ಸೊರಬ ತಾಲೂಕಿನಲ್ಲಿ ಪರಿಸರ ಹಾನಿ, ಒತ್ತುವರಿ, ಕಾಡು-ವನ್ಯಜೀವಿಗಳ ನಾಶ ಪದೇ ಪದೇ ಕೇಳಿಬರುತ್ತಿದೆ. ಅದರಲ್ಲೂ ಚಂದ್ರಗುತ್ತಿ ಹೋಬಳಿಯಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಾರದ ಹಿಂದೆ ಜೋಡಿ ಕಾಡುಕೋಣಗಳು ಈ ಭಾಗದಲ್ಲಿ ಮೃತಪಟ್ಟು ಸುದ್ದಿಯಾಗಿತ್ತು. ಈಗ ಇಲ್ಲಿನ ಹೊಳೆಮರೂರು ಗ್ರಾಮದಲ್ಲಿ ಒಬ್ಬನೇ ವ್ಯಕ್ತಿ ಹತ್ತಾರು ಎಕರೆ ಜಾಗದಲ್ಲಿ ಮರಗಳನ್ನ ಕಡಿದು ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇದು ಅರಣ್ಯ ಇಲಾಖೆ ಸಿಬ್ಬಂದಿಗಳ ಲೋಪದಂತೆ ಕಂಡರೂ ಸಹ ಈ ದುರಂತದ ಬೇರುಗಳು ಕಂದಾಯ ಇಲಾಖೆ ಅಧಿಕಾರಿಗಳನ್ನ ಸುತ್ತಿಕೊಂಡಿದೆ. ಆದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಚೇರಿಗೂ ಕ್ಷಿಪ್ರವಾಗಿ ಮಾಹಿತಿ ತಲುಪಿದ್ದು ತನಿಖೆ ಮುಂದುವರಿದಿದೆ.

ಏನಿದು ಘಟನೆ..?
ಬಾಡದಬೈಲಿನ ವ್ಯಕ್ತಿಯೊಬ್ಬರು ಸೇನೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಅವರ ಕೋಟಾದಡಿ ಸಿಗುವ ಜಾಗಕ್ಕೆ ಇಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳು ಸೊಂಪಾಗಿ ಬೆಳೆದ ಕಾಡನ್ನೇ ತೋರಿಸಿದ್ದಾರೆ. ಅಧಿಕಾರಿಗಳ ಪ್ರಕಾರ ರೆವಿನ್ಯೂ ಜಾಗವಾಗಿರುವ ಈ ಪ್ರದೇಶ ಊರಿನಾಚೆ ಕಾಡಿನಂತೆ ರೂಪುಗೊಂಡಿದೆ. ಯಾವಾಗ ಹತ್ತಾರು ಎಕರೆ ಜಾಗ ಕಂಡಿತ್ತೋ, ಗಿಡಮರಗಳನ್ನ ಧರೆಗುರುಳಿಸಿ ಬೆಂಕಿ ಇಟ್ಟು ನಿರ್ನಾಮ ಮಾಡಲಾಗಿದೆ. ಈ ಗ್ರಾಮದ ಸೆಕ್ಷನ್ ೧೦ರಲ್ಲಿರುವ ಜಾಗ ಎಂದು ಮಾಹಿತಿ ಇದೆಯದ್ದಾದರೂ ಸಹ ಈ ಜಾಗ ಅರಣ್ಯ ಪ್ರದೇಶ ( ಡೀಮ್ಡ್) ಅಲ್ಲ. ಮರಗಳು ಇರೋದ್ರಿಂದ ಅರಣ್ಯ ಗುಣಲಕ್ಷಣಗಳಿವೆ ಎಂದು ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರ ಕಚೇರಿ ತಲುಪಿದ್ದು ತಪ್ಪಿತಸ್ಥರು ಯಾರೇ ಇದ್ದರೂ, ಅಧಿಕಾರಿಗಳ ಲೋಪದೋಷಗಳಿದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕಿದೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳ ಹುಚ್ಚಾಟಕ್ಕೆ ಕೊನೆ ಇಲ್ಲದಂತಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆಯ ಸಂಘರ್ಷಕ್ಕೆ ಈ ಪ್ರಕರಣವೂ ಸೇರಿಕೊಳ್ಳುವ ಸಾಧ್ಯತೆ ಇದೆ. ಘಟನೆ ಬಗ್ಗೆ ಹೊಳೆಮರೂರಿನ ಗ್ರಾಮಸ್ಥರು ಮಾತನಾಡುತ್ತಾ, ಬೆಂಕಿ ಇಟ್ಟ ಜಾಗದಲ್ಲಿ ತುಂಬಾ ಕಾಡು ಇತ್ತು. ಕಂದಾಯ ಇಲಾಖೆ ಅಧಿಕಾರಿಗಳೇ ತಪ್ಪಿತಸ್ಥರು. ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಕರ್ತವ್ಯ ಪಾಲಿಸಿದ್ದಾರೆ ಎನ್ನುತ್ತಾರೆ. ಒಟ್ಟಿನಲ್ಲಿ ಈ ಪ್ರಕರಣ ಪೂರ್ಣ ತನಿಖೆಯಾಗಿ ಹಾಗೇನಾದರೂ ಸೋಂಪಾಗಿ ಕಾಡು ಇತ್ತು ಎಂದಾದರೆ ಎರಡೂ ಇಲಾಖೆಗಳಿಗೂ ಪರಿಸರ ಸಂರಕ್ಷಿಸುವ ಜವಾಬ್ದಾರಿ ಇದೆ. ಇದಕ್ಕೆ ಊರಿನವರೂ ಕೂಡ ಕೈ ಜೋಡಿಸಲಿದ್ದಾರೆ.