ಚಾಮರಾನಗರದ ನಂಜೆದೇವನಪುರ ಕಾಣಿಸಿಕೊಂಡಿರುವ ಐದು ಹುಲಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಮೊದಲು ಬೋನುಗಳನ್ನು ಅಳವಡಿಸಿ, ಅಗತ್ಯ ಬಿದ್ದರೆ ಮಾತ್ರ ಅರಿವಳಿಕೆ ನೀಡಿ ಸೆರೆ ಹಿಡಿಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದರು. ಹುಲಿಗಳು ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರು ಭಯಗೊಂಡಿದ್ದಾರೆ. ಜನರ ಜೀವ ಅಮೂಲ್ಯ. ಜೀವಹಾನಿ ಆಗಬಾರದು. ಜೊತೆಗೆ ವನ್ಯಜೀವಿಗಳಿಗೂ ತೊಂದರೆ ಆಗಬಾರದು. ಹುಲಿಗಳ ಚಲನವಲನದ ಮೇಲೆ ಡ್ರೋನ್, ಥರ್ಮಲ್ ಕ್ಯಾಮೆರಾ ಬಳಸಿ ನಿಗಾ ಇಡಬೇಕು. ಯಾವುದೇ ಖಚಿತ ಮಾಹಿತಿ ಗ್ರಾಮಸ್ಥರಿಗೆ ಕೂಡಲೇ ನೀಡಬೇಕು. ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತ ಆಗದಂತೆ ಕ್ರಮ ವಹಿಸಬೇಕು ಎಂದರು.
ಐದು ಹುಲಿಗಳ ಕಾರ್ಯಾಚರಣೆ ಸುಲಭದ ಕೆಲಸವಲ್ಲ. ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆದಂತಹ ಪ್ರಕರಣಗಳು ಮರುಕಳಿಸಬಾರದು. ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದರು.
ಹೆಚ್ಚುವರಿ ಆನೆ, ಪಶುವೈದ್ಯರ ನಿಯೋಜನೆಗೂ ಸೂಚನೆ:
ಐದು ಹುಲಿಗಳ ರಕ್ಷಣೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್ ಗಳನ್ನು ಸಹ ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳುವಂತೆಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟವಾಗಿ ತಿಳಿಸಿದರು.
ಜನರ ಜೀವ ಪರಮೋಚ್ಛ:
ಜನರ ಜೀವದ ಸುರಕ್ಷತೆ ಅತ್ಯಂತ ಮುಖ್ಯ, ಇದೇ ವೇಳೆ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು, ಸಿಬ್ಬಂದಿಯ ಸುರಕ್ಷತೆಗೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಜೊತೆಗೆ ಜನರು ಯಾರೂ ಕಾರ್ಯಾಚರಣೆ ಸ್ಥಳಕ್ಕೆ ಬಾರದಂತೆ ಸೆಕ್ಷನ್ 144 ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದರು.
ಚಿತ್ರ : ಹುಲಿಗಳನ್ನು ಹಿಡಿಯಲು ಬೋನ್ ಅಳವಡಿಕೆ

ಇ-ಗಸ್ತು ಹೆಚ್ಚಿಸಬೇಕು. ಎಲ್ಲ ಅರಣ್ಯ ಗಸ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಮೊಬೈಲ್ ನಲ್ಲಿ ಈ ಆಪ್ ಅಳವಡಿಸಿ, ಗಸ್ತಿನ ಮೇಲೆ ಕೇಂದ್ರ ಕಚೇರಿಯಿಂದ ನಿಗಾ ಇಡಬೇಕು. ಗಸ್ತಿನಲ್ಲಿ ಯಾವುದೇ ಲೋಪ ಆಗದಂತೆ ಪೂರ್ಣ ಪ್ರಮಾಣದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ಕಮಾಂಡ್ ಕೇಂದ್ರಗಳನ್ನು ವಿಳಂಬವಿಲ್ಲದೆ ಎಲ್ಲೆಡೆ ಕಾರ್ಯಾರಂಭ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗ ನಾವು ಕೈಗೊಳ್ಳುತ್ತಿರುವುದೆಲ್ಲವೂ ತಾತ್ಕಾಲಿಕ ಕ್ರಮಗಳಾಗಿದ್ದು, ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಅಧಿಕಾರಿಗಳು ತಜ್ಞರೊಂದಿಗೆ ಚರ್ಚಿಸಿ ರೂಪುರೇಶೆ ತಯಾರಿಸಿ ವರದಿ ಸಲ್ಲಿಸಲು ಸೂಚಿಸಿದರು.
ತುರುವೇಕೆರೆಯಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿ ಸಾವಿಗೆ ಕಾರಣವಾಗಿದ್ದ ಚಿರತೆ, ಮಹಿಳೆಯ ದೇಹದ ಮಾಂಸ ಭಕ್ಷಣೆ ಮಾಡಿರುವ ಕಾರಣ ಅದನ್ನು ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಹಿರಿಯ ಅಧಿಕಾರಿಗಳಾದ ಮನೋರ್ ರಾಜನ್, ಬಿಸ್ವಜಿತ್ ಮಿಶ್ರಾ ಮತ್ತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತಿತರರು ಪಾಲ್ಗೊಂಡಿದ್ದರು.








