Ode to the west wind

Join Us on WhatsApp

Connect Here

Written by 6:29 pm ACTIVISM

ಪರಿಸರ ಪ್ರೇಮದ ಮುಖವಾಡ – ವನ್ಯಜೀವಿಗಳಿಗೆ ಡಿಜಿಟಲ್ ಕಾಟ. ಸೈಬರ್ ಸೆಲ್ ಸ್ಥಾಪನೆಯೇ ಪಾಠ!”

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಳ ಹಪಾಹಪಿಗೆ ಬಿದ್ದು ವನ್ಯಜೀವಿಗಳನ್ನು ಹಿಂಸಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ರಾಜ್ಯದಲ್ಲಿ ಕೂಡಲೇ “ವನ್ಯಜೀವಿ ಸೈಬರ್ ಸೆಲ್” (Wildlife Cyber Cell) ಸ್ಥಾಪಿಸಬೇಕೆಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ. ಈ ಕುರಿತು ಪರಿಸರ ಹೋರಾಟಗಾರ ನಾಗರಾಜ್‌ ಕೂವೆ ಅರಣ್ಯ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ. ಕಳೆದ ವರ್ಷ ಮಾನವ-ಪ್ರಾಣಿ ಸಂಘರ್ಷದ ಜೊತೆ ವಿಡಿಯೋ ಹುಚ್ಚಾಟಗಳು ಹೆಚ್ಚೇ ಅನಾವರಣವಾದ ಬೆನ್ನಲ್ಲೇ ಕೂವೆ ಇಂತಹದೊಂದು ಬೇಡಿಕೆ ಸಲ್ಲಿಸಿದ್ದಾರೆ.

ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ವಿಡಿಯೋಗಳಿಗಾಗಿ ವನ್ಯಜೀವಿಗಳನ್ನು ಹಿಡಿಯುವುದು, ಅವುಗಳನ್ನು ಪ್ರಚೋದಿಸುವುದು ಹಾಗೂ ಕಾಡುಪ್ರಾಣಿಗಳ ಜೊತೆ ಅಪಾಯಕಾರಿ ಸಾಹಸ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಕೊಡಗಿನ ಆನೆಗಳಿರಲಿ ಅಥವಾ ಆಗುಂಬೆಯ ಕಾಳಿಂಗ ಸರ್ಪಗಳಿರಲಿ, ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ವಿಡಿಯೋಗಳಿಗಾಗಿ ಪ್ರಾಣಿಗಳ ನೈಸರ್ಗಿಕ ಜೀವನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದು ಕೇವಲ ಪ್ರಾಣಿ ಹಿಂಸೆಯಷ್ಟೇ ಅಲ್ಲದೆ, ಮಾನವ-ವನ್ಯಜೀವಿ ಸಂಘರ್ಷಕ್ಕೂ ನೇರ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ನಿರಂತರ ನಿಗಾ ಇಡಲು ಮತ್ತು ವನ್ಯಜೀವಿ ಶೋಷಕರ ಮೇಲೆ ಕಠಿಣ ಕ್ರಮ ಜರುಗಿಸಲು ಪ್ರತ್ಯೇಕ ‘ಸೈಬರ್ ಸೆಲ್’ ಅಗತ್ಯವಿದೆ ಎಂದಿದ್ದಾರೆ.

ನಾಗರಾಜ್‌ ಕೂವೆ ಸಲ್ಲಿಸಿದ ಮನವಿಯಲ್ಲೇನಿದೆ..?

ದಿನೇ ದಿನೇ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ರೀಲ್ಸ್ ಹಾಗೂ ಕಿರು ವಿಡಿಯೋಗಳು ಈಗ ಹೊಸ ಟ್ರೆಂಡ್ ಆಗಿವೆ. ಪ್ರತಿದಿನ ಹೊಸ ಹೊಸ Instagram, Facebook ಮತ್ತು YouTube ಕಂಟೆಂಟ್ ಕ್ರಿಯೇಟರ್ಸ್‌ಗಳು ಹುಟ್ಟಿಕೊಳ್ಳುತ್ತಿದ್ದಾರೆ.

