Ode to the west wind

Join Us on WhatsApp

Connect Here

Written by 6:23 am ACTIVISM, NEWS

2 ಲಕ್ಷ ಎಕರೆ ಅರಣ್ಯ ಒತ್ತುವರಿ: ಶಿವಮೊಗ್ಗ, ಉ.ಕ ದಲ್ಲೇ ಹೆಚ್ಚು: ಅರಣ್ಯ ಸಚಿವ

ಬೆಂಗಳೂರು: ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ದೊಡ್ಡ ಪ್ರಮಾಣದ ಒತ್ತುವರಿಯನ್ನು ಮೊದಲಿಗೆ ತೆರವುಗೊಳಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯಿದೆ ರಚಿಸಿದ್ದಾಗ್ಯೂ, ಸುಮಾರು 2 ಲಕ್ಷ ಎಕರೆ ಅರಣ್ಯಭೂಮಿ ಒತ್ತುವರಿ ಆಗಿರುವುದು ಆಘಾತಕಾರಿ ವಿಷಯ ಎಂದರು.

ದೊಡ್ಡ ಒತ್ತುವರಿ ತೆರವಿಗೆ ಸೂಚನೆ:

ಯಾರೇ ಅರಣ್ಯ ಭೂಮಿ ಒತ್ತುವರಿ ಮಾಡಿದರೂ ಅದು ಅಪರಾಧ. ಬೆಂಗಳೂರು ನಗರದ ಸುತ್ತಮುತ್ತ ಮತ್ತು ಪಟ್ಟಣ, ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ  ಬೆಲೆಬಾಳುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಹೇಳಿದರು.
ಈಗಾಗಲೇ ಕೊತ್ತನೂರಿನಲ್ಲಿ 400ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯನ್ನು ರಕ್ಷಿಸಲಾಗಿದ್ದು, ಇದನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದೂ ತಿಳಿಸಿದರು.

ಮಾನವ -ವನ್ಯಜೀವಿ ಸಂಘರ್ಷ:

ಅರಣ್ಯದಲ್ಲಿ ವನ್ಯ ಮೃಗಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ಆದರೆ ಅದಕ್ಕೆ ಅನುಗುಣವಾಗಿ ವನ ಪ್ರದೇಶ ಹೆಚ್ಚಾಗುತ್ತಿಲ್ಲ. ಹೀಗಾಗಿ ಮಾನವ ಮತ್ತು ವನ್ಯ ಜೀವಿ  ಸಂಘರ್ಷ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಒತ್ತುವರಿ ತೆರವು ಅತ್ಯಗತ್ಯ ಕ್ರಮವಾಗಿದೆ, ತಾವು ಸಚಿವರಾದ ಬಳಿಕ 2 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದು ತಿಳಿಸಿದರು.
ಕಾಡಿನಂಚಿನಲ್ಲಿರುವ ಹಲವು ದಶಕಗಳ ಬೆಲೆಬಾಳುವ ವೃಕ್ಷಗಳನ್ನು ಕಡಿದು ಪಟ್ಟಾಭೂಮಿ ವಿಸ್ತರಣೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ ಈ ಬಗ್ಗೆ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಅರಣ್ಯ ಸಂರಕ್ಷಣಾ ಕಾಯಿದೆ 1980ರ ಜಾರಿಗೂ ಮುನ್ನ ಅರಣ್ಯ ಭೂಮಿ ಒತ್ತುವರಿ ಮಾಡಿ ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕಿದೆ. ಸುಮಾರು 13,155 ಪ್ರಕರಣಗಳ 31,864 ಎಕರೆ ಭೂಮಿ ಇದ್ದು, ಈ ಪೈಕಿ ಸುಮಾರು 7 ಸಾವಿರ ಪ್ರಕರಣಗಳಲ್ಲಿ ಪಟ್ಟಾ ಕೊಡಲು ಕ್ರಮವಹಿಸಬಹುದಾಗಿದೆ.  ಈ ಸಂಬಂಧ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
1980ಕ್ಕೆ ಮುನ್ನ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿರುವ ಮತ್ತು ಉಳಿಮೆ ಮಾಡುತ್ತಿರುವ ಬಡ ರೈತರಿಗೆ ಕಿರುಕುಳ ನೀಡದೆ, ದೊಡ್ಡ ಒತ್ತುವರಿಗಳನ್ನು ಮೊದಲು ತೆರವು ಮಾಡಿಸಲು ಕ್ರಮ ವಹಿಸುವಂತೆಯೂ ಆದೇಶಿಸಿರುವುದಾಗಿ ಹೇಳಿದರು. ಅರಣ್ಯ ಒತ್ತುವರಿ ಕುರಿತಂತೆ ವಲಯವಾರು, ವಿಭಾಗವಾರು, ವೃತ್ತವಾರು ಮಾಹಿತಿ ಕೈಸೇರಿದ ಬಳಿಕ ಕ್ರಮ ವಹಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.


