ಅಪರೂಪಕ್ಕೆ ರಾಜ್ಯಕ್ಕೆ ದಕ್ಕಿರೋ ಸೂಕ್ಷ್ಮ ಮತಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆಯವರು, ಪರಿಸರ ಕಾಳಜಿಗಾಗಿ ಈಗ ರಾಜಕಾರಣದ ಕೆಸರೆರಚಾಟಕ್ಕೆ ಸಿಲುಕಿಕೊಂಡಿದ್ದಾರೆ.
ಅಮೂಲ್ಯ ಲಕ್ಷ ವೃಕ್ಷಗಳನ್ನ ಉಳಿಸಲು ತೀರ್ಮಾನಕ್ಕೆ ಬಂದಿದ್ದಕ್ಕಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪರಿಷತ್ ಬಿಜೆಪಿ ಸದಸ್ಯ, ಮಾಜಿ ಮಂತ್ರಿ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಇವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಹಿನ್ನೆಲೆ:
ಬೆಂಗಳೂರು KIOCL ಸಂಸ್ಥೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಸ್ವಾಮಿಮಲೈ ಬ್ಲಾಕ್ ನ ದೇವದಾರಿ ಬೆಟ್ಟ ಸಾಲಿನಲ್ಲಿ ಗಣಿಕಾರಿಕೆ ಮಾಡಲು ಅರಣ್ಯ ತಿರುವಳಿ ಮಾಡಿಕೊಳ್ಳದಂತೆ, ರಾಜ್ಯ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಈ ಸಂಬಂಧ ಪತ್ರಿಕಾ ಟಿಪ್ಪಣಿ ಹೊರಡಿಸಿ ನೂತನ ಕೇಂದ್ರ ಸಚಿವ ( ಭಾರೀ ಕೈಗಾರಿಕೆ) ಹೆಚ್ ಡಿ ಕುಮಾರಸ್ವಾಮಿಗೆ ಶಾಕ್ ನೀಡಿದ್ದರು. ಸಂಡೂರು ಭಾಗದಲ್ಲಿ ಈಗಾಗಲೇ ಆಗಿರೋ ಅವಾಂತರಗಳಿಂದ ಬೇಸತ್ತಿದ್ದ ಪರಿಸರಾಸಕ್ತರು ಹೊಸದಾಗಿ ಈ ಭಾಗದಲ್ಲಿ ಸುಮಾರು 99,000 ಮರಗಳ ಮಾರಣಹೋಮದ ವಿರುದ್ಧ ಸಿಡಿದೆದ್ದಿದ್ದರು. ಸೇವ್ ಸಂಡೂರು ಹೋರಾಟ ಕೂಡ ಮುನ್ನೆಲೆಗೆ ಬಂದಿತ್ತು.
ಕುಮಾರಸ್ವಾಮಿ ಸಚಿವರಾಗುತ್ತಿದ್ದಂತೆ ಸುತ್ತಿಕೊಂಡ ಸಂಡೂರು ಗಣಿ ಆರೋಪಕ್ಕೆ ಸ್ಪಷ್ಟೀಕರಣ ಅವರೇ ನೀಡಿದ್ದರು.
ಕುಮಾರಸ್ವಾಮಿ ಸ್ಪಷ್ಟೀಕರಣ ಏನಿತ್ತು.?
ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿ ಆಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು. ಸಂಡೂರಿನಲ್ಲಿ 404 ಹೆಕ್ಟೇರ್ ಪ್ರದೇಶದಲ್ಲಿ ಕುದುರೆಮುಖ ಅದಿರು ಕಂಪನಿಗೆ 2019ರಲ್ಲೇ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈಗಾಗಲೇ ಕೇಂದ್ರ ಪರಿಸರ ಇಲಾಖೆಯೂ ಅನುಮತಿ ನೀಡಿದೆ. ಈ ಗಣಿ ಆರಂಭಕ್ಕೂ ಮುನ್ನ 194 ಕೋಟಿ ರೂಪಾಯಿ ವೆಚ್ಚದಲ್ಲಿ 808 ಎಕರೆ ಪ್ರದೇಶದಲ್ಲಿ ಪರ್ಯಾಯ ಅರಣ್ಯ ಬೆಳೆಸಲಿದ್ದೇವೆ. ಪ್ರಧಾನಿ ಮೋದಿ ಅವರ ಯೋಜನೆಗಳಲ್ಲಿ ಇದೂ ಇದೆ. ಯಾವುದೇ ಕಾರಣಕ್ಕೂ ಪರಿಸರದ ಮೇಲೆ ಪರಿಣಾಮ ಬೀರದು ಎಂದಿದ್ದರು.