ವನ್ಯಜೀವಿಗಳನ್ನು ಫೋಟೋ, ವಿಡಿಯೋ ಮತ್ತು ರೀಲ್ಸ್‌ಗೋಸ್ಕರವೇ ಹಿಡಿಯುವ ಅಥವಾ ಹಿಡಿದಿದ್ದನ್ನು ವಿಡಿಯೋ ಮಾಡುವ ಚಟುವಟಿಕೆಗಳು ಹೆಚ್ಚುತ್ತಿವೆ. ಬಹುಪಾಲು ಕಂಟೆಂಟ್ ಕ್ರಿಯೇಟರ್ಸ್‌ಗಳು ತಮ್ಮ ವಿಡಿಯೋಗಳಿಗಾಗಿ ಎಲ್ಲಾ ನೈತಿಕ ಗೆರೆಗಳನ್ನು ದಾಟಿದ್ದಾರೆ. ವನ್ಯಜೀವಿಗಳನ್ನು ಹಿಡಿದು, ಹಿಂಸಿಸಿ ಶೋಷಣೆ ನಡೆಸುತ್ತಿದ್ದಾರೆ. ಇವರ ಅಸೂಕ್ಷ್ಮ ನಡೆಗಳು ಸಮಾಜಕ್ಕೆ, ಅದರಲ್ಲೂ ಹೊಸ ತಲೆಮಾರಿಗೆ ತಪ್ಪು ಸಂದೇಶ ನೀಡುತ್ತಿವೆ. ವೀಕ್ಷಕರು ಇದನ್ನೇ ‘ವನ್ಯಜೀವಿ ಸಂರಕ್ಷಣೆ’ ಎಂದು ತಪ್ಪಾಗಿ ಭಾವಿಸುತ್ತಿದ್ದಾರೆ. ಇವರನ್ನು ನೋಡಿ ಇತರರೂ ಕೂಡ “ನಾವೂ ವನ್ಯಜೀವಿಗಳನ್ನು ಪ್ರೀತಿಸುತ್ತೇವೆ” ಎಂದು ತೋರಿಸಿಕೊಳ್ಳಲು ಅದೇ ಹಾದಿ ಹಿಡಿಯುತ್ತಿದ್ದಾರೆ.

ಇಂತಹ ಡಿಜಿಟಲ್ ಟ್ರೆಂಡ್‌ನಿಂದ ಅಪಾಯಗಳು ಹೆಚ್ಚುತ್ತಿವೆ. ಆನೆಗಳ ಫೋಟೋ, ವಿಡಿಯೋ ತೆಗೆಯಲು ಹೋಗಿ ಅವು ಜನರ ಮೇಲೆ ದಾಳಿ ಮಾಡಿದ ಪ್ರಕರಣಗಳು; ಸಿಂಗಳಿಕಗಳು ಪ್ರವಾಸಿಗರ ಫೋಟೋ ತೆವಲಿಗೆ ಬಲಿಯಾಗಿ ತಮ್ಮ ಆಹಾರ ಶೈಲಿಯನ್ನೇ ಬದಲಾಯಿಸಿಕೊಂಡಿರುವುದು ಮೊದಲಾದ ಉದಾಹರಣೆಗಳನ್ನು ನಾವು ಗಮನಿಸಬಹುದು. ಮಾನವ-ವನ್ಯಜೀವಿ ಸಂಘರ್ಷಕ್ಕೆ ಇಂತಹ ಅನೈತಿಕ ಛಾಯಾಗ್ರಹಣದ ಕೊಡುಗೆ ದೊಡ್ಡದಿದೆ.

