ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ದಿಢೀರ್ ಕಾರ್ಯಾಚರಣೆ ನಡೆಸಿ ನಾಲ್ಕು ದಶಕದ ಒತ್ತುವರಿ ಜಮೀನು ತೆರವು ಮಾಡಿದ್ದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಜೊತೆಗೆ ರೈತ ಸಂಘಟನೆ ಕೂಡ ಈ ಪ್ರಕರಣ ಉದಾಹರಣೆಯಾಗಿರಿಸಿ ಜನಜಾಗೃತಿಗೆ ಮುಂದಾಗಿದೆ.
ಬಿಳಗಿ ಪಂಚಾಯಿತಿ ವ್ಯಾಪ್ತಿಯ ಕ್ಯಾದಗಿ ಅರಣ್ಯ ವಲಯದಲ್ಲಿ ಘಟನೆ ನಡೆದಿದ್ದು, ಗಣೇಶ ವೆಂಕಟರಮಣ ಹೆಗಡೆ ಗೊಳಿಕೈ ಎಂಬುವವರಿಗೆ ಸೇರಿದ ಒಂದು ಎಕರೆ ತೋಟದ ಅಡಕೆ ಮರಗಳನ್ನು ತೆರವು ಮಾಡಲಾಗಿದೆ. ಮಂಗಳವಾರ ಸುಮಾರು 20 ರಿಂದ 25 ಅರಣ್ಯ ಸಿಬ್ಬಂದಿ ಹಾಗೂ ಮರ ಕಡಿಯುವ ಕಾರ್ಮಿಕರು ಫಲ ನೀಡುತ್ತಿದ್ದ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕತ್ತರಿಸಿ ರಾಶಿ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳು ವೈರಲ್ ಆಗಿವೆ. ಈ ಜಮೀನಿನಲ್ಲಿ 1975ಕ್ಕೂ ಮೊದಲಿನಿಂದಲೂ, ಅಂದರೆ ಅಜ್ಜನ ಕಾಲದಿಂದಲೂ ಕೃಷಿ ಮಾಡಿಕೊಂಡು ಬರಲಾಗಿತ್ತು ಎಂದು ಕುಟುಂಬ ಸದಸ್ಯರು ಈಗ ಸಮಾಧಾನ ಹೇಳಲು ಬಂದವರಿಗೆ ವಿವರಿಸುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಷ್ಟಪಟ್ಟು ಬೆಳೆಸಿದ್ದ ಮರಗಳು ಫಸಲು ನೀಡುತ್ತಿದ್ದವು. ಕಣ್ಣೆದುರೇ ಕಡಿದು ಗುಡ್ಡೆ ಹಾಕಿರುವುದು ರೈತ ಕುಟುಂಬಕ್ಕೆ ಅರಗಿಸಲು ಆಗುತ್ತಿಲ್ಲ. ಈ ಹಿಂದೆ ಅತಿಕ್ರಮಣ ತೆರವು ಗೊಳಿಸುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಆದ್ರೆ ಈ ಕಾರ್ಯಾಚರಣೆ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಡಕೆ ಮರಗಳನ್ನು ಕಡಿದ ಘಟನೆ ನಿಧಾನವಾಗಿ ರಾಜಕೀಯ ಸ್ವರೂಪನ್ನೂ ಪಡೆದಿದೆ. ಆದರೆ ಕಾನೂನು ಪ್ರಕಾರವೇ ತೆರವು ಮಾಡಿದ್ದು ಒತ್ತುವರಿದಾರಿಗೆ ಸಾಕಷ್ಟು ಸಮಯವನ್ನೂ ಕೊಟ್ಟಿರುವುದಾಗಿ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರಿಂದ ಕೊಂಚ ಶಮನವಾದಂತಿದೆ. ರೈತ ಸಂಘಟನೆಯ ಜಿಲ್ಲಾ ಸಮಾವೇಶ ಮುಂದಿನ ತಿಂಗಳು ನಡೆಯಲಿದ್ದು ಅಲ್ಲಿ ಈ ವಿಷಯ ಪ್ರಸ್ತಾಪವಾಗವಲಿದೆ ಎಂದು ರೈತ ಮುಖಂಡರು ಭರವಸೆ ನೀಡಿದ್ದಾರೆ. ಕೆಲ ರಾಜಕೀಯ ಮುಖಂಡರೂ ಸಹ ಸ್ಥಳಕ್ಕೆ ತೆರಳಿ ರೈತ ಕುಟುಂಬ ಸದಸ್ಯರ ಜೊತೆ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆ ರೈತರು ಶಾಂತ ಭಾವದವರೆಂದು ಕಡೆಗಣಿಸಬಾರದು. ಅಡಕೆ ಮರಗಳನ್ನು ಕಡಿಯುವ ಅಧಿಕಾರ ನೀಡಿದವರಾರು..? ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವುದೇ ತಮ್ಮ ಗುರಿ ಎಂದುಕೊಂಡಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯ ಶಾಸಕರ ಮೌನವನ್ನೂ ಪ್ರಶ್ನಿಸಿದರು.
