ಪರಿಸರ ಸೂಕ್ಷ್ಮ ಹಾಗೂ ನಿಷೇಧಿತ ಅರಣ್ಯ ಪ್ರದೇಶಗಳಲ್ಲಿ ಅಗತ್ಯ ಅನುಮತಿ ಪಡೆಯದೇ ವಿಡಿಯೋ ಚಿತ್ರೀಕರಣ ಮಾಡುವ ಕಂಟೆಂಟ್ ಕ್ರಿಯೇಟರ್ ಗಳಿಗೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ರಾಜ್ಯದ ಡಿಜಿಟಲ್ ಮಾಧ್ಯಮ ಸಂಸ್ಥೆಯೊಂದು ಏಪ್ರಿಲ್ ತಿಂಗಳಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಕ್ರಾಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿತ್ತು. ಈ ಸಂಬಂಧ ಶಿವಮೊಗ್ಗದ ಕೆಲ ಪರಿಸರಾಸಕ್ತರು ಮೇಲಧಿಕಾರಿಗೆ ಲಿಖಿತ ದೂರು ನೀಡಿದ್ದರು. ಇದೇ ಸಂಸ್ಥೆ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿಯೂ ಸಹ ಲೋಪವೆಸಗಿದ್ದು ಪ್ರಾಣಿಗಳಿಗೆ ನೀಡುವ ಮಾಂಸಾಹಾರಗಳನ್ನ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನ ಗಂಭೀರವಾಗಿ ತೆಗೆದುಕೊಂಡಿರುವ ಸಚಿವರು ಮೇಲಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲಿನ ಆನೆ ಶಿಬಿರದ ಪುಂಡಾನೆ ಪಳಗಿಸುವ ಪ್ರದೇಶ (Kraal) ಸೇರಿದಂತೆ ಮೃಗಾಲಯ ಪ್ರಾಧಿಕಾರಕ್ಕೆ ಸೇರಿದ ವಿವಿಧ ಮೃಗಾಲಯಗಳ ನಿರ್ಬಂಧಿತ ಸ್ಥಳಗಳಲ್ಲಿ ಅಂದರೆ ವನ್ಯಜೀವಿಗಳಿಗೆ ಆಹಾರವಾಗಿ ನೀಡುವ ಮಾಂಸ ಕತ್ತರಿಸುವ ಸ್ಥಳ, ವನ್ಯ ಮೃಗ ಮರಿಗಳ ಆರೈಕೆ ಕೇಂದ್ರಗಳಲ್ಲಿ ಕಂಟೆಂಟ್ ಕ್ರಿಯೇಟರ್ ಖಾಸಗಿ ಸಂಸ್ಥೆಯವರಿಗೆ ಚಿತ್ರೀಕರಣ ಮಾಡಲು ಅವಕಾಶ ಕಲ್ಪಿಸಲಾಗಿರುವುದನ್ನು ಮತ್ತು ಡಿಜಿಟಲ್ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಪಶು ವೈದ್ಯರು ವಿವಾದಾತ್ಮಕ ಹೇಳಿಕೆಗಳನ್ನು ಕೂಡ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಡಿಜಿಟಲ್ ಮಾಧ್ಯಮ ಪ್ರಸಾರ ಮಾಡುತ್ತಿರುವ ಸರಣಿ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಅನುಮತಿ ಕೊಟ್ಟವರು ಯಾರು? ಈ ಸಂಬಂಧ ಮಾಧ್ಯಮಗಳಲ್ಲಿ ವರದಿ ಸಹ ಪ್ರಕಟವಾಗಿದ್ದು, ಮಲೆನಾಡು ವನ್ಯಜೀವಿ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳೇನು? ಅನುಮತಿ ಇಲ್ಲದೆ ಚಿತ್ರೀಕರಣ ಮಾಡಿದ್ದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗಿದೆಯೇ? ಎಂಬ ವಿವರದೊಂದಿಗೆ 3 ದಿನಗಳ ಒಳಗಾಗಿ ಈ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸಚಿವರು ಖಡಕ್ ಆದೇಶ ನೀಡಿದ್ದಾರೆ.

Karnataka Forest Minister Eshwar B. Khandre has initiated action against officials who granted permission to a YouTube content creator to film in restricted forest areas without necessary approval. The digital media firm had filmed in Shivamogga’s Sakrebail Elephant Camp and Bannerghatta Biological Park, sparking complaints from environmentalists.