ಮೈಸೂರು ದಸರಾದಲ್ಲಿ ಒಂದೂವರೆ ದಶಕ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದ ಸುಮಾರು 70 ವರ್ಷದ ಗಜೇಂದ್ರ ಆನೆಯು ಚಾಮರಾಜನಗರದ ಬೂದಿಪಡಗ ಶಿಬಿರದಲ್ಲಿ ಅನುಭವಿಸುತ್ತಿದ್ದ ಸುದೀರ್ಘ ಒಂಟಿತನಕ್ಕೆ ಈಗ ತೆರೆಬಿದ್ದಿದೆ. ಗಜೇಂದ್ರನ ಸ್ಥಿತಿಯನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ‘ಸೇವ್ ಗಜೇಂದ್ರ’ ಅಭಿಯಾನ ನಡೆಸಿದ್ದ ಸಾರ್ವಜನಿಕರು ಮತ್ತು ವನ್ಯಜೀವಿ ಪ್ರಿಯರ ಮನವಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಕ್ಷಣ ಸ್ಪಂದಿಸಿದ್ದಾರೆ. ಸಚಿವರ ಕಳಕಳಿಯ ಆದೇಶದಂತೆ ಇಂದು ಬೂದಿಪಡಗದಲ್ಲಿ ಗಜೇಂದ್ರನಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಇಲಾಖೆಯ ವಿಶೇಷ ವಾಹನದ ಮೂಲಕ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಸುಸಜ್ಜಿತ ಆನೆ ಶಿಬಿರಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಕೆ.ಗುಡಿ ಆನೆ ಶಿಬಿರದಲ್ಲಿ ಮದವೇರಿದ ಅಮಲಿನಲ್ಲಿ ತನ್ನ ನೆಚ್ಚಿನ ಕಾವಾಡಿ ಗಣಪತಿ ಮತ್ತು ಸಹವರ್ತಿ ಆನೆ ಶ್ರೀರಾಮನ ಸಾವಿಗೆ ಕಾರಣವಾಗಿದ್ದ ದುರದೃಷ್ಟಕರ ಘಟನೆಯ ನಂತರ, ಗಜೇಂದ್ರನನ್ನು ದಸರಾದಿಂದ ಶಾಶ್ವತವಾಗಿ ಕೈಬಿಟ್ಟು ಬಿಆರ್‌ಟಿ ಅರಣ್ಯದಲ್ಲಿ ಹೊಸದಾಗಿ ಆರಂಭವಾದ ಬೂದಿಪಡಗ ಎಂಬ ನಿರ್ಜನ ಶಿಬಿರದಲ್ಲಿ ಏಕಾಂಗಿಯಾಗಿ ಇರಿಸಲಾಗಿತ್ತು. ಕಳೆದ 9 ವರ್ಷಗಳಿಂದ ಹರಿದ ಕಿವಿ, ಮುರಿದ ದಂತದೊಂದಿಗೆ ಸರಪಳಿ ಮತ್ತು ಮೌನದ ನಡುವೆ ತನ್ನ ಹಳೆಯ ದಿನಗಳನ್ನು ನೆನೆಯುತ್ತಾ ಪ್ರಾಯಶ್ಚಿತ್ತದಂತೆ ಒಂಟಿ ಜೀವನ ನಡೆಸುತ್ತಿದ್ದ ಈ ವೃದ್ಧ ಆನೆಯ ಸ್ಥಿತಿ ಕಂಡು ಸಾರ್ವಜನಿಕರು ಮತ್ತು ವನ್ಯಜೀವಿ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ‘ಸೇವ್ ಗಜೇಂದ್ರ’ ಅಭಿಯಾನವನ್ನು ತೀವ್ರಗೊಳಿಸಿದ್ದರು.
ಮನೋಜ್ ಆರ್ ಮತ್ತು ಶ್ರೀ ಮಂಜುನಾಥ ಬಿ ಅವರ ಮನವಿ ಹಾಗೂ ಜನರ ಭಾವನೆಗಳಿಗೆ ತಕ್ಷಣ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ವಯೋವೃದ್ಧ ಗಜೇಂದ್ರನಿಗೆ ಕಾಡಾನೆಗಳಿಂದ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಇರುವುದನ್ನು ಮನಗಂಡು ಕಳೆದ ಮಾರ್ಚ್ 26ರಂದು ಕೂಡಲೇ ನಿಯಮಾನುಸಾರ ಸುರಕ್ಷಿತ ಶಿಬಿರಕ್ಕೆ ಸ್ಥಳಾಂತರಿಸಲು ಲಿಖಿತ ಆದೇಶ ನೀಡಿದ್ದರು. ಸಚಿವರ ಈ ಕಳಕಳಿಯ ಆದೇಶದಂತೆ ಇಂದು ಮಧ್ಯಾಹ್ನ ಬೂದಿಪಡಗದಲ್ಲಿ ಗಜೇಂದ್ರನಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಿ, ಇಲಾಖೆಯ ಆನೆ ರಕ್ಷಣೆ ವಾಹನದ ಮೂಲಕ ನಾಗರಹೊಳೆ ವ್ಯಾಪ್ತಿಯ ಸುಸಜ್ಜಿತ ಮತ್ತಿಗೋಡು ಶಿಬಿರಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಿತು. ಭವ್ಯ ಪರಂಪರೆಯ ಈ ಗಜೇಂದ್ರ ತನ್ನ ಸಂಧ್ಯಾಕಾಲವನ್ನು ಇತರ ಆನೆಗಳ ಒಡನಾಟ ಮತ್ತು ತಜ್ಞ ಪಶುವೈದ್ಯರ ಆರೈಕೆಯಲ್ಲಿ ನೆಮ್ಮದಿಯಿಂದ ಕಳೆಯಲಿ ಎಂಬ ಆಶಯದೊಂದಿಗೆ ವನ್ಯಜೀವಿ ಪ್ರಿಯರು ಈ ಕ್ಷಣವನ್ನು ಅತ್ಯಂತ ಭಾವುಕರಾಗಿ ಬರಮಾಡಿಕೊಂಡಿದ್ದಾರೆ. ಜನರ ಭಾವನೆಗಳಿಗೆ ಗೌರವ ನೀಡಿ ಕಾಲಮಿತಿಯಲ್ಲಿ ಕ್ರಮ ಕೈಗೊಂಡ ಸಚಿವ ಈಶ್ವರ ಖಂಡ್ರೆ ಅವರಿಗೆ ಸಾಮಾಜಿಕ ತಾಣಗಳಲ್ಲಿ ಕೃತಜ್ಞತೆ ಮತ್ತು ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.









