇಹವನ್ನು ನಿಯಮಾನುಸಾರ ಸುಡಲಾಗಿದೆ.