ವನ್ಯಮೃಗ ಅಂಗಾಂಗದ ವಸ್ತು ಹಿಂತಿರುಗಿಸಲು ಗಡುವು:

ಹುಲಿ ಉಗುರು, ಆನೆ ಬಾಲದ ಆಭರಣ, ವಿವಿಧ ಕಾಡುಮೃಗಗಳ ಕೊಂಬು, ಮುಖದ ಟ್ರೋಫಿಗಳು ಇತ್ಯಾದಿಯನ್ನು ನೋಂದಣಿ ಮಾಡಿಸಿ ಇಟ್ಟುಕೊಳ್ಳಲು ನೀಡಲಾಗಿದ್ದ ಗಡುವು ಹಲವು ದಶಕಗಳ ಹಿಂದೆಯೇ ಮುಗಿದಿದ್ದು, ಈಗ ಅಂತಹ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಮಾತ್ರ ಅವಕಾಶ ನೀಡಬಹುದಾಗಿದೆ ಎಂಬ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯೊಂದಿಗೆ ಸಮಾಲೋಚನೆ ನಡೆದಿದ್ದು, ಈ ತಿಂಗಳಲ್ಲೇ ಸಚಿವ ಸಂಪುಟದಲ್ಲಿ ಮಂಡಿಸಿ ಒಂದು ಬಾರಿ ಮಾತ್ರ 3 ತಿಂಗಳುಗಳ ಕಾಲಾವಕಾಶ ನೀಡಲಾಗುವುದು ಎಂದರು.
ಹಲವು ಮುಗ್ದ ಜನರಿಗೆ ಕಾನೂನಿನ ಅರಿವಿಲ್ಲ, ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕದಂತೆ ಈ ಪರಿಹಾರೋಪಾಯ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕಾನೂನು ರೀತಿಯಲ್ಲೇ ಕ್ರಮ:

ಹಾಸನ ಜಿಲ್ಲೆ ಬೇಲೂರು ತಾಲೂಕು ನಂದಗೊಂಡನ ಹಳ್ಳಿಯಲ್ಲಿ 126 ಬೃಹತ್ ಮರಗಳನ್ನು ಕಡಿದಿರುವುದನ್ನು ನೋಡಿ ನಾಡಿನ ಜನರೇ ಸಂಕಟಪಟ್ಟಿದ್ದಾರೆ. ಇಲ್ಲಿ ಯಾರ ಮೇಲೋ ಆರೋಪ ಮಾಡುವ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಮರ ಅಕ್ರಮ ಕಡಿತಲೆ ಆಗಿರುವ ಜಮೀನಿನಲ್ಲಿ ಶುಂಠಿ ಬೆಳೆಯಲು ಕರಾರು ಮಾಡಿಕೊಂಡಿರುವ ವ್ಯಕ್ತಿಯನ್ನು ವಶಕ್ತೆ ಪಡೆಯಲಾಗಿತ್ತು ಎಂದರು. ಬೃಹತ್ ಮರ ಇರುವ ಕಡೆ ಶುಂಠಿ ಬೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

Visited 16 times, 1 visit(s) today
[mc4wp_form id="5878"]