ಶಿರಸಿ ವಿಭಾಗ, ಸಿದ್ದಾಪುರ ವಲಯ ಗವಿನಗುಡ್ಡದ ಅಂಚಿನ ತೋಟದಲ್ಲಿ ಕಾಲು ಮುರಿದುಕೊಂಡು ನಿಂತಿದ್ದ ದಷ್ಟಪುಷ್ಟ ಕಾಡುಕೋಣ ರಕ್ಷಣೆ ತರುವಾಯ ಮೃತಪಟ್ಟಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಮೌನವಾಗಿದ್ದು ಕಾಟಿ ರಕ್ಷಣೆ ಮಾಡಿಕೊಂಡು ಹೋದ ಶಿವಮೊಗ್ಗ ಮೃಗಾಲಯದ ವೈದ್ಯ ತಂಡ ಮರಣೊತ್ತರ ಪರೀಕ್ಷೆ ವರದಿ ನೀಡಬೇಕಿದೆ.
ಗವಿನಗುಡ್ಡದಂಚಿನಲ್ಲಿ ಮೇವು ಅಥವಾ ನೀರಿಗೆ ಅರಸಿ ಕಾಟಿ ಎತ್ತರದಿಂದ ನೆಗೆದು ಮುಂದಿನ ಬಲಗಾಲು ಮುರಿದುಕೊಂಡಿತ್ತು ಎಂದು ಸ್ಥಳೀಯರು ನಂಬಿದ್ದರು. ಘಟನೆ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದರೂ ಸಹ, ಸ್ವಲ್ಪ ಗುಣಮುಖವಾದರೂ ಕಾಡಿಗೆ ತೆರಳಬಹುದು ಎಂದು ಕಾದರು. ಈ ನಡುವೆ ಅಲ್ಲಿನ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ತಾವೇ ಚಿಕಿತ್ಸೆ ಕೊಡಿಸುತ್ತೇವೆ ಎಂದರು. ಯಾವಾಗ ಒತ್ತಡ ಹೆಚ್ಚಾಯ್ತೋ ಅರಣ್ಯಾಧಿಕಾರಿಗಳು ಶಿವಮೊಗ್ಗ ಮೃಗಾಲಯದ ವೈದ್ಯರ ತಂಡವನ್ನು ಗುರುವಾರ ಸ್ಥಳಕ್ಕೆ ಕರೆಸಿ, ಅರಿವಳಿಕೆ ನೀಡಿ ಸ್ಥಳೀಯರ ಸಹಾಯದಿಂದ ಲಿಫ್ಟ್ ಮಾಡುವ ಪ್ರಯತ್ನ ಮಾಡಿದರು. ವೈದ್ಯರ ತಂಡ ಕಾಟಿಯನ್ನೇನೋ ಪ್ರಜ್ಞೆತಪ್ಪಿಸಿ ಶಿವಮೊಗ್ಗ ತೆಗೆದುಕೊಂಡು ಹೋಗಿದೆ ಆದರೆ ಅದು ಮೃಗಾಲಯ ಸೇರುವುದರೊಳಗೆ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕಾಟಿ ಮೃತಪಟ್ಟ ಬಗ್ಗೆ ಇಲಾಖೆ ಸಿಬ್ಬಂದಿ ಅಧಿಕೃತವಾಗಿ ಹೇಳದಿದ್ದರೂ ಸಹ, ಮರಣೋತ್ತರ ಪರೀಕ್ಷೆಗೆ ಎದಿರು ನೋಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ವರದಿ ಕೈ ಸೇರಲಿದೆ.
ರಾಜ್ಯದಲ್ಲಿ ಕಾಟಿ ಸೆರೆಗೆ ತಜ್ಞರ ತಂಡ ಇಲ್ಲ. ಸೂಕ್ತ ಸಲಕರಣೆಗಳಿಲ್ಲ. ಅರಣ್ಯ ಸಚಿವ ಈಶ್ವರ ಬಿ ಖಂಡ್ರೆಯವರಿಗೆ ಈ ಬಗ್ಗೆ ಗಮನಹರಿಸಲು ಪರಿಸರಾಸಕ್ತರು ಹಲವು ಸಲ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯ ಪ್ರದೇಶ ಪ್ರವಾಸ ಮಾಡಿ, ಇವುಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದು ಸುಮ್ಮನೆ ಕುಳಿತಿದ್ದಾರೆಯೇ ವಿನಃ ಅನುಷ್ಠಾನವಿಲ್ಲ. ಸಾಮಾನ್ಯವಾಗಿ ಕಾಟಿಗಳನ್ನು ಸೆರೆಹಿಡಿಯುವಾಗ ಅವುಗಳ ದೇಹದ ಮೇಲೆ ಆಗುವ ಪರಿಣಾಮಗಳು ಇಂತಹ ಅವಘಡಕ್ಕೆ ಕಾರಣವಾಗುತ್ತವೆ. ಸಾಕು ಪ್ರಾಣಿಯಂತೆ ಕಂಡರೂ ಸೆರೆ ವೇಳೆ ಹೃದಯಾಘಾತದಿಂದ ಮೃತಪಡುವ ಪ್ರಮಾಣ ಹಚ್ಚಿರುತ್ತೆ. ಈ ಪ್ರಕರಣವೂ ಸಹ ಭಿನ್ನವಾಗಿಲ್ಲ.
ಗವಿನಗುಡ್ಡದಲ್ಲಿ ಸೆರೆಯಾದ ಕಾಟಿ ಪರಸ್ಪರ ಇನ್ನೊಂದು ಕೋಣದ ಜತೆಯ ಕಾದಾಟದಲ್ಲಿ ಬಿದ್ದು ಕಾಲು ಮುರಿದುಕೊಂಡಿರಬಹುದು. ಕಾದಾಟದಲ್ಲೇ ಘಾಸಿಯಾಗಿದ್ದ ಕೋಣಕ್ಕೆ ಜನರೂ ಸಹ ಸುತ್ತುವರಿದು ಅದು ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಸಾಧ್ಯತೆ ಇದೆ. ಎರಡು ದಿನದ ನಂತರ ಪುನಃ ಸೆರೆ ಕಾರ್ಯಾಚಾರಣೆ ಆಘಾತದಿಂದ ಮೃತಪಟ್ಟಿರಬಹುದು ಎನ್ನಲಾಗಿದೆ..








