Ode to the west wind

Join Us on WhatsApp

Connect Here

ಕಡಲಾಮೆ ಮೊಟ್ಟೆಗಳ ಸಂರಕ್ಷಣಾ ಸ್ಥಳಕ್ಕೆ ಸಚಿವ ಖಂಡ್ರೆ ಭೇಟಿ.

WhatsApp
Facebook
Twitter
LinkedIn

ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ  ಅರಣ್ಯ ಇಲಾಖೆ ಸಂರಕ್ಷಣೆ ಮಾಡಿರುವ ಆಲೀವ್ ರಿಡ್ಲೀ ( ಸಮುದ್ರ ಆಮೆ) ಮೊಟ್ಟೆಗಳ ಸ್ಥಳವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪರಿಶೀಲನೆ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸದಲ್ಲಿರುವ ಸಚಿವರು ತಡರಾತ್ರಿ ತಣ್ಣೀರು ಬಾವಿ ಅತಿಥಿ ಗೃಹಕ್ಕೆ ವಿಶ್ರಾಂತಿಗೆ ಆಗಮಿಸಿದಾಗ, ಅಧಿಕಾರಿಗಳು ತಣ್ಣೀರುಬಾವಿ ಬೀಚ್ ನಲ್ಲಿ ಅಪರೂಪದ  ಆಲೀವ್ ರಿಡ್ಲೀ ಆಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿದ್ದು, ಇದನ್ನು ಸಂರಕ್ಷಿಸಿರುವುದಾಗಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಚಿವರು ಪರಿಶೀಲಿಸಿ,  ಈ ಮೊಟ್ಟೆಗಳು ಮರಿಯಾದ ಬಳಿಕ ಸುರಕ್ಷಿತವಾಗಿ ಕಡಲಿಗೆ ಬಿಡುವಂತೆ ಸೂಚಿಸಿದರು.

ಈ ಅಪರೂಪದ ಆಮೆಗಳ ಮೊಟ್ಟೆ ನಾಯಿ ಮತ್ತು ಪಕ್ಷಿಗಳ ಪಾಲಾಗದಂತೆ ಸುತ್ತಲೂ ಕಟ್ಟೆ ಕಟ್ಟಿ ಸಂರಕ್ಷಿಸಿರುವ ಅರಣ್ಯ ಸಿಬ್ಬಂದಿಯ ಕಾಳಜಿ ಮತ್ತು ತಣ್ಣೀರು ಬಾವಿ ಕಡಲ ತೀರವನ್ನು ಅತ್ಯಂತ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಕೆ.ಎಸ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಳನ್ ಮತ್ತಿತರರು ಉಪಸ್ಥಿತರಿದ್ದರು. 

ಕರಾವಳಿ ನಿಯಂತ್ರಣ ವಲಯ ಉಲ್ಲಂಘನೆ ಕುರಿತಂತೆ ವರದಿ ಸಿದ್ಧಪಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮಂಗಳೂರು ವಲಯದ ಅರಣ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿಂದು ಪರಿಸರ ಮತ್ತು ಅರಣ್ಯ ಇಲಾಖೆಯ ಪರಾಮರ್ಶೆ ಸಭೆ ನಡೆಸಿದ ಸಚಿವರು, ಕರ್ನಾಟಕದ ಕರಾವಳಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿ ಇವುಗಳಲ್ಲಿ ನಿಯಮ ಉಲ್ಲಂಘಿಸಿರುವವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದ್ದಾರೆ.


ಮಂಗಳೂರು ವೃತ್ತದಲ್ಲಿ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು, ಒಂದೇ ಸರ್ವೆ ನಂಬರ್ ನಲ್ಲಿ ಸಾವಿರಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಇರುವ ಪ್ರದೇಶಗಳಲ್ಲಿ ತ್ವರಿತವಾಗಿ ಜಂಟಿ ಸರ್ವೆ ನಡೆಸಿ ಸಮಸ್ಯೆ ಪರಿಹರಿಸಲು ಸೂಚಿಸಿದರು.

