ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ-ಸಿಂಗರಾಜಿಪುರ ರಸ್ತೆಯ ದಂಡುಮಾರಮ್ಮ ದೇವಸ್ಥಾನದ ಬಳಿ ಇತ್ತೀಚೆಗೆ ದಾಂಧಲೆ ನಡೆಸಿ ಜನರನ್ನು ಅಟ್ಟಾಡಿಸಿದ್ದ ಕರಡಿಯು, ಗಾಯಗಳಿಂದ ಮೃತಪಟ್ಟಿದ್ದರೂ ಸಹ ರೇಬೀಸ್ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಾರ್ಚ್ 28 ರಂದು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಈ ಕರಡಿಯನ್ನು ವಿವೇಚನಾರಹಿತ ಹಾಗೂ ಅವೈಜ್ಞಾನಿಕವಾಗಿ ಸೆರೆಹಿಡಿದಿದ್ದರು. ಗಾಯಗೊಂಡಿದ್ದ ಕರಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಅದು ಸಾವನ್ನಪ್ಪಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕರಡಿಗೆ ರೇಬೀಸ್ ಸೋಂಕು ಇರುವುದು ಖಚಿತವಾಗಿದ್ದು, ಇದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕರಡಿ ದಾಳಿಯಿಂದ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಮುತ್ತುನಾಯ್ಕ್ ಮತ್ತು ರೈತ ತಮ್ಮಣ್ಣ ಅವರಿಗೆ ತಕ್ಷಣವೇ ರೇಬೀಸ್ ಲಸಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚನ್ನಪಟ್ಟಣ ವಲಯದ 22 ಜನರು ಹಾಗೂ ಸಾತನೂರು ವಲಯದ 16 ಜನರು ಸೇರಿದಂತೆ ಒಟ್ಟು 38 ಜನರಿಗೆ ಲಸಿಕೆ ಹಾಕಲಾಗಿದೆ. ಇದರೊಂದಿಗೆ ಕರಡಿಯ ಸಂಪರ್ಕಕ್ಕೆ ಬಂದಿರಬಹುದಾದ ಜಾನುವಾರುಗಳಿಗೂ ವ್ಯಾಕ್ಸಿನ್ ನೀಡಲಾಗಿದ್ದು, ಅರಣ್ಯ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಈ ಕರಡಿ ಕಬ್ಬಾಳುಗುಡ್ಡ, ನರಿಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು.









