ಚಾಮರಾಜನಗರ ಜಿಲ್ಲೆ ಬಂಡೀಪುರ ಮರಳಳ್ಳ ಶಿಬಿರದ ಬಳಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹುಲಿ ದಾಳಿಗೆ ಎಪಿಸಿ ( Anti poaching camp ) ವಾಚರ್ ಸಣ್ಣಹೈದ ( ೫೦ ) ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನೇರಳೆಕೊಪ್ಪ ಹಾಡಿಯವರಾಗಿದ್ದು ಹಲವು ವರ್ಷಗಳಿಂದ ವಾಚರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೆಂಡತಿ ಲಕ್ಷ್ಮಮ್ಮ ಸೇರಿ ಆರು ಜನ ಮಕ್ಕಳನ್ನು ಸಣ್ಣಹೈದ ಅಗಲಿದ್ದಾರೆ. ಮಧ್ಯಾಹ್ನ ಘಟನೆ ನಡೆದಿದ್ದು ಮೃತರನ್ನು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ತರಲಾಗಿತ್ತು ಆದರೆ ಅಲ್ಲಿ ಅಗತ್ಯ ಸೇವೆಗಳಿಲ್ಲದ ಕಾರಣ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯ್ತು.
ಹುಲಿ ದಾಳಿಯಿಂದ ಮೃತಪಟ್ಟ ವಾಚರ್ ಸಣ್ಣ ಹೈದ ಅವರ ಹತ್ತಿರದ ಬಂಧುಗಳಿಗೆ ವಿಮೆ ಪರಿಹಾರ ಮತ್ತು ಇಲಾಖೆ ನೀಡುವ ಪರಿಹಾರ ಇತ್ಯಾದಿ ಸೇರಿ ಒಟ್ಟಾರೆ 45 ಲಕ್ಷ ರೂ. ಪರಿಹಾರ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ಹಾಗೂ ಸಿಬ್ಬಂದಿಯೂ ಕೂಡ ಗಸ್ತು ವೇಳೆ ಜಾಗರೂಕತೆಯಿಂದ ಇರಬೇಕು ಎಂದಿದ್ದಾರೆ.
ವಾಚರ್ ಸಣ್ಣಹೈದ ಸಾವಿಗೆ ಸಂತಾಪ ಸೂಚಿಸಿದ ಖಂಡ್ರೆ, ಈ ದುಃಖದ ಸಂದರ್ಭದಲ್ಲಿ ಸಣ್ಣ ಹೈದ ಅವರ ಕುಟುಂಬದೊಂದಿಗೆ ಇಲಾಖೆ ಮತ್ತು ಸರ್ಕಾರ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರತಿಯೊಂದು ಜೀವವೂ ಅಮೂಲ್ಯ, ಪರಿಹಾರ ನೀಡುವುದರಿಂದ ಹೋದ ಪ್ರಾಣ ಮರಳಿ ಬರುವುದಿಲ್ಲ ಆದರೂ ಮೃತರ ಕುಟುಂಬಕ್ಕೆ ಆಸರೆಯಾಗಲು, ನಿಯಮಾನುಸಾರ ಮೃತರ ಕುಟುಂಬಕ್ಕೆ ಪರಿಹಾರ ಧನ ನೀಡಲಾಗುವುದು. ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಅರಣ್ಯದೊಳಗೆ ಗಸ್ತು ನಡೆಸುವಾಗ, ಕರ್ತವ್ಯ ನಿರ್ವಹಿಸುವಾಗ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು, ಹೆಚ್ಚು ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ.
ಸಣ್ಣ ಹೈದ ಸೇರಿ ಮೂವರು ಕಾಡಿನಲ್ಲಿ ಗಸ್ತು ತಿರುಗುವ ಸಂದರ್ಭ, ಇಬ್ಬರು ಸ್ವಲ್ಪ ಮುಂದೆ ಹೆಜ್ಜೆ ಹಾಕುತ್ತಾ ಹೋದರೆ ಇವರು ನಿಧಾನವಾಗಿ ಹಿಂದೆ ಬರುತ್ತಿದ್ದರು. ಪೊದೆಯಿಂದ ಜಿಗಿದ ಹುಲಿ ವಾಚರ್ ಮೇಲೆ ದಾಳಿ ನಡೆಸಿ ಪಂಜದಿಂದ ಏಟು ನೀಡಿದೆ. ಕೆಳಗೆ ಬಿದ್ದವರ ರಕ್ಷಣೆಗೆ ಬಂದೂಕು ಇಟ್ಟುಕೊಂಡಿದ್ದ ಇನ್ನಿಬ್ಬರು ಓಡಿ ಬಂದಿದ್ದಾರೆ. ಹುಲಿ ಘರ್ಜಿಸುತ್ತಾ ಕಾಡಿನೊಳಗೆ ಮಾಯವಾಗಿದೆ. ರಕ್ತಸ್ರಾವದಿಂದ ಬಳಲಿ ಮೃತಪಟ್ಟಿರೋದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಅರಣ್ಯ ಅಧಿಕಾರಿಗಳಿರಲಿ, ವಾಚರ್‌ಗಳಾಗಿರಲಿ ಯಾರೇ ಆದರೂ ವನ್ಯಜೀವಿಗಳ ಬಗ್ಗೆ ಜಾಗರೂಕತೆ ಅವಶ್ಯ.
Rainland YouTube channel