ಶಾಸಕರ ಆಗಮನದೊಂದಿಗೆ ಈ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ (ಕಾಂಗ್ರೆಸ್ ) ಭೀಮಣ್ಣ ನಾಯ್ಕ್ ವಿರೋಧ ಪಕ್ಷದವರು ವಾಸ್ತವ ಗೊತ್ತಿರದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಮುಂದುವರಿದು, ಈ ಪ್ರಕರಣದಲ್ಲಿ ರೈತನ ಜಮೀನು ಜಿಪಿಎಸ್ ಆಗಿರಲಿಲ್ಲ. ಹಾಗಾಗಿ ನ್ಯಾಯಾಲಯ ಕೂಡ ತೆರವು ಮಾಡಲು ಸೂಚಿಸಿದೆ. ಫಸಲು ಮರಗಳನ್ನು ಕಡಿದಿರುವುದನ್ನು ನೋಡಿದರೆ ಎಂಥವರಿಗೂ ನೋವಾಗುತ್ತದೆ. ಇನ್ನುಮುಂದೆ ಇಲಾಖೆ ಸಿಬ್ಬಂದಿ ಯಾವುದೇ ತೆರವು ಮಾಡುವಂತಿಲ್ಲ. ಅರಣ್ಯ ಹಾಗೂ ಒತ್ತುವರಿ ಜಮೀನಿನ ಮಧ್ಯೆ ಅಗಳ ಹೊಡೆಯಬೇಕು ಎಂದು ಶಾಸಕರು ಹೇಳಿದರು.
ಆದ್ರೆ ಅರಣ್ಯಾಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ಒತ್ತುವರಿದಾರರಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ಸಿಸಿಎಫ್ ಕೋರ್ಟ್‌ನಲ್ಲೂ ತಿರಸ್ಕೃತವಾಗಿತ್ತು. ಅವರಿಗೆ ಎರಡೂವರೆ ಎಕರೆಯಷ್ಟು ಜಮೀನಿದೆ. ಸರ್ಕಾರದ ಆದೇಶದ ಪ್ರಕರಣ ಕ್ರಮ ಕೈಗೊಳ್ಳಲಾಗಿದೆ. ಉಳಿದ ಕೆಲವು ಗುಂಟೆ ಒತ್ತುವರಿ ಜಮೀನಿಗೆ ಪುನಃ ಪ್ರಕ್ರಿಯೆ ಆರಂಭವಾಗುತ್ತದೆ ಎಂದಿದ್ದಾರೆ. ಅಡಕೆ ಫಸಲು ಮರಗಳ ಮಧ್ಯೆ ಇತ್ತು ಹಾಗೂ ಬೆಳೆ ಅಷ್ಟೇನು ಬಂದಿರಲಿಲ್ಲ. ರೈತ ಕುಟುಂಬವೇ ಒಪ್ಪಿ ಬಿಟ್ಟುಕೊಟ್ಟಿದೆ ಎಂದು ಹೇಳಿದ್ದಾರೆ.