ಯಾವಾಗ ಅರಣ್ಯ ಸಚಿವರು ಅರಣ್ಯ, ಪರಿಸರ ಕಾಳಜಿ ಮೆರೆದರೋ ಇದು ರಾಜಕಾರಣಕ್ಕೆ ತಿರುಗಿದೆ. ಭಾನುವಾರ ರಾಮನಗರದಲ್ಲಿ ಮಾತನಾಡಿದ ಸಚಿವರು, ಇದು ನನ್ನ ಮೇಲಿನ ವೈಯಕ್ತಿಕ ಸಿಟ್ಟು ಎಂದು ಹೇಳಿಕೊಂಡಿದ್ದಾರೆ. ಗಣಿಗಾರಿಕೆಗೆ ಅವಕಾಶ ನೀಡಿರೋದಕ್ಕೂ ನನಗೂ ಸಂಬಂಧ ಇಲ್ಲ. ಕಂಪನಿ ಚಟುವಟಿಕೆ ಮುಂದುವರಿಸಲು ನಾನು ಸಹಿ ಹಾಕಿದ್ದೇನೆ. ಕಂಪನಿಗೆ 1738 ಕೋಟಿ ರುಪಾಯಿ ಅವಶ್ಯವಿದೆ. ಈ ಹಣ ಕ್ರೋಢಿಕರಿಸಲು ಆರ್ಥಿಕ ಇಲಾಖೆ ಒಪ್ಪಿಗೆ ಬೇಕು. ಈ ಫೈಲ್ ಗೆ ನಾನು ಸಹಿ ಹಾಕಿದ್ದೇನೆ ಎಂದರು.
ಆದರೆ ಬಿಜೆಪಿ ನೂತನ ಪರಿಷತ್ ಸದಸ್ಯ ಸಿಟಿ ರವಿ ಸ್ವಲ್ಪ ಮುಂದೆ ಹೋಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಈ ಪ್ರಾಜೆಕ್ಟ್ ಲ್ಲಿ ಕಿಕ್ ಬ್ಯಾಕ್ ಬರೋದಿಲ್ಲ ಅದಕ್ಕೆ ತಡೆಯೊಡ್ದಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆ ಖಂಡ್ರೆಯವರನ್ನ ಕೆರಳಿಸಿದೆ. ಇದರ ಬೆನ್ನಲ್ಲೇ
ಬಿವೈ ವಿಜಯೇಂದ್ರ ಮೈಸೂರಿನಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರದ ಪ್ರತೀ ವಿಷಯದಲ್ಲೂ ಕೊಂಕು ಹುಡುಕುತ್ತದೆ. ಕೇಂದ್ರ ಸರ್ಕಾರ ಕೈಗಾರಿಕೆಗಳನ್ನ ಸ್ಥಾಪಿಸಲು ಹೊರಟಾಗ ತಕರಾರು ಮಾಡುತ್ತಿದೆ. ಹೀಗೆ ಮಾಡಿದರೆ ರಾಜ್ಯದ ಅಭಿವೃದ್ಧಿ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಿಟಿ ರವಿ ಹೇಳಿಕೆಗೆ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ಹೀಗಿದೆ:
ಅಕ್ರಮ ಗಣಿಗಾರಿಕೆಯ ಮೂಲ ಪಕ್ಷ ಯಾವುದೆಂಬುದು ಇಡೀ ದೇಶಕ್ಕೇ ತಿಳಿದಿದೆ. ಕಿಕ್ ಬ್ಯಾಕ್, ಸೂಟ್ ಕೇಸ್ ಪಡೆದು ಅಭ್ಯಾಸ ಇರೋರು ಬೇರೆಯವರೂ ತಮ್ಮಂತೆ ಎಂದು ತಿಳಿಯುತ್ತಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯು ಈ ಹಿಂದೆ ಸಿಇಸಿ ನೀಡಿದ್ದ ನಿರ್ದೇಶನಗಳನ್ನು ಪರಿಪಾಲಿಸುವವರೆಗೆ ಉದ್ದೇಶಿತ ಸಂಡೂರು ಸ್ವಾಮಿ ಮಲೈ ವ್ಯಾಪ್ತಿಯ ದೇವದಾರಿ ಅರಣ್ಯದಲ್ಲಿ ಕೆ.ಐ.ಓ.ಸಿ.ಎಲ್.ಗೆ ಗಣಿಗಾರಿಕೆಗೆ ಒಪ್ಪಂದ ಮಾಡಿಕೊಳ್ಳದಂತೆ ನೀಡಿರುವ ನಿರ್ದೇಶನಕ್ಕೆ ಸಂಬಂಧಿಸಿದಂತೆ ‘ಕಿಕ್ ಬ್ಯಾಕ್ ಕೊಟ್ಟಿಲ್ಲ – ಹೀಗಾಗಿ ತಡೆ ಒಡ್ಡಿದ್ದಾರೆ’ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರ ಖಂಡ್ರೆ ತಾನು ಕಳ್ಳ ಪರರನ್ನು ನಂಬ ಎಂಬ ಗಾದೆ ನೆನಪಿಗೆ ತರುತ್ತದೆ ಎಂದು ಹೇಳಿದ್ದಾರೆ.
