ಧಾರಾಕಾರ ಮಳೆ, ಧರೆ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ ಜೊತೆಗೆ ಪ್ರವಾಸಿಗರ ಹುಚ್ಚಾಟಗಳಿಗೆ ನಿರ್ಬಂಧ ಹೇರಲು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿಷೇಧ ಹೇರಿತ್ತು. ಆದರೆ ಮಳೆ ಒಮ್ಮೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡ ಕಾರಣ ಎಲ್ಲಾ ನಿರ್ಬಂಧಗಳನ್ನ ತೆರವು ಮಾಡಲಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠ ಸೇರಿ ಗಿರಿ ಪ್ರದೇಶದಗಳ ಭೇಟಿಗೆ ಕೈಮರ ಚೆಕ್‌ಪೋಸ್ಟ್ ಮೂಲಕ ವಾಹನಗಳನ್ನ ಇಂದಿನಿಂದ ಬಿಡಲಾಗುತ್ತಿದೆ.

ಜಿಲ್ಲಾಡಳಿತ ನಿರ್ಬಂಧ ತೆರೆವುಗೊಳಿಸಿದರೂ ಸಹ ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ಕಡಿಮೆಯಾಗಿಲ್ಲ. ಅಪಾಯದ ಸ್ಥಳದಲ್ಲಿ ಮೋಜು-ಮಸ್ತಿ ಜೋರಾಗಿದೆ. ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಜಲಪಾತದ ಬಳಿ ಹುಚ್ಚಾಟವಾಡದಂತೆ ಸೂಚನೆ ನೀಡಿದ್ದರೂ ಸಹ ಪ್ರವಾಸಿಗರ ಮೋಜು ಮಸ್ತಿ ಮುಂದುವರಿದಿದೆ. ಜಾರುವ ಬಂಡೆಯ ಮೇಲೆ ಪ್ರದರ್ಶನ ಭಯ ಮೂಡಿಸುತ್ತಿದೆ. ಕೊಲ್ಲೂರು ಬಳಿಯ ಅರಿಸಿನಗುಂಡಿ ಜಲಪಾತದಲ್ಲಿ ಶಿವಮೊಗ್ಗದ ಭದ್ರಾವತಿಯ ಶರತ್ ಕಾಲು ಜಾರಿ ಮೃತಪಟ್ಟ ನಂತರ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರವಾಸಿಗರಿಗೆ ಆಯಾ ಜಿಲ್ಲಾಡಳಿತಗಳು, ಅರಣ್ಯ ಇಲಾಖೆ ಸೂಚನೆಗಳನ್ನ ನೀಡಿತ್ತು. ಪಶ್ಚಿಮಘಟ್ಟ ಸಾಲಿನಲ್ಲಿ ಪ್ರವಾಸಿತಾಣಗಳಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಇಷ್ಟೆಲ್ಲಾ ಕ್ರಮಗಳನ್ನ ತೆಗೆದುಕೊಂಡರೂ ಸಹ ಪ್ರವಾಸಿಗರು ಪ್ರಬುದ್ಧರಾಗಿಲ್ಲ ಎಂಬುದೇ ಆತಂಕಕಾರಿ ಸಂಗತಿ.

ಇನ್ನು ಕಾಡಿನಲ್ಲಿ ಕಣ್ಮರೆಯಾಗಿದ್ದ ವ್ಯಕ್ತಿಯನ್ನ ಅರಣ್ಯ ಅಧಿಕಾರಿಗಳು ಎರಡು ದಿನಗಳ ನಂತರ ಹುಡುಕಿದ್ದಾರೆ. ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ, ಬಿಳಗುಳ ಗ್ರಾಮದ ಚಂದ್ರು ನಾಪತ್ತೆಯಾಗಿದ್ದರು.
ತೋಟಕ್ಕೆ ಕೆಲಸಕ್ಕೆ ಹೋಗಿ ಹಿಂತಿರುಗದ ಚಂದ್ರು ಆನೆ ದಾಳಿಗೆ ತುತ್ತಾಗಿರಬಹುದೆಂದು ಮನೆಯವರಲ್ಲಿ ಅನುಮಾನ ಮೂಡಿತ್ತು. ಆದರೆ ಕಾಡಿನಲ್ಲಿ ತಪ್ಪಿಸಿಕೊಂಡಿದ್ದ ಈತ ಎರಡು ದಿನಗಳ ಕಾಲ ಕಾಡಲ್ಲೇ ಉಳಿದಿದ್ದು ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿದ್ದಾನೆ.