ಸಂರಕ್ಷಿತ ಪ್ರದೇಶಗಳಲ್ಲಿ ಡ್ರೋನ್ ಹಾರಿಸುವುದು, ವನ್ಯಜೀವಿಗಳನ್ನು ಕೂಡಿಹಾಕಿ ಚಿತ್ರೀಕರಣ ಮಾಡುವುದು ಮತ್ತು ಫೋಟೋಗ್ರಫಿಗೋಸ್ಕರ ಅವುಗಳ ಸಹಜ ಜೀವನಕ್ಕೆ ಅಡ್ಡಿಪಡಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳನ್ನು ಗಮನಿಸಲು ಅಥವಾ ಕಣ್ಗಾವಲಿಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಇಂತಹ ಪ್ರಕರಣಗಳು ಅಧಿಕೃತವಾಗಿ ದಾಖಲಾಗುತ್ತಿಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ ಇಂತಹ ಅನೈತಿಕ ಮತ್ತು ಕಾನೂನು ಬಾಹಿರ ಕೃತ್ಯಗಳು ಎಲ್ಲೆಡೆ ನಡೆಯುತ್ತಿವೆ. ಅನೇಕ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಇಂತಹ ಚಟುವಟಿಕೆಗಳಿಗೆ ಮೂಲಸ್ಥಾನವಾಗಿವೆ.

ಹಣಕ್ಕೋಸ್ಕರ ನೈತಿಕತೆಯನ್ನು ಮರೆತು ವರ್ತಿಸುತ್ತಿರುವುದಕ್ಕೆ ಕೊಡಗು ಮತ್ತು ಆಗುಂಬೆಯ ಕಾಳಿಂಗ ಸರ್ಪಗಳ ಪ್ರಕರಣಗಳೇ ಸಾಕ್ಷಿ. ಪಶ್ಚಿಮ ಘಟ್ಟದಲ್ಲಿ ಮಂಡಲ ಜಾತಿಯ ಹಾವುಗಳು ಕೂಡ ವನ್ಯಜೀವಿ ಛಾಯಾಗ್ರಾಹಕರ ಫೋಟೋ ತೆವಲಿಗೆ ದೊಡ್ಡ ಮಟ್ಟದಲ್ಲಿ ಬಲಿಯಾಗುತ್ತಿವೆ.

‘ವನ್ಯಜೀವಿ ಸಂರಕ್ಷಣಾ ಕಾಯ್ದೆ-1972’ರ ಅಡಿ ವನ್ಯಜೀವಿಗಳನ್ನು ವಾಣಿಜ್ಯೀಕರಣ ಮಾಡಬಾರದೆಂಬ ಉಲ್ಲೇಖವಿದೆ. ಯಾವುದೇ ರೀತಿಯ ವಾಣಿಜ್ಯೀಕರಣ ಕಾನೂನು ಬಾಹಿರ. ಸಾಮಾಜಿಕ ಜಾಲತಾಣಗಳ ಖಾತೆಗಳು ‘ಮಾನಿಟೈಸ್’ (Monetize) ಆಗಿದ್ದರೆ, ಅಲ್ಲಿ ಹಾವು ಸೇರಿದಂತೆ ಯಾವುದೇ ವನ್ಯಜೀವಿಗಳನ್ನು ಬಳಸಿದ್ದರೆ ಆ ಎಲ್ಲಾ ಹಣ ಸರ್ಕಾರಕ್ಕೆ ಸೇರತಕ್ಕದ್ದು. ಆದ್ದರಿಂದ, ಸರ್ಕಾರ ಮತ್ತು ಅರಣ್ಯ ಇಲಾಖೆ ತುರ್ತಾಗಿ “ವನ್ಯಜೀವಿ ಸೈಬರ್ ಸೆಲ್” (Wildlife Cyber Cell) ಅನ್ನು ಪ್ರಾರಂಭಿಸಬೇಕು. ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ನಿಗಾ ವಹಿಸಿ, ವನ್ಯಜೀವಿ ಶೋಷಣೆಯ ಕೃತ್ಯಗಳನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಈ ಡಿಜಿಟಲ್ ಯುಗದಲ್ಲಿ ಮೂಕಪ್ರಾಣಿಗಳ ಬದುಕನ್ನು ಸಹನೀಯಗೊಳಿಸಬೇಕು ಎಂದು ಕೂವೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Visited 68 times, 1 visit(s) today
[mc4wp_form id="5878"]