ಮಂಗಳೂರು ವೃತ್ತದಲ್ಲಿ ಕಡಲಕೊರೆತ ತಡೆಯಲು ಕಾಂಡ್ಲಾ ವನ (ಮ್ಯಾಂಗ್ರೋ)ಬೆಳೆಸುವಂತೆ ಮತ್ತು ಕಡಲ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಶೇಖರಣೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು. ಚಾರಣಕ್ಕೆ ಏಕ ಗವಾಕ್ಷಿ ಯೋಜನೆ
ರಾಜ್ಯದಲ್ಲಿ ಚಾರಣಕ್ಕೆ ವಿಫುಲ ಅವಕಾಶವಿದ್ದು, ಪ್ರಕೃತಿ ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ಆನ್ ಲೈನ್ ಮೂಲಕ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಿ, ಏಕ ಗವಾಕ್ಷಿ ಯೋಜನೆಯಡಿ ಎಲ್ಲ ಚಾರಣ ಪಥಗಳನ್ನೂ ಅಭಿವೃದ್ಧಿಪಡಿಸುವಂತೆ ಮತ್ತು ಚಾರಣಿಗರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸುರಕ್ಷತೆ ಒದಗಿಸುವಂತೆ ಸೂಚಿಸಿದರು.
ಇದೇ ವೇಳೆ ಚಾರಣಕ್ಕೆ ಬರುವವರಿಂದ ಪರಿಸರಕ್ಕಾಗಲೀ, ಹುಲ್ಲುಗಾವಲಿನ ಗಿರಿಶಿಖರಗಳಿಗಾಗಲೀ ಅಥವಾ ಸಸ್ಯ ಪ್ರಭೇದ ಹಾಗೂ ಪ್ರಾಣಿ ಸಂಕುಲಕ್ಕೆ ತೊಂದರೆ ಆಗದ ರೀತಿಯಲ್ಲಿ ನಿಯಮ ರೂಪಿಸುವಂತೆ ಉನ್ನತಾಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದರು.

ತಣ್ಣೀರು ಬಾವಿಯ ಕಡಲ ತೀರದಲ್ಲಿ ಅಪರೂಪದ ಆಲಿವ್ ರಿಡ್ಲೀ ಕಡಲಾಮೆ ಮೊಟ್ಟೆ ಇಟ್ಟಿರುವುದನ್ನು ಪತ್ತೆ ಮಾಡಿ ಸಂರಕ್ಷಣೆಗೆ ನೆರವಾದ ಸಸಿ ಹಿತ್ಲು ಗ್ರಾಮದ ಮೀನುಗಾರರಾದ ಆನಂದ ಕೋಟ್ಯಾನ್ ಮತ್ತು ವಾಸು ಕೋಟ್ಯಾನ್ ಅವರಿಗೆ ಸಚಿವರು 5 ಸಾವಿರ ರೂಪಾಯಿಗಳ ಬಹುಮಾನ ಮತ್ತು ಪ್ರಶಂಸಾ ಪತ್ರ ಪ್ರದಾನ ಮಾಡಿದರು.
ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಬೈಕಂಪಾಡಿಯ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ಮತ್ತು ರಾಸಾಯನಿಕ ತ್ಯಾಜ್ಯ ಸಂಸ್ಕರಣೆ ಆಗದೆ ಫಲ್ಗುಣಿ ನದಿಯನ್ನು ಸೇರುತ್ತಿದೆ ಎಂಬ ಬಗ್ಗೆ ದೂರುಗಳಿದ್ದು, ಈ ಬಗ್ಗೆ ನಿಯಮಿತವಾಗಿ ನೀರಿನ ಗುಣಮಟ್ಟ ಪರೀಕ್ಷಿಸಿ ನಿಯಮ ಪಾಲಿಸದ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮತ್ಸ್ಯ ಸಂಸ್ಕರಣಾ ಘಟಕಗಳಿಂದ ದುರ್ನಾತ ಬರುತ್ತಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂಬ ದೂರುಗಳ ಬಗ್ಗೆಯೂ ಪರಾಮರ್ಶೆ ನಡೆಸಿದ ಸಚಿವರು, ಈ ಘಟಕಗಳಿಗೆ ಭೇಟಿ ನೀಡಿ, ಎಲ್ಲ ಘಟಕಗಳೂ ಪ್ರಮಾಣಿತ ಮಾನದಂಡಗಳನ್ನು ಪಾಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.
ಅರಣ್ಯ ಒತ್ತುವರಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವರು ಶುಂಠಿ ಬೆಳೆಯುವ ಹೆಸರಲ್ಲಿ 3 ಎಕರೆ 5 ಎಕರೆ ಭೂಮಿ ಗುತ್ತಿಗೆ ಪಡೆದು ಅಥವಾ ಖರೀದಿಸಿ ಸುತ್ತಮುತ್ತಲಿನ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ದೂರಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಲ ಕಾಲಕ್ಕೆ ಸ್ಯಾಟಲೈಟ್ ಚಿತ್ರಗಳ ಮೂಲಕ ಪರಿಶೀಲನೆ ನಡೆಸಿ, ಅರಣ್ಯನಾಶವಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಸೂಚಿಸಿದರು.

ಅದೇ ರೀತಿ 1978ರಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು 3 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಉಳಿಮೆ ಮಾಡುತ್ತಿರುವ ಮತ್ತು ಸಣ್ಣ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಜನರನ್ನು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸದಂತೆ ಮತ್ತು ಹತ್ತಾರು ಎಕರೆ ಭೂಮಿಯನ್ನು ಸ್ವಾರ್ಥಕ್ಕಾಗಿ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

You Might Also Like This