ಪಶ್ಚಿಮಘಟ್ಟ ಸಾಲಿನಲ್ಲಿ ಕಂಡು ಬರುವ ವಿಶಿಷ್ಟ ಪ್ರಾಣಿ ಪ್ರಬೇಧ ಕಾಡೆಮ್ಮೆ/ ಕಾಡುಕೋಣಗಳು ನಿರುಪದ್ರವಿಗಳು. ಜನ ನಿಬಿಡ ಸ್ಥಳದಲ್ಲೂ ನಿರ್ಭಯವಾಗಿ ಓಡಾಡುವ ಈ ಪ್ರಬೇಧ ಮಾಂಸದ ದಾಹಕ್ಕೆ ಕ್ಷೀಣಿಸುತ್ತಿದೆ. ಮಲೆನಾಡಿನ ಕೆಲ ಸಮುದಾಯಗಳು ಸುಧಾರಿತ ಬಂದೂಕಿನಲ್ಲಿ ಅವ್ಯಾಹತವಾಗಿ ಬೇಟೆಯಾಡುತ್ತಿವೆ. ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದಲ್ಲಿ ಒಂದು ವರ್ಷದಲ್ಲಿ ಹತ್ತಾರು ಕಾಡೆಮ್ಮೆ-ಕಾಡುಕೋಣಗಳು ಹೀಗೇ ಬಲಿಯಾಗಿವೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಹೋಬಳಿ ನಾಗರಹಳ್ಳಿ ಗ್ರಾಮದಲ್ಲಿ ಕಾಡುಕೋಣಗಳ ಮೂಳೆಗಳು ದೊರತಿದ್ದು ಆತಂಕಕ್ಕೀಡು ಮಾಡಿದೆ. ಈ ಭಾಗದಲ್ಲಿ ಗುಂಪಾಗಿ ಓಡಾಡುತ್ತಿದ್ದ ಕಾಡುಕೋಣಗಳು ದಿಢೀರನೇ ನಾಪತ್ತೆಯಾಗಿರುವುದಕ್ಕೂ ಈ ಅವಶೇಷಗಳು ಸಿಕ್ಕಿರೋದಕ್ಕೂ ಅನುಮಾನ ಮೂಡಿದೆ. ಮಾಂಸಕ್ಕಾಗಿಯೋ ಅಥವಾ ಫಸಲು ರಕ್ಷಣೆಗೋ ಕೋಣಗಳನ್ನ ಕೊಂದಿರುವುದು ಕಂಡು ಬಂದಿದ್ದು ಸ್ಥಳಕ್ಕೆ ಸಾಗರ ವಿಭಾಗದ ಡಿಎಫ್‌ಓ ಸಂತೋಷ್ ಕೆಂಚಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಕಾಡುಕೋಣಗಳದ್ದೇ ಕಳೇಬರ ಎಂದು ನಿರ್ಧರಿಸಲು ತಕ್ಷಣ ಸಾಧ್ಯವಿಲ್ಲ. ಅವಶೇಷಗಳನ್ನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ಮೇಲೆ ಪೂರ್ಣ ವಿವರ ಸಿಗುತ್ತೆ ಎಂದರು.
ಒಂದು ವರ್ಷದಿಂದ ಸಾಕಷ್ಟು ಕಾಡುಕೋಣಗಳು ಸಾಗರ, ಹೊಸನಗರ ಹಾಗೂ ಸೊರಬ ತಾಲೂಕಿನಲ್ಲಿ ಮೃತಪಟ್ಟಿವೆ. ಚಂದ್ರಗುತ್ತಿ ಕಾಡಿನಲ್ಲಿ ಎರಡು ಕಾಡುಕೋಣಗಳನ್ನ ವಿದ್ಯುತ್ ಹರಿಸಿ ಕೊಂದಿದ್ದರು. ಹೊಸನಗರದಲ್ಲಿ ಐಷಾರಾಮಿ ಬಂದೂಕಿನ ಗುಂಡುಗಳು ಸಿಕ್ಕಿದ್ದವು. ಉಳವಿಯಲ್ಲಿ ಮಾಂಸಕ್ಕಾಗಿಯೇ ಬೇಟೆಯಾಡುವ ಜಾಲ ಪತ್ತೆಯಾಗಿತ್ತು. ಇದಾದ ಬಳಿಕ ಈ ಘಟನೆ ಆತಂಕ್ಕೀಡು ಮಾಡಿದೆ.