ನಾವೆಲ್ಲೂ ಕೇಂದ್ರ ಸರ್ಕಾರಿ ಸ್ವಾಮ್ಯದ ಕೆ.ಐ.ಓ.ಸಿ.ಎಲ್. ಈ ಹಿಂದೆ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ನ್ಯಾಯಾಲಯಗಳ ಆದೇಶವನ್ನೂ ಪರಿಪಾಲನೆ ಮಾಡಿಲ್ಲ. ಹೀಗಾಗಿ ಸಿಇಸಿ ನೀಡಿರುವ ನಿರ್ದೇಶನಗಳನ್ನು ಪರಿಪಾಲನೆ ಮಾಡುವವರೆಗೆ ಒಪ್ಪಂದ ಮಾಡಿಕೊಳ್ಳದಂತೆ ತಿಳಿಸಲಾಗಿದೆ. ಅವರು ಹಿಂದೆ ಮಾಡಿರುವ ತಪ್ಪು ಸರಿಪಡಿಸಲಿ ನಂತರ ಅನುಮತಿ ಪಡೆದುಕೊಳ್ಳಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಕೆಲವು ನಾಯಕರಿಗೂ ಅಕ್ರಮ ಗಣಿಗಾರಿಕೆಗೂ ಇದ್ದ ಸಂಬಂಧ ಜಗಜ್ಜಾಹೀರಾಗಿದೆ. ಅವರೇ ಪಕ್ಷದಿಂದ ಉಚ್ಚಾಚಿಸಿದ ಗಣಿ ಧಣಿಗಳನ್ನು ಈಗ ಅಪ್ಪಿಕೊಂಡು ರತ್ನಗಂಬಳಿ ಹಾಸಿ ಪಕ್ಷಕ್ಕೆ ಮತ್ತೆ ಕರೆದುಕೊಂಡಿದ್ದಾರೆ. ಇವರು ಪ್ರಾಮಾಣಿಕತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದು ಲೇವಡಿ ಮಾಡಿದ್ದಾರೆ.
ಸಿ.ಟಿ. ರವಿ, ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡಿದ್ದಾರೆ. ಸೂಟ್ ಕೇಸ್ ಕೊಡಲಿ ಎಂದು ನಾವು ತಡೆ ಒಡ್ಡಿದ್ದೇವೆ ಎಂದು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಷ್ಟು ಖಾಸಗಿ ಗಣಿಗಾರಿಕೆಗೆ ಅನುಮತಿ ಕೊಟ್ಟಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದಕ್ಕೆಲ್ಲಾ ಇವರು ಎಷ್ಟೆಷ್ಟು ಸೂಟ್ ಕೇಸ್ ಪಡೆದಿದ್ದರು ಎಂದು ಹೇಳಲಿ. ಪಾಪ ಸಿ.ಟಿ. ರವಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ ಎಂದು ಕಾಣುತ್ತದೆ ಎಂದು ಕುಹಕವಾಡಿದ್ದಾರೆ.
ಚಿಕ್ಕಮಗಳೂರು ಸುತ್ತಮುತ್ತ ಶುಂಠಿ ಬೆಳೆಯೋ ಹೆಸರಲ್ಲಿ ಮರ ಕಡಿಯುವವರ ಮತ್ತು ಅರಣ್ಯ ಒತ್ತುವರಿ ಮಾಡುವವರ ಬೆಂಬಲಕ್ಕೆ ಯಾರು ನಿಂತಿದ್ದಾರೆ ಎಂಬುದು ಜನತೆಗೆ ತಿಳಿದಿದೆ. ಎಲ್ಲವೂ ಶೀಘ್ರ ಹೊರಬರಲಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.