ಹಿರಿಯ ಪತ್ರಕರ್ತರು ಹಾಗೂ ಲೇಖಕರು ಆದ ಶಶಿ ಸಂಪಳ್ಳಿಯವರು ಫೇಸ್ ಬುಕ್ ಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಮಲೆನಾಡಿಗೆ ಈ ಕಂಟಕ ಎದುರಾಗ್ತಿದೆ. ಈ ಪಕ್ಷಕ್ಕೂ ಮಲೆನಾಡಿನ ನೆಮ್ಮದಿಗೂ ಯಾಕೋ ಆಗಿಬರ್ತಿಲ್ಲ ಅನಿಸ್ತಿದೆ.
ಕಳೆದ ಬಾರಿ 2019ರಲ್ಲಿ ಇವರದೇ ಸಮ್ಮಿಶ್ರ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಈ ಬಗ್ಗೆ ಡಿಪಿಆರ್ ಗೆ ಸೂಚಿಸಿದ್ದರು. ಆಗ ಇಡೀ ಶಿವಮೊಗ್ಗ ಜಿಲ್ಲೆ ಮತ್ತು ಉತ್ತರಕನ್ನಡದ ಶರಾವತಿ ಕೊಳ್ಳದ ತಾಲೂಕುಗಳಲ್ಲಿ ಜನ ಸಿಡಿದೆದ್ದಿದ್ದರು. ಆದರೂ ಸುಮಾರು ಒಂದು ತಿಂಗಳ ಕಾಲ ನಡೆದ ನಿರಂತರ ಹೋರಾಟದಲ್ಲಿ ಒಂದೇ ಒಂದು ಅಹಿತಕರ ಘಟನೆಯಾಗಲೀ, ಸಣ್ಣ ಹಿಂಸಾಚಾರದ, ಆಸ್ತಿಪಾಸ್ತಿಯ ಘಟನೆಗಳಾಗಲೀ ನಡೆದಿರಲಿಲ್ಲ.
2019ರ ಜುಲೈ 10 ರಂದು ನಮ್ಮ ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟದ ನೇತೃತ್ವದಲ್ಲಿ ನಡೆದ ಸ್ವಯಂಪ್ರೇರಿತ ಬಂದ್ ಸಣ್ಣ ಹಳ್ಳಿಯಿಂದ ಜಿಲ್ಲಾ ಕೇಂದ್ರದ ವರೆಗೆ ಸಂಪೂರ್ಣ ದಿನವಿಡೀ ಬಂದ್ ಆಗಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಸಾಗರದಲ್ಲಿ 15 ಸಾವಿರ, ಶಿವಮೊಗ್ಗದಲ್ಲಿ 10 ಸಾವಿರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಾವಿರಾರು ಮಂದಿ ರಸ್ತೆಗಿಳಿದು ಬೃಹತ್ ಪ್ರತಿರೋಧ ತೋರಿದ್ದರು.
ಮಲೆನಾಡಿಗರ ಆ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ ಕೂಡಲೇ ಆ ಪ್ರಸ್ತಾಪವನ್ನು ಕೈಬಿಟ್ಟಿರುವುದಾಗಿ ಹೇಳಿತ್ತು. ಸರಿಸುಮಾರು ಅದೇ ಹೊತ್ತಿಗೆ ಸರ್ಕಾರವೇ ಉರುಳಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಹೊಸ ಮುಖ್ಯಮಂತ್ರಿ ಯಡಿಯೂರಪ್ಪ, ಶರಾವತಿ ನೀರು ಬೆಂಗಳೂರಿಗೆ ಹರಿಸುವ ಪ್ರಸ್ತಾಪ ಕೈಬಿಟ್ಟಿರುವುದಾಗಿ ಅಧಿಕೃತ ಹೇಳಿಕೆ ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು.
ಐದು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಏಳು ತಿಂಗಳಲ್ಲೇ ಮತ್ತೆ ಶರಾವತಿ ಮೇಲೆ ಕಣ್ಣು ನೆಟ್ಟಿದೆ. ಆದರೆ ಈ ಬಾರಿ ಸರ್ಕಾರ ಮುಂದುವರಿದರೆ ಹೋರಾಟದ ವರಸೆ ಬದಲಾಗಲಿದೆ. ಮಲೆನಾಡನ್ನು ತನ್ನ ಜಹಗೀರು ಎಂದುಕೊಂಡಿರುವ ಕಾಂಗ್ರೆಸ್ಸಿಗೆ ಮಲೆನಾಡಿನ ಜನ ತಕ್ಕ ಪಾಠ ಕಲಿಸಲಿದ್ದಾರೆ.
#ಶರಾವತಿನದಿಗಾಗಿನಾವು
#ಶರಾವತಿ_ನದಿ_ಉಳಿಸಿ_ಹೋರಾಟ_ಒಕ್ಕೂಟ