
ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ (63) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಡಿಸಿಎಫ್, ಎಸಿಎಫ್ ಹಾಗೂ ಆರ್.ಎಫ್.ಓ. ವಿರುದ್ದ ಕೇಸ್ ದಾಖಲಾಗಿದೆ. ವೆಂಕಟೇಶ್ ಪುತ್ರ ಮಿಥುನ್‌ಕುಮಾರ್ ದೂರು ನೀಡಿದ್ದು ಸ್ಥಳದಲ್ಲಿದ್ದ ಡಿಸಿಎಫ್, ಎಸಿಎಫ್ ಹಾಗೂ ಆರ್‌ಎಫ್‌ಓಗಳು ಸೂಕ್ತ ಸುರಕ್ಷತಾ ಕ್ರಮ ನೀಡದೇ ನಿರ್ಲಕ್ಷ್ಯವಹಿಸಿ ನೇರವಾಗಿ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.
ದೂರಿನಲ್ಲಿ ಏನಿದೆ..?
‘ ನನ್ನ ತಂದೆಯಾದ ವೆಂಕಟೇಶ್ ಎಂಬುವರು ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಆಗಿದ್ದಾರೆ. ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಹಿಡಿಯುವ ಸಮಯದಲ್ಲಿ ಆನೆಗಳಿಗೆ ಬಂದೂಕಿನ ಮೂಲಕ ಅರಿವಳಿಕೆ ಚುಚ್ಚುಮದ್ದು ನೀಡಲು ನಮ್ಮ ತಂದೆ ಪರಿಣಿತರಾಗಿದ್ದರಿಂದ ಅವರನ್ನ ಕರೆಸಿಕೊಳ್ಳುತ್ತಿದ್ದರು. ದಿನಾಂಕ 31-8-2023 ರಂದು ಕೆ.ಹೊಸಕೋಟೆ ಹೋಬಳಿಯ ಹಳ್ಳಿಯೂರು ಗ್ರಾಮಕ್ಕೆ ಬಂದಿದ್ದ ಭೀಮ ಎಂಬ ಹೆಸರಿನ ಕಾಡಾನೆ ಹಿಡಿಯುವ ಕಾರ್ಯಾಚರಣೆಗೆ ಕರೆದುಕೊಂಡು ಹೋಗಿದ್ದರು. ಅದೇ ದಿನ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯದಲ್ಲಿ ಅವರಿಗೆ ಅರಣ್ಯ ಇಲಾಖೆಯ ಡಿಸಿಎಫ್, ಎಸಿ ಎಫ್, ಆರ್ ಎಫ್ ಓ ಹಾಗೂ ಅವರ ಇಲಾಖೆಯ ಇತರೆ ಅಧಿಕಾರಿಗಳು ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೇ ಹಾಗೂ ಮುಂಜಾಗ್ರತೆ ವಹಿಸದೇ ನಿರ್ಲಕ್ಷ ವಹಿಸಿ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಕಳಿಸಿದ್ದರು. ವ್ಯಾಘ್ರಗೊಂಡ ಆನೆ ಅವರ ಮೇಲೆ ದಾಳಿ ಮಾಡಿ ತುಳಿದಿದೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲಿಯೇ ಇದ್ದ ಅರಣ್ಯ ಇಲಾಖೆಯ ಇತರೆ ಸಿಬ್ಬಂದಿಗಳು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಅವರ ಸಾವಿಗೆ ನಿರ್ಲಕ್ಷ ವಹಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಫ್ಐಆರ್ ದಾಖಲಿಸಬೇಕು ಎಂದು ವೆಂಕಟೇಶ ಪುತ್ರ ಮಿಥುನ್ ಕುಮಾರ್ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಐಪಿಸಿ 3O4/A ಅಡಿಯಲ್ಲಿ ಅರಣ್ಯಾಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ.