ಚಾಮರಾಜನಗರ ತಾಲೂಕು ನಂಜೇದೇವನಪುರದಲ್ಲಿ ಐದು ಹುಲಿಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಬಿಳಿಗಿರಿರಂಗನಾಥ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಪರಿಣಾಮಕಾರಿಯಾಗಿ ಕೂಂಬಿಗ್ ನಡೆಸುತ್ತಿದ್ದಾರೆ. ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ ಹುಲಿಗಳು ಡ್ರೋಣ್ ನಲ್ಲಿ ಸೆರೆಯಾಗಿದ್ದು ಆತಂಕ ಮೂಡಿಸಿವೆ.

ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ ಐದು ಹುಲಿಗಳ ಚಲನವಲನಗಳು ಹೊಲಕ್ಕೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹುಲಿಗಳ ಇರುವಿಕೆ ಖಾತ್ರಿಯಾದ ಹಿನ್ನೆಲೆ ಜನರನ್ನು ಕಾಡಿನಂಚಿಗೆ ತೆರಳದಂತೆ ಇರಿಸಲು ನಂಜೇದೇವನಪುರ, ಉಡಿಗಾಲ, ವೀರನಪುರ ಗ್ರಾಮಗಳಲ್ಲಿ ನಿಷೇಧಾಜ್ಞೆ ಹೊರಡಿಸಿ ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಆದೇಶಿಸಿದ್ದಾರೆ. ಡಿ. 22 ಹಾಗೂ 23 ರಂದು ಈ ನಿರ್ಬಂಧ ಜಾರಿ ಇರಲಿದೆ. ಯಾರೂ ಗುಂಪು ಸೇರದಂತೆ ಹಾಗೂ ಒಬ್ಬರೇ ಓಡಾಡದಂತೆ, ಕಾರ್ಯಾಚರಣೆ ವೇಳೆ ಜನರು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಹುಲಿ ಕಾರ್ಯಾಚರಣೆ ಹಿನ್ನೆಲೆ ಶಾಸಕ ಸಿ.ಪುಟ್ಟರಂಗಶೆಟ್ಟಿ ನಂಜೇದೇವನಪುರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹುಲಿಗಳನ್ನು ಸೆರೆ ಹಿಡಿಯಲು ಕಷ್ಟ. ಆನೆಗಳನ್ನು ಬಳಸಿ ಹುಲಿಗಳನ್ನು ಕಾಡಿಗೆ ಓಡಿಸುತ್ತೇವೆ ಎಂದ
ಅರಣ್ಯ ಅಧಿಕಾರಿಗಳ ಮಾತಿಗೆ ಒಪ್ಪದ ಶಾಸಕರು ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿದರು. ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಹುಲಿಗಳನ್ನು ಕಾಡಿಗೆ ಅಟ್ಟಬಾರದು, ಸೆರೆ ಹಿಡಿಯಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಸಿಎಂಗೆ ಶಾಸಕರು ಮನವರಿಕೆ ಮಾಡಿದರು.
ಶಾಸಕ ಪುಟ್ಟರಂಗಶೆಟ್ಟಿ ಮಾತಿಗೆ ಸಹಮತ ಸೂಚಿಸಿದ ಸಿಎಂ, ಕೂಡಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಜೊತೆ ಮಾತನಾಡುತ್ತೇನೆಂದು ಭರವಸೆ ನೀಡಿದರು. ಬಳಿಕ ಶಾಸಕರು ಅರಣ್ಯ ಸಚಿವ ಈಶ್ವರ ಖಂಡ್ರೆ ಬಳಿಯೂ ಮಾತನಾಡಿ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ನಂಜೇದೇವನಪುರ ಗ್ರಾಮದಲ್ಲಿ ಹೆಣ್ಣು ಹುಲಿ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಸಾಕು ಪ್ರಾಣಿಗಳೂ ಕೂಡ ಬಲಿಯಾಗಿವೆ. ಜನರೂ ಕೂಡ ಆತಂಕಗೊಂಡಿದ್ದಾರೆ. ಜನರಿಗೆ ಹುಲಿ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಹುಲಿಗಳನ್ನು ಸಂರಕ್ಷಿಸುವಂತೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆಯವರು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.








