ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು, ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪದ ಅಂಗಡಿಯಲ್ಲಿ ಸ್ಫೋಟಕ ವಸ್ತು ಸಿಡಿದು ಓರ್ವ ಗಾಯಗೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಗಾಯಾಳು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಸ್ಫೋಟಗೊಂಡ ಬ್ಯಾಗ್ ಬದಿಯಲ್ಲಿ ಕುಕ್ಕರ್ ಕೂಡ ಕಂಡಿದ್ದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿ ಹಂದಿ ಶಿಕಾರಿ ಸ್ಫೋಟಕ ಎಂದಿದ್ದಾರೆ. ದಂಪತಿಗಳು ಹಂದಿ ಬೇಟೆಗೆ ಬಳಸುವ ಸ್ಫೋಟಕ ವಸ್ತುಗಳನ್ನ ಚೀಲದಲ್ಲಿಟ್ಟುಕೊಂಡು ಪರಿಚಯಸ್ಥರರ ಅಂಗಡಿಗೆ ಬಂದರು. ಸಂತೆ ಮಾಡಿಕೊಂಡು ಬರಲು ಚೀಲವನ್ನ ಅಲ್ಲೇ ಬಿಟ್ಟು ಹೋಗಿದ್ದರು. ಅವರು ಬರುವುದರೊಳಗೆ ಚೀಲ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಾರೆ.
ಶಿರಾಳಕೊಪ್ಪ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಆಂಟನಿ ಎಂಬುವರಿಗೆ ಸೇರಿದ ಬೆಡ್-ಶೀಟ್ ಅಂಗಡಿ ಇದೆ. ಹಾವೇರಿ ಜಿಲ್ಲೆಯ ಕೊಪ್ಪರಸಿಕೊಪ್ಪ ಗ್ರಾಮದ ಉಮೇಶ್ ಹಾಗೂ ರೂಪಾ ಗೊಲ್ಲರ್ ದಂಪತಿಗಳು ಬೆಡ್‌ಶೀಟ್ ಖರೀದಿಸಿ ಚೀಲವನ್ನ ಅಲ್ಲೇ ಇಟ್ಟು ಅರ್ಧಗಂಟೆಯಲ್ಲಿ ಸಂತೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ. ದಂಪತಿಗಳಿಗೆ ಈ ಅಂಗಡಿಯವ ಪರಿಚಯಸ್ಥನೂ ಆಗಿದ್ದು ಸಹಜವಾಗಿ ಬ್ಯಾಗ್ ಇಟ್ಟು ಹೋಗಲು ಅನುಮತಿ ನೀಡಿರುತ್ತಾನೆ. ಆದರೆ ಬ್ಯಾಗ್ ಕೆಲವೇ ನಿಮಿಷದಲ್ಲಿ ಸಿಡಿದು ಅಂಗಡಿಯ ಆಂಟನಿಗೆ ಸುಟ್ಟ ಗಾಯಗಳಾಗಿವೆ. ಬ್ಲಾಸ್ಟ್ ಶಬ್ದ ಹಾಗೂ ಗದ್ದಲಕ್ಕೆ ಜನ ಮುತ್ತಿಕೊಂಡು ಸಂಚಲನ ಸೃಷ್ಟಿಸಿತು. ಶಿರಾಳಕೊಪ್ಪ ಪೊಲೀಸರು ವಿಚಾರಣೆ ಮಾಡಿದಾಗ ಹಂದಿಗೆ ಇಟ್ಟು ಉಡಾಯಿಸಲು ಬಳಸುವ ಕಚ್ಚಾ ಬಾಂಬ್ ತಯಾರಿಕಾ ಸಾಮಾಗ್ರಿಗಳೇ ಸಿಡಿದಿರುವುದಾಗಿ ತಿಳಿದು ಬಂದಿದೆ. ದಂಪತಿಗಳನ್ನ ವಿಚಾರಣೆ ನಡೆಸಿರುವ ಪೊಲೀಸರು, ವಸ್ತುಗಳನ್ನ ಕೊಂಡು ತಂದ ಪಟಾಕಿ ಅಂಗಡಿ ಅಥವಾ ಸ್ಫೋಟಕ ಅಕ್ರಮ ಮಾರಾಟ ಮಾಡಿದವನ ಹುಡುಕುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್‌ಪಿ ಆರೋಪಿಗಳು ಸಿಕ್ಕಿದ್ದಾರೆ, ವಿಚಾರಣೆ ನಡೆಯುತ್ತಿದೆ. ಕುಕ್ಕರ್ ಇದೆ ಎಂಬ ಕಾರಣಕ್ಕೆ ಏನೇನೋ ಸುದ್ದಿಗಳನ್ನ ಬಿತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.
