ಹಲವು ವರ್ಷಗಳ ನಂತರ ಮಲೆನಾಡಿನಲ್ಲಿ ಜೂನ್ ತಿಂಗಳೂ ಬೇಸಿಗೆಯಂತಾಗಿದೆ. ಮಳೆ ಮುನ್ಸೂಚನೆ ಕಾಣದೇ ಭೂಮಿ ಬರಡಾದಂತಾಗಿದೆ. ಮಲೆನಾಡಿನ ಪ್ರಮುಖ ನದಿ ಶರಾವತಿ ತನ್ನ ಹರಿವಿನುದ್ದಕ್ಕೂ ಬತ್ತಿ ಹೋಗಿದೆ. ದಿನೇ ದಿನೇ ನೀರು ಬಸಿದು ಹೋಗುತ್ತಿರುವುದರಿಂದ ಸಿಗಂದೂರು ಲಾಂಚ್ ಗಳು ಸೇವೆ ಸ್ಥಗಿತಗೊಳಿಸಲಿವೆ. ರಾಜ್ಯದ ಪ್ರಮುಖ ಪ್ರವಾಸಿತಾಣವಾಗಿರುವ ಸಿಗಂದೂರಿಗೆ ಬರುವ ಪ್ರವಾಸಿಗರ ವಾಹನಗಳನ್ನ ನಿಷೇಧಿಸುವ ಆತಂಕ ಎದುರಾಗಿದೆ. ಈಗಾಗಲೇ ಹೊಳೆಬಾಗಿಲು ತೀರದಲ್ಲಿ ಲಾಂಚ್ ಏರುವ ದಿಂಬದಲ್ಲಿ ನೀರು ಕಡಿಮೆಯಾಗಿದೆ. ವಾಹನಗಳನ್ನ ಲಾಂಚ್ ಗೆ ಏರಿಸಲು ಕಷ್ಟವಾಗುತ್ತಿದೆ. ಇನ್ನೆರಡು ದಿನ ಇದೇ ವಾತಾವರಣ ಮುಂದುವರಿದರೆ ಜನರನ್ನ ಮಾತ್ರ ಸಾಗಿಸಲು ಒಳನಾಡು ಜಲಸಾರಿಗೆ ಇಲಾಖೆ ಮುಂದಾಗಲಿದೆ.

ಸಾಗರ ಪಟ್ಟಣದಿಂದ ಇಪ್ಪತ್ತೈದು ಕಿಲೋಮೀಟರ್ ದೂರದ ಶರಾವತಿ ಹಿನ್ನೀರಿನ ಲಾಂಚ್ ಗಳು, ನದಿ ತೀರದಾಚೆ ದ್ವೀಪದಂತಿರುವ ಗ್ರಾಮಗಳ ಮೂವತ್ತು ಸಾವಿರ ಜನರ ಸಂಪರ್ಕ ಸೇತುವಾಗಿವೆ. ಹದಿನೈದು ವರ್ಷಗಳ ಹಿಂದೆ ಕೂಡ ಇದೇ ತರಹದ ಪರಿಸ್ಥಿತಿ ಇತ್ತು. ಆಗ ಲಾಂಚ್ ಗಳನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಈ ವರ್ಷ ಇದೇ ತರಹದ ಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
ತುಮರಿ ಹಳ್ಳಿಯ ಗ್ರಾಮಸ್ಥ ಗಣೇಶ್ ಹಾರಿಗೆ ಮಾತನಾಡಿ, ಮಳೆಗಾಲ ಜೂನ್ ನಲ್ಲಿ ಆರಂಭವಾಗಬೇಕಿತ್ತು ಆದರೆ ಆರಂಭವಾಗಿಲ್ಲ. ಶರಾವತಿ ನದಿ ನೀರೂ ಕೂಡ ಬತ್ತುತ್ತಿದೆ. ಲಾಂಚ್ ಗಳನ್ನ ನಿಲ್ಲಿಸಲು ತೊಡಕಾಗುತ್ತಿದೆ. ವಾಹನಗಳನ್ನ ಕೆಲ ದಿನಗಳಲ್ಲಿ ಲಾಂಚ್ ಮೇಲೆ ನಿಷೇಧಿಸಲಾಗುತ್ತೆ. ಸ್ಥಳೀಯರಿಗಾಗಿಯೇ ನಿಯೋಜನೆಯಾಗಿರುವ ಲಾಂಚ್ ಗಳಲ್ಲಿ ಜನರನ್ನಷ್ಟೇ ಬಿಡುತ್ತಾರೆ. ಹಾಗಾಗಿ ಪ್ರವಾಸಿಗರು ಬದಲಿ ಮಾರ್ಗ ನೋಡಿಕೊಳ್ಳಬೇಕು. ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಸುತ್ತು ಹಾಕಿ ಹೊಸನಗರ-ನಿಟ್ಟೂರು ಮೂಲಕ ರಸ್ತೆ ಮಾರ್ಗದಲ್ಲಿ ಬರಬೇಕು. ಸಾಗರದಿಂದ ಜೋಗ-ಕಾರ್ಗಲ್ ಮಾರ್ಗ ಬಳಸಿ ಬರಬೇಕು. ಹದಿನೆಂಟು ವರ್ಷಗಳ ಹಿಂದೆ ಈ ತರಹದ ಸಂದರ್ಭ ಬಂದಿತ್ತು.
ಇನ್ನೊಬ್ಬ ಗ್ರಾಮಸ್ಥ ಪ್ರದೀಪ್ ಮಾತನಾಡಿ, ಸಾಗರದ ಸಿಗಂದೂರು ರಾಜ್ಯದ ಪ್ರಮುಖ ಪ್ರವಾಸಿ ತಾಣ. ಈಗಾಗಲೇ ಹಸಿರುಮಕ್ಕಿ ಲಾಂಚ್ ಸ್ಥಗಿತಗೊಂಡಿದೆ. ಇನ್ನು ವಾರದಲ್ಲಿ ಈ ಲಾಂಚ್ ಕೂಡ ನಿಲ್ಲುತ್ತೆ. ಸ್ಥಳೀಯರೂ ಓಡಾಡೋದು ಕಷ್ಟವಾಗಿರೋದ್ರಿಂದ ಸಿಗಂದೂರಿಗೆ ಬರುವ ಭಕ್ತರು ಬದಲಿ ಮಾರ್ಗ ಬಳಸಿ ಬರಬೇಕು ಎಂದರು.
